ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಹೊಸ ರಾಷ್ಟ್ರೀಯ ಆಟೋಮೊಬೈಲ್ ಸ್ಕ್ರಾಪಿಂಗ್ ನೀತಿಯನ್ನು ಪ್ರಾರಂಭಿಸಿದ್ರು. ಈ ಮೂಲಕ ಮಿತಿಮೀರುತ್ತಿರುವ ಮಾಲಿನ್ಯ ಮತ್ತು ಇಂಧನ ಬಳಕೆ ಕಡಿಮೆ ಮಾಡುವ ಸಲುವಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಲು, ಮೋಟಾರು ವಾಹನಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲು ಈ ಕಾಯ್ದೆ ಅನಿವಾರ್ಯವಾಗಿತ್ತು.
ಈ ನೂತನ ಸ್ವಯಂಪ್ರೇರಿತ ಸ್ಕ್ರಾಪಿಂಗ್ ನಿಯಮದಂತೆ ಖಾಸಗಿ ವಾಹನಗಳನ್ನು 20 ವರ್ಷ ಹಳೆಯ ಖಾಸಗಿ ವಾಹನಗಳನ್ನು ಮತ್ತು 15ವರ್ಷಗಳ ಹಳೆಯ ವಾಣಿಜ್ಯ ಬಳಕೆ ವಾಹನಗಳನ್ನು ಸಂಪೂರ್ಣ ಪರಿಶೀಲನೆಗೆ ಒಡ್ಡಬೇಕು. ಅದರಲ್ಲಿ ಅವುಗಳ ಸಾಮರ್ಥ್ಯ ಕುಂದಿದ್ದು ಕಂಡುಬಂದರೆ ಸ್ವಯಂಪ್ರೇರಣೆಯಿಂದ ಮಾಲೀಕರು ಗುಜರಿಗೆ ಹಾಕಲೇಬೇಕಾಗುತ್ತದೆ. ವಾಹನಗಳ ಹೊಸ ಸ್ಕ್ರಾಪಿಂಗ್ ನೀತಿ ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ವಾಹನಗಳನ್ನು ಉತ್ತೇಜಿಸುತ್ತದೆ ಹಾಗೇ ದೇಶದ ಆಮದು ಶುಲ್ಕವನ್ನು ದೊಡ್ಡಮಟ್ಟದಲ್ಲಿ ಕಡಿತಗೊಳಿಸುತ್ತದೆ.
ಇದರ ಜೊತೆಗೆ ಹಳೆಯ ವಾಹನಗಳ ನೋಂದಣಿ ನವೀಕರಣ ನಿಯಮ 2022ರ ಏಪ್ರಿಲ್ ತಿಂಗಳಿನಿಂದ ಜಾರಿಯಾಗುವುದು ಅಧಿಕೃತವಾಗಿದೆ. 15 ವರ್ಷಗಳಿಗೂ ಹೆಚ್ಚು ಹಳೆಯದಾದ ವಾಹನಗಳ ನೋಂದಣಿ ನವೀಕರಣಕ್ಕೆ ವಾಹನ ಮಾಲೀಕರು ಇನ್ನು ಮುಂದೆ ಎಂಟು ಪಟ್ಟು ಹೆಚ್ಚು ಹಣ ತೆರಬೇಕಾಗುತ್ತದೆ.
ಅದೇ ರೀತಿ ವಾಣಿಜ್ಯ ಬಳಕೆಯ ಭಾರಿ ವಾಹನಗಳ ಮಾಲೀಕರು ಟ್ರಕ್ ಅಥವಾ ಬಸ್‌ಗಳ ಫಿಟ್ನೆಸ್ ಪತ್ರ ನವೀಕರಣ ಮಾಡಿಸಿಕೊಳ್ಳಲು ಸುಮಾರು ಎಂಟು ಪಟ್ಟು ಅಧಿಕ ದರವನ್ನು ಪಾವತಿಸಬೇಕಾಗಲಿದೆ. ಮುಂದಿನ ವರ್ಷದಿಂದ ಹೊಸ ನಿಯಮ ಜಾರಿಗೊಳಿಸಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆ ಪ್ರಕಾರ, 15 ವರ್ಷಗಳಷ್ಟು ಹಳೆಯದಾದ ಕಾರಿನ ನೋಂದಣಿ ನವೀಕರಣಕ್ಕೆ ಮುಂದಿನ ವರ್ಷದಿಂದ 5,000 ರೂಪಾಯಿ ಪಾವತಿ ಮಾಡಬೇಕಾಗಿದೆ. ಪ್ರಸ್ತುತ ಅದರ ದರ 600 ರೂಪಾಯಿ ಇದೆ. ಅದೇ ರೀತಿ ಹಳೆ ಬೈಕುಗಳ ನೋಂದಣಿ ನವೀಕರಣಕ್ಕೆ 300 ರೂಪಾಯಿ ಪ್ರಸ್ತುತ ದರವಿದ್ದು, ಅದು 1,000 ರೂಪಾಯಿಗೆ ಹೆಚ್ಚಲಿದೆ.
15 ವರ್ಷ ಮೇಲ್ಪಟ್ಟು ಹಳೆಯದಾದ ಬಸ್‌ಗಳು ಮತ್ತು ಟ್ರಕ್‌ಗಳ ಫಿಟ್ನೆಸ್ ಸರ್ಟಿಫಿಕೇಟ್ ನವೀಕರಣಕ್ಕೆ ಪ್ರಸ್ತುತ 1,500 ರೂಪಾಯಿ ವಿಧಿಸಲಾಗುತ್ತಿದೆ. ಆದರೆ ಅದು 12,500 ರೂಪಾಯಿಗೆ ಹೆಚ್ಚಲಿದೆ. ಖಾಸಗಿ ವಾಹನಗಳ ನೋಂದಣಿ ನವೀಕರಣದಲ್ಲಿ ವಿಳಂಬವು ಪ್ರತಿ ತಿಂಗಳೂ 300 ರೂಪಾಯಿ ಮತ್ತು ವಾಣಿಜ್ಯ ವಾಹನಗಳಿಗೆ 500 ರೂಪಾಯಿ ದಂಡಕ್ಕೆ ಆಹ್ವಾನ ನೀಡಲಿದೆ. ಹಾಗೆಯೇ ವಾಣಿಜ್ಯ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ನವೀಕರಣ ವಿಳಂಬವಾದರೆ ಪ್ರತಿ ದಿನ 50 ರೂಪಾಯಿ ದಂಡ ತೆರಬೇಕಾಗುತ್ತದೆ.
ಖಾಸಗಿ ವಾಹನಗಳಲ್ಲಿ ಮಾಲೀಕರು 15 ವರ್ಷದ ಬಳಿಕ ಪ್ರತಿ ವರ್ಷ 5 ವರ್ಷಕ್ಕೊಮ್ಮೆ ನೋಂದಣಿ ನವೀಕರಣ ಮಾಡಬೇಕು. ಹಾಗೆಯೇ, ವಾಣಿಜ್ಯ ವಾಹನವು ಒಮ್ಮೆ ಎಂಟು ವರ್ಷ ಪೂರೈಸಿದ ಬಳಿಕ ಪ್ರತಿ ವರ್ಷ ಫಿಟ್ನೆಸ್ ಪ್ರಮಾಣ ಪತ್ರವನ್ನು ನವೀಕರಿಸುವುದು ಕಡ್ಡಾಯವಾಗಲಿದೆ.
2023 ರಿಂದ, ಭಾರೀ ವಾಣಿಜ್ಯ ವಾಹನಗಳು ನಿಯಮಗಳ ಅಡಿಯಲ್ಲಿ ಸೂಚಿಸಲಾದ ಫಿಟ್ನೆಸ್ ಮಟ್ಟಕ್ಕೆ ಅನುಗುಣವಾಗಿರದಿದ್ದರೆ ಅವುಗಳನ್ನು ರದ್ದುಗೊಳಿಸಬೇಕಾಗುತ್ತದೆ. ವೈಯಕ್ತಿಕ ವಾಹನಗಳಿಗಾಗಿ, ಜೂನ್ 2024 ರಿಂದ ಜಾರಿಗೆ ತರಲು ಯೋಜಿಸಲಾಗಿದೆ.
ಭಾರತದಲ್ಲಿವೆ ಒಂದು ಕೋಟಿಗೂ ಅಧಿಕ ಫಿಟ್ನೆಸ್ ಇಲ್ಲದ ವಾಹನಗಳು!
ಭಾರತದಲ್ಲಿ ಸುಮಾರು ಒಂದು ಕೋಟಿ ವಾಹನಗಳು ಮಾನ್ಯ ಫಿಟ್ನೆಸ್ ಇಲ್ಲದೆ ಚಲಿಸುತ್ತಿವೆ ಎಂದು ಇತ್ತೀಚೆಗಷ್ಟೇ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು. ಈ ಕಾರಣದಿಂದಾಗಿ ಮಾಲಿನ್ಯವೂ ಹೆಚ್ಚುತ್ತಿದೆ ಮತ್ತು ತೈಲವನ್ನು ಬಹಳಷ್ಟು ಖರ್ಚು ಮಾಡಲಾಯಿತು. ಅಲ್ಲದೆ, ಸುರಕ್ಷತೆಯ ದೃಷ್ಟಿಯಿಂದ, ಅವರು ಮಾನದಂಡಗಳನ್ನು ಪೂರೈಸುತ್ತಿಲ್ಲ. ಈ ಆಲೋಚನೆಗಳಿಂದ ಸ್ಕ್ರಾಪಿಂಗ್ ನೀತಿ ಪ್ರಾರಂಭವಾಗಿದೆ.


Click it and Unblock the Notifications