ಗೃಹಲಕ್ಷ್ಮಿ ನೋಂದಣಿಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ ಎಂಬ ಇಲಾಖೆಯ ಟ್ವೀಟ್ ವೈರಲ್ ಆಗಿದ್ದು ಗೊಂದಲಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುರುವಾರ ವಿಧಾನಸೌಧದಲ್ಲಿ ಸಭೆ ಕರೆದಿದ್ದಾರೆ. ಗೃಹಲಕ್ಷ್ಮಿ ನೋಂದಣಿ ನಿಲ್ಲಿಸಲಾಗಿದೆ ಎಂಬ ಟ್ವೀಟ್ ಡಿಲೀಟ್ ಮಾಡಿದರೂ ಸಚಿವರು ಮಧ್ಯ ಪ್ರವೇಶಿಸಿ ನೋಂದಣಿ ಪ್ರಕ್ರಿಯೆ ನಿಲ್ಲಿಸಿಲ್ಲ ಎಂದು ಸ್ಪಷ್ಟಪಡಿಸಿದರು.
"ಗೃಹ ಲಕ್ಷ್ಮಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿ ಜಮೆ ಮಾಡುವ ಪ್ರಕ್ರಿಯೆಯಲ್ಲಿ ಗೊಂದಲವನ್ನು ತಪ್ಪಿಸಲು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ, ಮತ್ತು ಶೀಘ್ರದಲ್ಲೇ ಈ ಯೋಜನೆಯ ನೋಂದಣಿಯನ್ನು ಶೀಘ್ರದಲ್ಲೇ ಪುನರಾರಂಭಿಸಲಾಗುವುದು," ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಟ್ವೀಟ್ ಹೇಳಿದೆ.

ಮೊದಲ ಕಂತನ್ನು ಫಲಾನುಭವಿಗಳಿಗೆ ವರ್ಗಾಯಿಸುವವರೆಗೆ ಹೊಸ ದಾಖಲಾತಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ. "ಟ್ವೀಟ್ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುವವರ ತಪ್ಪಿನ ಪರಿಣಾಮವಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮತ್ತು ನೋಟಿಸ್ ಜಾರಿ ಮಾಡಲಾಗಿದೆ," ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಹೆಬ್ಬಾಳ್ಕರ್ ವಿಧಾನಸೌಧದಲ್ಲಿ ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಸಿದರು.
1.26 ಕೋಟಿ ಮಹಿಳೆಯರು ಗೃಹ ಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳುವ ಗುರಿಯನ್ನು ಹೊಂದಲಾಗಿದ್ದು, ಆದರೆ ಸುಮಾರು 1.12 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. ಬುಧವಾರ ರಾತ್ರಿಯವರೆಗೆ ಪ್ರಕ್ರಿಯೆ ನಡೆದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
"ಸರ್ಕಾರವು ಈಗಾಗಲೇ 1.08 ಕೋಟಿ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆಯ ಮೂಲಕ ತಲಾ 2,000 ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಈ ಮೊತ್ತವು 63 ಲಕ್ಷ ಬ್ಯಾಂಕ್ ಖಾತೆಗಳಿಗೆ ತಲುಪಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಬ್ಯಾಂಕ್‌ಗಳಿಂದ ದಿನಕ್ಕೆ 25 ಲಕ್ಷ ಖಾತೆಗಳಿಗೆ ಹಣ ಜಮಾ ಆಗಬೇಕಿತ್ತು, ಆದರೆ 10-15 ಲಕ್ಷ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ. ನಾಲ್ಕೈದು ದಿನಗಳಲ್ಲಿ ಎಲ್ಲ ಫಲಾನುಭವಿಗಳ ಖಾತೆಗೆ ತಲುಪಲಿದೆ," ಎಂದು ಭರವಸೆ ನೀಡಿದರು.
ಈ ಯೋಜನೆಯ ಮಾರ್ಗಸೂಚಿ, ಮಾನದಂಡಗಳು
* ಈ ಯೋಜನೆಯ ಫಲಾನುಭವಿಗಳು 2023ರ ಜುಲೈ 19 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಯ್ಕೆಗೊಂಡ ಫಲಾನುಭವಿಗಳಿಗೆ ಆಗಸ್ಟ್‌ನಲ್ಲಿ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
* ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ನೀಡುವ ಅಂತ್ಯೋದರ, ಬಿಪಿಎಲ್, ಎಪಿಎಲ್ ಪಡಿತ ಚೀಟಿಗಳಲ್ಲಿ ಕುಟುಂಬದ ಯಾಜಮಾನಿ ಎಂದು ಮಹಿಳೆಯನ್ನು ಗುರುತಿಸಲಾಗಿದ್ದರೆ ಮಾತ್ರ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿದ್ದಾರೆ.
* ಒಂದು ಕುಟುಂಬದಲ್ಲಿ ಒಂದಕ್ಕಿಂತ ಅಧಿಕ ಮಹಿಳೆಯರು ಇದ್ದರೆ ಎಲ್ಲರಿಗೂ ಈ ಯೋಜನೆಯ ಲಾಭ ಲಭ್ಯವಾಗುವುದಿಲ್ಲ. ಮನೆಯ ಯಜಮಾನಿ ಎಂದು ಗುರುತಿಸಲ್ಪಟ್ಟ ಒಬ್ಬರಿಗೆ ಮಾತ್ರ ಈ ಯೋಜನೆಯ ಮೂಲಕ ಎರಡು ಸಾವಿರ ರೂಪಾಯಿ ಲಭ್ಯವಾಗುತ್ತದೆ.
* ಆನ್‌ಲೈನ್ ಆಪ್, ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರು ಈ ಅರ್ಜಿ ಸಲ್ಲಿಸುವ ಕಾರ್ಯವನ್ನು ಮಾಡುತ್ತಿದ್ದು, ಅವರ ಸಹಾಯ ಪಡೆಯಬಹುದಾಗಿದೆ.
* ಆರಂಭದಲ್ಲಿ ಯೋಜನೆಯ ಲಾಭ ಪಡೆಯಬೇಕಾದರೆ ಫಲಾನುಭವಿಗಳ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ ಈಗ ಕಡ್ಡಾಯವಲ್ಲ ಎಂದು ಸರ್ಕಾರ ತಿಳಿಸಿದೆ.
* ನೀವು ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಅನುಮೋದನೆಯಾಗಿ ನಿಮಗೆ ಆಗಸ್ಟ್‌ನಲ್ಲಿ ಹಣ ಲಭ್ಯವಾಗಬಹುದು. ಆದರೆ ಬಳಿಕ ನೀವು ಸಲ್ಲಿಸಿದ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ ನೀವು ನಕಲಿ ದಾಖಲೆ ಸಲ್ಲಿಸಿರುವುದು ಖಚಿತವಾದರೆ, ಅಥವಾ ನೀವು ತಪ್ಪು ಮಾಹಿತಿ ನೀಡಿದ್ದರೆ, ನಿಮಗೆ ನೀಡಿದ ಹಣವನ್ನು ಹಿಂಪಡೆಯಲಾಗುತ್ತದೆ. ಹಾಗೆಯೇ ನಿಮ್ಮ ವಿರುದ್ಧ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಾಗುತ್ತದೆ.


Click it and Unblock the Notifications