ನೂತನ ಕರ್ನಾಟಕ ಸರ್ಕಾರ ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಆ ಪೈಕಿ ಗೃಹ ಜ್ಯೋತಿ ಯೋಜನೆ ಕೂಡಾ ಒಂದಾಗಿದೆ. ಗೃಹಜ್ಯೋತಿ ಯೋಜನೆಯು ರಾಜ್ಯದಲ್ಲಿ ಹಲವಾರು ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಾಗಿದ್ದು ಜೂನ್ 18ರಿಂದ ಗೃಹ ಜ್ಯೋತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಕೆ ಆರಂಭವಾಗಿ ಈಗಾಗಲೇ ಒಂದು ತಿಂಗಳು ಕಳೆದಿದೆ. ಈಗ ನೋಂದಣಿಗೆ ಕೊನೆ ದಿನಾಂಕ ಸಮೀಪಿಸಿದೆ.
ಆರಂಭಿಕವಾಗಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಆರಂಭದ ದಿನವನ್ನು ಘೋಷಣೆ ಮಾಡಲಾಗಿದ್ದರೂ ಕೊನೆಯ ದಿನಾಂಕವನ್ನು ಘೋಷಣೆ ಮಾಡಿರಲಿಲ್ಲ. ಆದರೆ ಇತ್ತೀಚೆಗೆ ಸರ್ಕಾರವು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಘೋಷಣೆ ಮಾಡಿದೆ. ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಜುಲೈ 27 ಅಂತಿಮ ದಿನಾಂಕವಾಗಿದೆ. ಅಂದರೆ ಇಂದೇ ಕೊನೆಯ ದಿನಾಂಕವಾಗಿದೆ.

ಕಲಾಪದಲ್ಲಿ ಮಾಹಿತಿ ನೀಡಿದ್ದ ಸಚಿವರು
ಜುಲೈ 12ರಂದು ಇಂಧನ ಸಚಿವ ಕೆ. ಜೆ. ಜಾರ್ಜ್ ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಗೃಹಜ್ಯೋತಿ' ಯೋಜನೆ ಕುರಿತಂತೆ ನಡೆದ ಚರ್ಚೆಯ ವೇಳೆ ಸಚಿವರು ನೋಂದಣಿ ಮಾಡದ ಗ್ರಾಹಕರು ಬೇಗ ಅರ್ಜಿ ಸಲ್ಲಿಸಿ ಎಂದಿದ್ದಾರೆ. ಹಾಗೆಯೇ "ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಮೊದಲು ಕೊನೆಯ ದಿನಾಂಕವನ್ನು ನಿಗದಿಪಡಿಸಿರಲಿಲ್ಲ. ಈಗ, ಕೊನೆಯ ದಿನಾಂಕವನ್ನು ನಿಗದಿಪಡಿಸಲು ನಿರ್ಧರಿಸಿದ್ದೇವೆ. ಅದರಂತೆ, ಜುಲೈ 27ರಂದು ಅರ್ಜಿ ಸಲ್ಲಿಕೆಗೆ ಕಡೆಯ ದಿನವಾಗಿರುತ್ತದೆ," ಎಂದು ಸಚಿವರು ತಿಳಿಸಿದ್ದಾರೆ.
ನೀವು ಇಂದು ಕೂಡಾ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲವೇ? ಆದರೆ ನೀವು ಸರ್ಕಾರ ನೀಡಿದ ಗಡುವಿನೊಳಗೆ ಅರ್ಜಿ ಸಲ್ಲಿಕೆ ಮಾಡದಿದ್ದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಯಾಕೆಂದರೆ ಸರ್ಕಾರವು, "ಯೋಜನೆ ವ್ಯಾಪ್ತಿಯಿಂದ ಹೊರಗುಳಿದವರನ್ನು ಯೋಜನೆಯೊಳಕ್ಕೆ ತರಲು ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕದ ನಂತರ ಎರಡು ತಿಂಗಳವರೆಗೆ ವಿದ್ಯುತ್ ಅದಾಲತ್ ನಡೆಸಲಾಗುವುದು," ಎಂದು ತಿಳಿಸಿದೆ.
ಈ ಯೋಜನೆಗೆ ಮೊದಲ ದಿನವೇ ಸುಮಾರು 55 ಸಾವಿರ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ. ಜುಲೈ 13ರ ಲೆಕ್ಕಾಚಾರದಂತೆ ನೋಡಿದಾಗ ಒಂದು ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಯೋಜನೆ ಆಗಸ್ಟ್‌ನಲ್ಲಿ ಜಾರಿಗೆ ಬರಲಿದೆ. ನೀವು ಜುಲೈ 25ರ ಒಳಗೆ ಅರ್ಜಿ ಸಲ್ಲಿಸಿದರೆ ನಿಮಗೆ ಆಗಸ್ಟ್‌ನಿಂದ ಉಚಿತ ವಿದ್ಯುತ್ ಲಭ್ಯವಾಗಲಿದೆ. ಆನ್‌ಲೈನ್ ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಉಚಿತವಾಗಿದೆ.
ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠವಾಗಿ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಅನ್ನು ನೀಡಲಾಗುತ್ತದೆ. ಸರಾಸರಿ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಮಾಸಿಕವಾಗಿ 500ರಿಂದ 1200 ರೂಪಾಯಿ ವಿದ್ಯುತ್ ಬಿಲ್ ಬರುವವರಿಗೆ ಇದು ಲಾಭವಾಗಲಿದೆ. ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಮಂಗಳೂರುಒನ್, ವಿದ್ಯುತ್ ಇಲಾಖೆ ಕಚೇರಿಗಳಲ್ಲಿ ಕೂಡ ಅರ್ಜಿಯನ್ನು ನೋಂದಣಿ ಮಾಡಲಾಗುತ್ತಿದೆ. ಇನ್ನು ಕೆಲವು ನಕಲಿ ಸೈಟ್‌ಗಳು ಕೂಡಾ ಕಾಣಿಸಿಕೊಂಡಿದ್ದು ಈ ಬಗ್ಗೆ ಜಾಗರೂತರಾಗಿರುವಂತೆ ಸರ್ಕಾರವು ಈಗಾಗಲೆ ತಿಳಿಸಿದೆ.
ಅರ್ಜಿ ಸಲ್ಲಿಸಿದ ಬಳಿಕ ಸ್ಟೇಟಸ್ ತಿಳಿಯಿರಿ
ಹಂತ 1: https://sevasindhugs.karnataka.gov.in/ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಹಂತ 2: 'ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ' ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: Track Your Application Status ಎಂದು ಕಾಣಲಿದೆ
ಹಂತ 4: ನಿಮ್ಮ ಎಸ್ಕಾಂ ಯಾವುದು ಎನ್ನುವ ಆಯ್ಕೆ ಕಾಣಿಸುತ್ತದೆ ಅಲ್ಲಿ ನಿಮ್ಮ ಎಸ್ಕಾಂ ಆಯ್ಕೆ ಮಾಡಿಕೊಳ್ಳಿ.
ಹಂತ 5: ವಿದ್ಯುತ್ ಬಿಲ್‌ನಲ್ಲಿರುವ ಖಾತೆ ಸಂಖ್ಯೆ ಅಥವಾ ಅಕೌಂಟ್ ಐಡಿಯನ್ನು ನಮೂದಿಸಿ
ಹಂತ 6: Check Status ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಪ್ರಕ್ರಿಯೆ ಸಂಪೂರ್ಣವಾಗಲಿದೆ.
ಗೃಹ ಬಳಕೆಗೆ ಮಾತ್ರ ಬಳಕೆ ಮಾಡಲಾಗುವ ವಿದ್ಯುತ್ ಮಾತ್ರ ಉಚಿತವಾಗಿರುತ್ತದೆ. ಒಂದು ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಉದ್ದೇಶಕ್ಕೆ ವಿದ್ಯುತ್ ಬಳಸಿರುವುದು ಗಮನಕ್ಕೆ ಬಂದರೆ ಪ್ರಯೋಜನವನ್ನು ಸ್ವಯಂಚಾಲಿತವಾಗಿ ಮುಟ್ಟುಗೋಲು ಹಾಕಲಾಗುತ್ತದೆ. ಈ ಬಗ್ಗೆ ಅರ್ಜಿ ಸಲ್ಲಿಸುವಾಗಲೇ ನಾವು ದೃಢೀಕರಿಸುವುದು ಮುಖ್ಯವಾಗಿದೆ.


Click it and Unblock the Notifications