ಗ್ರಾಹಕರೇ ನೀವು ಮಳಿಗೆಗಳಲ್ಲಿ, ಮಾಲ್‌ಗಳಲ್ಲಿ ಏನಾದರೂ ವಸ್ತುಗಳನ್ನು ಖರೀದಿಸಿದರೆ, ಅಥವಾ ಸೇವೆಯನ್ನು ಪಡೆದರೆ ಬಿಲ್ ಕೇಳಲು ಮರೆಯದಿರಿ. ಏಕೆಂದರೆ ಜಿಎಸ್‌ಟಿ ಲಾಟರಿಯನ್ನು ಈಗಿರುವ 10 ಲಕ್ಷದಿಂದ 1 ಕೋಟಿ ರುಪಾಯಿ ಏರಿಕೆಗೆ ಸರ್ಕಾರ ಚಿಂತನೆ ನಡೆಸಿದೆ.
ಗ್ರಾಹಕರು ತಾವು ಖರೀದಿಸಿದ ವಸ್ತುಗಳ ಬಿಲ್ ಕೇಳಲು ಉತ್ತೇಜಿಸುವ ಉದ್ದೇಶದಿಂದ ಜಿಎಸ್‌ಟಿ ಅಡಿಯಲ್ಲಿ ಕೊಡುಗೆಗಳನ್ನು 10 ಲಕ್ಷದಿಂದ 1 ಕೋಟಿ ರು. ಏರಿಕೆಗೆ ಈಗಾಗಲೇ ಸರ್ಕಾರ ಚಿಂತನೆ ನಡೆಸುತ್ತಿದೆ. ಜಿಎಸ್‌ಟಿ ಅಡಿಯಲ್ಲಿ ಬಿಲ್ ಪಡೆಯುವ ಗ್ರಾಹಕರಿಗೆ ಲಾಟರಿ ಗೆಲ್ಲವು ಅವಕಾಶವನ್ನು ಸರ್ಕಾರ ಒದಗಿಸುತ್ತಿದೆ.

''ನಾವು ಹೊಸ ಲಾಟರಿ ವ್ಯವಸ್ಥೆ ಪರಿಚಯಿಸಲು ಯೋಜಿಸಿದ್ದೇವೆ. ಜಿಎಸ್‌ಟಿ ಅಡಿಯಲ್ಲಿ ಪ್ರತಿ ಬಿಲ್ ಸಹ ಲಾಟರಿ ಟಿಕೆಟ್‌ನಂತೆ ಇರಲಿದೆ. ಇದು ಡ್ರಾಗೆ ಹೋಗಲಿದ್ದು ಇದಕ್ಕೆ ಬಹುಮಾನವಾಗಿ 1 ಕೋಟಿ ಗೆಲ್ಲುವ ಅವಕಾಶ ಒದಗಿಸಲಾಗುವುದು. ಇದು ಗ್ರಾಹಕರ ನಡವಳಿಕೆಯನ್ನು ಬದಲಿಸುವ ಪ್ರಯತ್ನವಾಗಿದೆ. '' ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್(ಸಿಬಿಐಸಿ) ಸದಸ್ಯ ಜಾನ್ ಜೋಸೆಫ್ ಹೇಳಿದ್ದಾರೆ.
ಈ ಲಾಟರಿ ಯೋಜನೆಯ ಪ್ರಕಾರ, ಖರೀದಿಸಿದ ಬಿಲ್ ಅನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಡ್ರಾ ಸ್ವಯಂಚಾಲಿತವಾಗಿ ನಡೆಯುವುದಲ್ಲದೆ ವಿಜೇತರಿಗೆ ಅದರ ಮಾಹಿತಿ ಲಭಿಸಲಿದೆ. ಜಿಎಸ್‌ಟಿ ಅಡಿಯಲ್ಲಿ ನಾಲ್ಕು ರೀತಿಯಲ್ಲಿ ತೆರಿಗೆ ವಿಧಿಸಲಾಗುವುದು. 5, 12, 18 ಮತ್ತು 28 ಪರ್ಸೆಂಟ್ ತೆರಿಗೆಯನ್ನು ಸರಕು ಮತ್ತು ಸೇವೆಗಳಲ್ಲಿ ವಿಧಿಸಲಾಗುತ್ತದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಸಹವರ್ತಿಗಳನ್ನು ಒಳಗೊಂಡ ಜಿಎಸ್‌ಟಿ ಕೌನ್ಸಿಲ್ ಪ್ರಸ್ತಾವಿತ ಲಾಟರಿ ಯೋಜನೆ ಪರಿಶೀಲನೆ ನಡೆಸಲಿದೆ.


Click it and Unblock the Notifications