ಮೇ 5ನೇ ತಾರೀಕಿನ ಮಂಗಳವಾರ ರಾತ್ರೋರಾತ್ರಿ ಕೋಟ್ಯಂತರ ಭಾರತೀಯರ ಕನಸು ಕಮರಿಹೋಗಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ನೆಲ ಕಚ್ಚಿದ ಮೇಲೆ ಪೆಟ್ರೋಲ್- ಡೀಸೆಲ್ ಬೆಲೆ ಇಳಿಕೆ ಆಗಬಹುದು ಅನ್ನೋದು ನಿರೀಕ್ಷೆಯಾಗಿತ್ತು. ಆದರೆ ಸರ್ಕಾರವು ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 10 ರುಪಾಯಿ ಹಾಗೂ ಡೀಸೆಲ್ ಮೇಲೆ 13 ರುಪಾಯಿ ಅಬಕಾರಿ ಸುಂಕ ಏರಿಸಿದೆ.
ಅಲ್ಲಿಗೆ ಎರಡು ದಶಕಗಳಲ್ಲೇ ಕನಿಷ್ಠ ಮಟ್ಟಿಗೆ ಕುಸಿದ ಕಚ್ಚಾ ತೈಲ ಬೆಲೆಯ ಲಾಭ ಜನ ಸಾಮಾನ್ಯರಿಗೆ ಸಿಗುವುದಿಲ್ಲ ಎಂದು ಪಕ್ಕಾ ಆಗಿದೆ. ಎರಡು ತಿಂಗಳ ಅವಧಿಯೊಳಗೆ ಇದು ಎರಡನೇ ಸಲ ಅಬಕಾರಿ ಸುಂಕವನ್ನು ಸರ್ಕಾರ ಏರಿಸಿದೆ. ಆ ಮೂಲಕ 2019- 20ರ ಮಟ್ಟದಲ್ಲಿ ಬಂದಿದ್ದ 1.7 ಲಕ್ಷ ಕೋಟಿ ರುಪಾಯಿ ಆದಾಯವನ್ನು ತುಂಬಿಕೊಳ್ಳಲು ಮುಂದಾಗಿದೆ.
11 ತಿಂಗಳಲ್ಲಿ 1.6 ಲಕ್ಷ ಕೋಟಿ ಆದಾಯ ನಿರೀಕ್ಷೆ
ಕೊರೊನಾ ಕಾರಣಕ್ಕೆ ದೇಶದಾದ್ಯಂತ ಲಾಕ್ ಡೌನ್ ಅವಧಿಯಲ್ಲಿ ಪ್ರಯಾಣದ ಮೇಲೆ ಹಲವು ನಿರ್ಬಂಧವಿದೆ. ಆ ಲೆಕ್ಕಕ್ಕೆ ನೋಡಿದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 11 ತಿಂಗಳು ಇದ್ದು, 1.6 ಲಕ್ಷ ಕೋಟಿ ರುಪಾಯಿ ಆದಾಯ ಬರಬಹುದು ಎಂಬ ನಿರೀಕ್ಷೆ ಇದೆ. ಮಾರ್ಚ್ 14ನೇ ತಾರೀಕಿನಂದು ಪೆಟ್ರೋಲ್- ಡೀಸೆಲ್ ಪ್ರತಿ ಲೀಟರ್ ಗೆ 3 ರುಪಾಯಿ ಏರಿಕೆ ಮಾಡಿದಾಗ ಹೆಚ್ಚುವರಿಯಾಗಿ ವರ್ಷಕ್ಕೆ 39 ಸಾವಿರ ಕೋಟಿ ರುಪಾಯಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆ ಇತ್ತು. ಈಗಿನ ಅಬಕಾರಿ ಸುಂಕದ ಏರಿಕೆಯಿಂದ ಆಗುವ ಹೆಚ್ಚುವರಿ ಆದಾಯವನ್ನೂ ಲೆಕ್ಕ ಹಾಕಿದರೆ 2 ಲಕ್ಷ ಕೋಟಿ ಆಗುತ್ತದೆ. ಅಂದಹಾಗೆ ಸರ್ಕಾರಿ ಸ್ವಾಮ್ಯದ ಐಒಸಿ, ಬಿಪಿಸಿಎಲ್, ಎಚ್ ಪಿಸಿಎಲ್ ನಿಂದ ಮಾರ್ಚ್ 16ನೇ ತಾರೀಕಿನಿಂದ ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂತರರಾಷ್ಟ್ರೀಯ ಮಟ್ಟದ ಕಚ್ಚಾ ತೈಲ ಬೆಲೆ ಇಳಿದಿದ್ದರಿಂದ ಆಗುತ್ತಿದ್ದ ಲಾಭವು ಈಗ ಅಬಕಾರಿ ಸುಂಕ ಏರಿಕೆಯಿಂದ ಸರ್ಕಾರದ ಪಾಲಾಗುತ್ತದೆ.
ಬ್ರೆಂಟ್ ಕಚ್ಚಾ ತೈಲ ದರ ಇಪ್ಪತ್ತು ವರ್ಷಗಳ ಕನಿಷ್ಠ ಮಟ್ಟಕ್ಕೆ
ಆದರೆ, ಈ ಸನ್ನಿವೇಶದಲ್ಲಿ ಮಹತ್ತರವಾದ ವಿಚಾರವೊಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ತೆರಿಗೆ ಪರಿಷ್ಕರಣೆ ಮಾಡಿದರೆ ಪೆಟ್ರೋಲ್- ಡೀಸೆಲ್ ನ ಚಿಲ್ಲರೆ ಮಾರಾಟ ದರದಲ್ಲೂ ಬದಲಾವಣೆ ಆಗಬೇಕು. ಆದರೆ ಮಾರ್ಚ್ 14ನೇ ತಾರೀಕಿನಂದು ಸರ್ಕಾರದಿಂದ ತೆರಿಗೆಯಲ್ಲಿ ಏರಿಕೆ ಮಾಡಿದ್ದರೂ ಚಿಲ್ಲರೆ ಮಾರಾಟದ ದರದಲ್ಲಿ ಬದಲಾವಣೆ ಆಗಿರಲಿಲ್ಲ. ಏಕೆಂದರೆ, ಬ್ರೆಂಟ್ ಕಚ್ಚಾ ತೈಲ ದರ ಇಪ್ಪತ್ತು ವರ್ಷಗಳ ಕನಿಷ್ಠ ಮಟ್ಟವಾದ ಬ್ಯಾರಲ್ ಗೆ $ 18ಕ್ಕೆ ಇಳಿದಿದ್ದರಿಂದ ಗ್ರಾಹಕರಿಗೆ ವರ್ಗಾವಣೆ ಆಗಬೇಕಿದ್ದ ಲಾಭವನ್ನು ತೆರಿಗೆಗೆ ಹೊಂದಾಣಿಕೆ ಮಾಡಲಾಗಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತೆರಿಗೆಯನ್ನು ಭಾರತವು ಕ್ರಮವಾಗಿ ಬ್ಯಾರೆಲ್ ಗೆ $ 21 ಹಾಗೂ $ 27 ಏರಿಕೆ ಮಾಡಿದೆ. ಹೀಗೆ ಇಡೀ ವರ್ಷ ಇದ್ದಲ್ಲಿ 2100 ಕೋಟಿ ಯುಎಸ್ ಡಿ ಸಂಗ್ರಹವಾಗುತ್ತದೆ. ಸರ್ಕಾರದ ಅಧಿಸೂಚನೆ ಪ್ರಕಾರ, ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಲೀಟರ್ ಗೆ 2 ರುಪಾಯಿ ಮತ್ತು ರಸ್ತೆ ಸೆಸ್ 8 ರುಪಾಯಿ ಏರಿಕೆ ಮಾಡಲಾಗಿದೆ. ಅದೇ ಡೀಸೆಲ್ ಮೇಲೆ ವಿಶೇಷ ಅಬಕಾರಿ ಸುಂಕ ಲೀಟರ್ ಗೆ 5 ರುಪಾಯಿ ಮತ್ತು ರಸ್ತೆ ಸೆಸ್ 8 ರುಪಾಯಿ ಏರಿಕೆಯಾಗಿದೆ. ಈ ಮೂಲಕ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರು. 32.98 ಹಾಗೂ ಡೀಸೆಲ್ ಮೇಲೆ ರು. 31.83 ಬೀಳುತ್ತದೆ.
ಒಟ್ಟು ದರದಲ್ಲಿ ಶೇಕಡಾ 46ರಷ್ಟು ಮೊತ್ತ ಕೇಂದ್ರದ ಅಬಕಾರಿ ಸುಂಕ
ಸದ್ಯಕ್ಕೆ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 71.26 ರುಪಾಯಿ ಇದ್ದರೆ, ಡೀಸೆಲ್ ಲೀಟರ್ ಗೆ 69.39 ರುಪಾಯಿ ಇದೆ. ಈ ಬೆಲೆಯಲ್ಲಿ ಶೇಕಡಾ 46ರಷ್ಟು ಮೊತ್ತ ಕೇಂದ್ರದ ಅಬಕಾರಿ ಸುಂಕ ಇದೆ. ಸ್ಥಳೀಯ ತೆರಿಗೆ ಅಥವಾ VAT ಕೂಡ ಸೇರಿದರೆ ತೆರಿಗೆಯು 60 ಪರ್ಸೆಂಟ್ ಆಗುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರ ವಹಿಸಿಕೊಂಡಾಗ ಪೆಟ್ರೋಲ್ ಮೇಲೆ ಅಬಕಾರಿ ಸುಂಕ ಪ್ರತಿ ಲೀಟರ್ ಗೆ 9.48 ರುಪಾಯಿ ಇತ್ತು. ಇನ್ನು ಡೀಸೆಲ್ ಮೇಲೆ 3.56 ರುಪಾಯಿ ಇತ್ತು. ನವೆಂಬರ್ 2014ರಿಂದ ಜನವರಿ 2016ರ ಜನವರಿ ಮಧ್ಯೆ ಒಂಬತ್ತು ಬಾರಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ಆ ಹದಿನೈದು ತಿಂಗಳ ಅವಧಿಯಲ್ಲಿ ಪೆಟ್ರೋಲ್ 11.77 ರುಪಾಯಿ ಹಾಗೂ ಡೀಸೆಲ್ 13.47 ರುಪಾಯಿ ಏರಿಕೆಯಾಗಿತ್ತು. 2014-15ನೇ ಸಾಲಿನಲ್ಲಿ 99 ಸಾವಿರ ಕೋಟಿ ರುಪಾಯಿ ಆದಾಯ ಬಂದಿದ್ದರೆ, 2016- 17ರಲ್ಲಿ ಈ ಆದಾಯವು 2.42 ಲಕ್ಷ ಕೋಟಿಗೆ ಏರಿಕೆ ಆಗಿತ್ತು. ಆ ನಂತರ ಅಕ್ಟೋಬರ್ 2017ರಲ್ಲಿ ಅಬಕಾರಿ ಸುಂಕ 2 ರುಪಾಯಿ ಇಳಿಸಿದರೆ, ವರ್ಷದ ನಂತರ 1.50 ರುಪಾಯಿ ಇಳಿಕೆ ಮಾಡಲಾಗಿತ್ತು. ಅದಾದ ಮೇಲೆ 2019ರ ಜುಲೈನಲ್ಲಿ ಲೀಟರ್ ಗೆ 2 ರುಪಾಯಿ, ಮಾರ್ಚ್ 14, 2020ರಲ್ಲಿ 3 ರುಪಾಯಿ ಹೆಚ್ಚಿಸಲಾಗಿತ್ತು.


Click it and Unblock the Notifications