ಮಂದಗತಿಯಲ್ಲಿರುವ ಆರ್ಥಿಕತೆಯ ಚೇತರಿಕೆಗೆ ಕೇಂದ್ರ ಹಣಕಾಸು ಸಚಿವಾಲಯ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಿಯಲ್ ಎಸ್ಟೇಟ್ ಚೇತರಿಕೆಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಭ ಸಮಾಚಾರ ನೀಡಿದ್ದಾರೆ.
ದೇಶದಲ್ಲಿ ಸ್ಥಗಿತಗೊಂಡಿರುವ ವಸತಿ ಯೋಜನೆಗಳನ್ನು ಪುನಾರಂಭಿಸಿ ಪೂರ್ಣಗೊಳಿಸಲು 25 ಸಾವಿರ ಕೋಟಿ ರುಪಾಯಿಗಳ ನಿಧಿಯನ್ನ ಸ್ಥಾಪಿಸಲು ಕ್ಯಾಬಿನೆಟ್ ತೀರ್ಮಾನಿಸಿದೆ. ಪ್ರಸ್ತುತ 1600ಕ್ಕೂ ಹೆಚ್ಚು ವಸತಿ ಯೋಜನೆಗಳು ಸ್ಥಗಿತಗೊಂಡಿವೆ. ಈ ಯೋಜನೆಗಳನ್ನು ಪೂರ್ಣಗೊಳಿಸಲು ಹಣಕಾಸು ನೆರವು ನೀಡುವುದು ಈ ನಿಧಿಯ ಉದ್ದೇಶವಾಗಿದೆ.

ನವದೆಹಲಿಯ ಶಾಸ್ತ್ರಿ ಭವನದ ಪಿಐಬಿ ಕಾನ್ಫರೆನ್ಸ್ ಹಾಲ್‌ನಲ್ಲಿ ಮಾದ್ಯಮ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಕ್ಯಾಬಿನೆಟ್ ನಿರ್ಧಾರಗಳನ್ನು ಮಾದ್ಯಮಗಳಿಗೆ ವಿವರಿಸಿದರು.
ಈ ಪರ್ಯಾಯ ಹೂಡಿಕೆ ನಿಧಿಯಲ್ಲಿ (ಎಐಎಫ್) ಕೇಂದ್ರ ಸರ್ಕಾರ 10 ಸಾವಿರ ಕೋಟಿ, ಎಸ್‌ಬಿಐ ಮತ್ತು ಎಲ್‌ಐಸಿ ಜೊತೆಯಾಗಿ 15 ಸಾವಿರ ಕೋಟಿ ತೊಡಗಿಸಲಿವೆ. 4.58 ಲಕ್ಷ ಮನೆಗಳನ್ನು ಒಳಗೊಂಡಿರುವ 1600 ಗೃಹ ನಿರ್ಮಾಣ ಯೋಜನೆಗಳನ್ನು ಪೂರ್ಣಗೊಳಿಸಲು ಈ ನಿಧಿಯನ್ನು ಬಳಸಲಾಗುತ್ತದೆ.
ಈ ಯೋಜನೆಯಿಂದಾಗಿ ಉದ್ಯೋಗ ಸೃಷ್ಠಿಯಾಗುವುದು. ಜೊತೆಗೆ ಕಬ್ಬಿಣ, ಉಕ್ಕು, ಸಿಮೆಂಟ್ ಬೇಡಿಕೆ ಹೆಚ್ಚಳಗೊಂಡು ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಳ ಬೇಡಿಕೆಗಳು ಪುನರುಜ್ಜೀವನ ಆಗಲಿವೆ. ಇದು ಆರ್ಥಿಕತೆಯ ಪ್ರಮುಖ ಕ್ಷೇತ್ರಗಳಲ್ಲಿನ ಸದ್ಯದ ಒತ್ತಡವನ್ನು ನಿವಾರಿಸುವ ಗುರಿಯನ್ನು ಹೊಂದಿದೆ.
ಇಲ್ಲಿ ಸರ್ಕಾರ ಪ್ರಾಯೋಜಕರಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು 10 ಸಾವಿರ ಕೋಟಿ ರುಪಾಯಿ ನಿಧಿಯನ್ನು ಪರಿಹಾರವಾಗಿ ನೀಡುತ್ತದೆ. ಇದು ವಸತಿ ಕಟ್ಟಡ ಅಭಿವೃದ್ಧಿದಾರರಿಗೆ ಅನುಕೂಲ ಕಲ್ಪಿಸಲಿದ್ದು, ಮನೆ ಖರೀದಿದಾರರಿಗೆ ಮನೆಗಳ ವಿತರಣೆಯ ಖಚಿತತೆ ಸಿಗಲಿದೆ.
ಕೇಂದ್ರ ಸರ್ಕಾರದ ಈ ಯೋಜನೆಯಿಂದ ಮನೆ ಖರೀದಿದಾರರಿಗೆ ಭಾರೀ ಪ್ರಯೋಜನವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಈ ಮಹತ್ವದ ಘೋಷಣೆಯಿಂದ ರಿಯಲ್ ಎಸ್ಟೇಟ್ ಉದ್ಯಮ ಕ್ಷೇತ್ರವು ಮತ್ತೆ ಚೇತರಿಸಿಕೊಳ್ಳುವ ಆಶಾವಾದ ವ್ಯಕ್ತವಾಗಿದೆ.


Click it and Unblock the Notifications