ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಎಸ್ ಟಿ ಸಮಿತಿ ಸಭೆಯಲ್ಲಿ ರಾಜ್ಯಗಳಿಗೆ ಆದಾಯ ನಷ್ಟ ಪರಿಹಾರ ವಿಚಾರದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಆದ್ದರಿಂದ ಸಭೆಯನ್ನು ಮುಂದಿನ ವಾರಕ್ಕೆ (ಅಕ್ಟೋಬರ್ 12, 2020) ಮುಂದೂಡಲಾಯಿತು.
ಈ ವರ್ಷದಲ್ಲಿ ಇಲ್ಲಿಯವರೆಗೆ ಸಂಗ್ರಹ ಆಗಿರುವ ಪರಿಹಾರದ ಸೆಸ್ 20,000 ಕೋಟಿ ರುಪಾಯಿಯನ್ನು ಇಂದು ರಾತ್ರಿ (ಅಕ್ಟೋಬರ್ 5) ಎಲ್ಲ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುವುದು. ಇನ್ನು 20017- 18ನೇ ಸಾಲಿನ ಇಂಟಿಗ್ರೇಟೆಡ್ ಜಿಎಸ್ ಟಿ 25 ಸಾವಿರ ಕೋಟಿ ರುಪಾಯಿಯನ್ನು ಮುಮ್ದಿನ ವಾರದ ಕೊನೆ ಹೊತ್ತಿಗೆ ಬಿಡುಗಡೆ ಮಾಡಲಾಗುವುದು. ಈ ಹಿಂದೆ ಕಡಿಮೆ ಪಡೆದಂಥ ರಾಜ್ಯಗಳು ಅದನ್ನು ಪಡೆಯುತ್ತವೆ ಎಂದು ಅವರು ಹೇಳಿದರು.
ಐದು ವರ್ಷದ ಅವಧಿಗೆ, ಅಂದರೆ 2022ರ ಜೂನ್ ತನಕ ಹಾಕಬೇಕು ಎಂದಿಕೊಂಡಿದ್ದ ಜಿಎಸ್ ಟಿ ಪರಿಹಾರ ಸೆಸ್ ಅನ್ನು ಅದರ ಆಚೆಗೂ ವಿಸ್ತರಿಸುವ ಪ್ರಸ್ತಾವ ಬಂತು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಇನ್ನೂ ಲೆಕ್ಕಾಚಾರಗಳು ಆಗಬೇಕಿದೆ ಎಂದು ತಿಳಿಸಲಾಗಿದೆ.

"ಕೇಂದ್ರ ಸರ್ಕಾರದಿಂದ ಸಾಲ ಮಾಡಿ, ನಿಯಮಾನುಸಾರ ರಾಜ್ಯಗಳಿಗೆ ಪಾವತಿ ಮಾಡಬೇಕಾದ ಪರಿಹಾರ ಮೊತ್ತವನ್ನು ನೀಡಬೇಕು ಎಂದು ಹತ್ತು ರಾಜ್ಯಗಳು ಒತ್ತಾಯಿಸಿದವು," ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳನ್ನು ಹುಡುಕುವುದಕ್ಕೆ ಅಂತಲೇ ಸಮಯ ವ್ಯರ್ಥ ಮಾಡದೆ ಅಗತ್ಯ ಇರುವ ಹಣಕಾಸು ಸಂಪನ್ಮೂಲವನ್ನು ವ್ಯವಸ್ಥೆ ಮಾಡುವುದಕ್ಕೆ ಕೇಂದ್ರ ಪ್ರಯತ್ನಿಸಬೇಕು ಎಂದು ಬಿಹಾರದ ಡಿಸಿಎಂ ಸುಶೀಲ್ ಮೋದಿ ಹೇಳಿದ್ದಾರೆ. ಇನ್ನು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳ ಮುಂದೆ ಇಟ್ಟಿದ್ದ ಎರಡು ಸಾಲ ಯೋಜನೆಗಳ ಪ್ರಸ್ತಾವವನ್ನೂ ಕೇರಳ ತಿರಸ್ಕರಿಸಿದೆ.


Click it and Unblock the Notifications