ಕೊರೊನಾ ಎಬ್ಬಿಸಿದ ಆರ್ಥಿಕ ಸುನಾಮಿ, ಅದರ ಬೆನ್ನಿಗೇ ತೈಲ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ರಿಲಯನ್ಸ್ ಇಂಡಸ್ಟ್ರೀಸ್ ಬಗ್ಗೆ ಮುಕೇಶ್ ಅಂಬಾನಿ ನೀಡಿದ್ದ ಭರವಸೆ ಏನಾಗಬಹುದೋ ಎಂಬ ಆತಂಕ ಇತ್ತು. ಆದರೆ ಯಾವಾಗ ಫೇಸ್ ಬುಕ್ ನಿಂದ ರಿಲಯನ್ಸ್ ಜಿಯೋದಲ್ಲಿ 9.98 ಪರ್ಸೆಂಟ್ ಪಾಲನ್ನು 5.7 ಬಿಲಿಯನ್ ಅಮೆರಿಕನ್ ಡಾಲರ್ ಖರೀದಿ ಘೋಷಣೆಯಾಯಿತೋ ಅಲ್ಲಿಂದ ಆಟವೇ ಬದಲಾಗಿದೆ. ಮುಕೇಶ್ ಅಂಬಾನಿಯ ಮುಖದಲ್ಲಿನ ಚಿಂತೆಯ ನೆರಿಗೆಗಳು ಕಣ್ಮರೆಯಾಗಿವೆ.
ಆರು ವರ್ಷಗಳ ಹಿಂದೆ ಫೇಸ್ ಬುಕ್ ನಿಂದ ವಾಟ್ಸಾಪ್ ಖರೀದಿ ಮಾಡಿದ್ದೇ ಆ ಕಂಪೆನಿಯಿಂದ ಮಾಡಿದ ದೊಡ್ಡ ವ್ಯವಹಾರ. ಇದೀಗ ಜಿಯೋದಲ್ಲಿ ಪಾಲು ಖರೀದಿ ಮಾಡಿರುವುದರಿಂದ ಅಮೆಜಾನ್.ಕಾಮ್, ವಾಲ್ ಮಾರ್ಟ್ ನಂಥ ಇ ಕಾಮರ್ಸ್ ಕಂಪೆನಿಗಳ ಜತೆಗೆ ಬಡಿದಾಡಲು ರೆಟ್ಟೆಗೆ ಬಲ ಬಂದಂತಾಗಿದೆ.
ಮುಕೇಶ್ ಅಂಬಾನಿ ಮಗ- ಮಗಳು ವ್ಯವಹಾರದಲ್ಲಿ ಇದ್ದರು
ಸಂಪೂರ್ಣವಾಗಿ ನಗದು ಪಾವತಿಸಿಯೇ ಪಾಲು ಖರೀದಿಯ ಈ ವ್ಯವಹಾರವು ಕಳೆದ ವರ್ಷ ಮಧ್ಯ ಭಾಗದಿಂದ ಶುರುವಾದದ್ದು. ಇದರಲ್ಲಿ ಝುಕರ್ ಬರ್ಗ್ ಹಾಗೂ ಅಂಬಾನಿಯ ಅತ್ಯಂತ ನಂಬಿಕಸ್ತ ಮುಂದಾಳುಗಳಿದ್ದರು. ಮುಕೇಶ್ ರ ದೊಡ್ಡ ಮಗ ಆಕಾಶ್, ಆತನ ಅವಳಿ ಸೋದರಿ ಇಶಾ ಕೂಡ ಮಾತುಕತೆಯಲ್ಲಿ ಒಳಗೊಂಡಿದ್ದರು. ಯಾವಾಗ ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡು, ಪ್ರಯಾಣದ ಮೇಲೆ ನಿರ್ಬಂಧಿಸಲಾಯಿತೋ ಆಗ ವಿಡಿಯೋ ಕಾನ್ಫರೆನ್ಸ್- ಫೋನ್ ಕಾಲ್ ಗಳ ಮೂಲಕವೇ ವ್ಯವಹಾರ ಮುಂದುವರಿಸಲಾಗಿದೆ. ವಾಟ್ಸಾಪ್ ಪಾವತಿಯು ಜಿಯೋಮಾರ್ಟ್ ಸ್ಟಾರ್ಟ್ ಅಪ್ ಜತೆಗೆ ಜೋಡಣೆ ಮಾಡುವುದು ಮುಕೇಶ್ ಅಂಬಾನಿ ಪಾಲಿಗೆ ಅತ್ಯಂತ ನಿರ್ಣಾಯಕ ಹಾಗೂ ಈ ಸಮಯದ ಅಗತ್ಯವೂ ಹೌದು. ಕಳೆದ ಆಗಸ್ಟ್ ನಲ್ಲಿ ಸ್ವತಃ ಮುಕೇಶ್, ಷೇರುದಾರರಿಗೆ ಮಾತು ಕೊಟ್ಟಿದ್ದರು: ತಮ್ಮ ಉದ್ಯಮದ ಕೆಲವು ಘಟಕಗಳನ್ನು ಮಾರಿ, 20 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ತೀರಿಸುವುದಾಗಿ ಹೇಳಿದ್ದರು. ರಿಲಯನ್ಸ್ ಇಂಡಸ್ಟ್ರೀಸ್ ರಿಫೈನಿಂಗ್ ಮತ್ತು ಕೆಮಿಕಲ್ಸ್ ಘಟಕವನ್ನು ಸೌದಿ ಅರೇಬಿಯನ್ ಆಯಿಲ್ ಕಂಪೆನಿಗೆ ಮಾರುವ ಪ್ರಸ್ತಾವ ಬಂದದ್ದು ಆಗ.
ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ 11 ಬಿಲಿಯನ್ ಡಾಲರ್ ಹೆಚ್ಚು
ಆದರೆ, ತೈಲ ಬೆಲೆ ಪಾತಾಳಕ್ಕೆ ಕಚ್ಚಿದ್ದು ಹಾಗೂ ಅರಾಮ್ಕೋ ಜತೆಗೆ ವ್ಯವಹಾರ ವಿಳಂಬ ಆಗಿದ್ದರಿಂದ ಒಂದೊಳ್ಳೆ ಸುದ್ದಿ, ತುಂಬ ದೊಡ್ಡ ಸುದ್ದಿಯ ಅಗತ್ಯ ಮುಕೇಶ್ ಅಂಬಾನಿಗೆ ಇತ್ತು. ಆಗ ಬಂದ ಅತಿ ದೊಡ್ಡ ಸುದ್ದಿಯೇ ಫೇಸ್ ಬುಕ್- ಜಿಯೋ ಡೀಲ್. ಈ ವ್ಯವಹಾರದ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ 11 ಬಿಲಿಯನ್ ಅಮೆರಿಕನ್ ಡಾಲರ್ ಗಿಂತ ಹೆಚ್ಚಾಗಿದೆ. ಕಳೆದ ಕೆಲವು ತಿಂಗಳಿಂದ ಈ ಬಗ್ಗೆ ವದಂತಿ ಇತ್ತು. ಇದೊಂದು ವ್ಯವಹಾರದಿಂದ ಏಷ್ಯಾದ ಶ್ರೀಮಂತ ಕಿರೀಟ ಹೊತ್ತಿದ್ದ ಆಲಿಬಾಬ ಗ್ರೂಪ್ ನ ಸಹ ಸಂಸ್ಥಾಪಕ ಜಾಕ್ ಮಾರನ್ನು ಬದಿಗೆ ಸರಿಸಿ, ಮತ್ತೆ ಅಲ್ಲಿಗೆ ಬಂದು ಕೂತರು ಮುಕೇಶ್ ಅಂಬಾನಿ. ಮಾರ್ಚ್ 2021ರ ಹೊತ್ತಿಗೆ ನಿವ್ವಳ ಸಾಲವನ್ನು ಸಂಪೂರ್ಣ ತೀರಿಸಬೇಕು ಎಂಬ ಗುರಿ ಇಟ್ಟುಕೊಂಡಿರುವ ಅಂಬಾನಿಗೆ ಅರಾಮ್ಕೋ ಒಪ್ಪಂದ ಸಾಕಾರ ಆಗುವುದು ಬಹಳ ಮುಖ್ಯ. ಅಂದ ಹಾಗೆ ಈ ವ್ಯವಹಾರ ಕಳೆದ ತಿಂಗಳೇ ಪೂರ್ಣಗೊಳ್ಳಬೇಕಿತ್ತು. ಆದರೆ ಈಗ ಕಚ್ಚಾ ತೈಲ ಬೆಲೆ ಪಾತಾಳಕ್ಕೆ ಕುಸಿದಿದ್ದರಿಂದ ಈಗ ವ್ಯವಹಾರ ತೂಗುಯ್ಯಾಲೆ ಎಂಬಂತಾಗಿದೆ. ಆ ಒತ್ತಡವೇ ಈಗ ಫೇಸ್ ಬುಕ್ ಜತೆಗಿನ ವ್ಯವಹಾರ ಬೇಗ ಬೇಗ ಮುಗಿಸುವಂತಾಗಿದೆ.
ಮುಕೇಶ್ ಕನಸಿಗೆ ರೆಕ್ಕೆ ಮೂಡಿದೆ
ತನ್ನ ತಂದೆ ಧೀರೂಭಾಯಿ ಅಂಬಾನಿ ತೀರಿಕೊಂಡ ಮೇಲೆ ರೀಫೈನಿಂಗ್ ಹಾಗೂ ಪೆಟ್ರೋಕೆಮಿಕಲ್ಸ್ ಉದ್ಯಮದ ಜವಾಬ್ದಾರಿ ವಹಿಸಿಕೊಂಡಿದ್ದರು ಮುಕೇಶ್. ಆ ನಂತರ ಟೆಲಿಕಮ್ಯುನಿಕೇಷನ್ ಮತ್ತು ಇ ಕಾಮರ್ಸ್ ಉದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕೆಂಬ ಮುಕೇಶ್ ಅಂಬಾನಿ ಕನಸಿಗೆ ರೆಕ್ಕೆ ಮೂಡಿದೆ. ಫೇಸ್ ಬುಕ್ ವ್ಯವಹಾರದ ಮೂಲಕ ಜಿಯೋಮಾರ್ಟ್ ಇ ಕಾಮರ್ಸ್ ಗೆ ವಾಟ್ಸಾಪ್ ಪೇಮೆಂಟ್ ಬಲ ಸಿಗುತ್ತದೆ. ಸದ್ಯಕ್ಕೆ ಭಾರತದಲ್ಲಿ ಅದೀಗ ಪೈಲಟ್ ಯೋಜನೆಯಲ್ಲಿದೆ. ರಿಲಯನ್ಸ್ ಜಿಯೋ ಹಾಗೂ ಫೇಸ್ ಬುಕ್ ಫ್ರೆಂಡ್ ಷಿಪ್ ಹಳೆಯದು. ಹೇಗೆಂದರೆ, ಜಿಯೋಗಾಗಿ ವಾಟ್ಸಾಪ್ ನ 'ಲೈಟ್' ವರ್ಷನ್ ಸೇರ್ಪಡೆ ಮಾಡಿಕೊಳ್ಳಲು ಪ್ರಸ್ತಾವ ಇಟ್ಟಿದ್ದರು. ಜಿಯೋಗೆ 4 ಕೋಟಿ ಚಂದಾದಾರರಿದ್ದಾರೆ. ಭಾರತದಲ್ಲಿ ಅಷ್ಟೇ ಸಂಖ್ಯೆಯ ವಾಟ್ಸಾಪ್ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಡಿಜಿಟಲ್ ಸರ್ವೀಸ್ ಗೆ ಪ್ರತ್ಯೇಕ ಹೋಲ್ಡಿಂಗ್ ಕಂಪೆನಿ ಆರಂಭಿಸಿತು. ನವೆಂಬರ್ ನಲ್ಲಿ ಅದಕ್ಕೆ ಜಿಯೋ ಪ್ಲಾಟ್ ಫಾರ್ಮ್ಸ್ ಎಂದು ಹೆಸರಿಡಲಾಯಿತು. ಈ ವರ್ಷದ ಜನವರಿಯಲ್ಲಿ ಫೇಸ್ ಬುಕ್ ಅಧಿಕಾರಿಗಳು ಮತ್ತು ಬ್ಯಾಂಕರ್ ಗಳು ಭಾರತಕ್ಕೆ ಬಂದಿದ್ದರು. ಮಾತುಕತೆಗೆ ಮುಂದಾಗಿದ್ದರು.
ಮೂರು ವರ್ಷದಲ್ಲಿ ರಿಲಯನ್ಸ್ ಜಿಯೋ ನಂಬರ್ ಒನ್
ಆದರೆ, ಯಾವಾಗ ಪ್ರಯಾಣ ನಿರ್ಬಂಧ ವಿಧಿಸಲಾಯಿತೋ ಆಗಿಂದ ಮಾತುಕತೆಯನ್ನು ಇತರ ಮಾಧ್ಯಮಗಳ ಮೂಲಕ ಮುಂದುವರಿಸಲಾಯಿತು. ಈಗ ಫೇಸ್ ಬುಕ್ ಮೂಲಕ ಬರುವ ಹಣವನ್ನು ರಿಲಯನ್ಸ್ ನ ಸಾಲ ತೀರಿಸಿಕೊಳ್ಳಲು ಬಳಸಲಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಮಾಡಿರುವ ಸಾಲದಲ್ಲಿ ಬಹುತೇಕ 50 ಬಿಲಿಯನ್ ಅಮೆರಿಕನ್ ಡಾಲರ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಗೆ ಬಳಸಲಾಗಿದೆ. ಮೂರೇ ವರ್ಷದಲ್ಲಿ ಜಿಯೋ ಭಾರತದ ನಂಬರ್ 1 ಟೆಲಿಕಾಂ ಆಪರೇಟರ್ ಆಗಿದೆ. ಉಚಿತ ಕರೆ, ಅಗ್ಗದ ಇಂಟರ್ ನೆಟ್ ಒದಗಿಸುವ ಮೂಲಕ ಮೂರು ವರ್ಷದಲ್ಲಿ ಈ ಸ್ಥಾನಕ್ಕೆ ಬಂದು ತಲುಪಿತು. ಇನ್ನು ರಿಲಯನ್ಸ್ ರೀಟೇಲ್ ವ್ಯವಹಾರವನ್ನು ಬೆಳೆಸುತ್ತಿದೆ. ಅದರ ಭಾಗವಾಗಿ ಬ್ರಿಟಿಷ್ ಬೊಂಬೆ- ಮಳಿಗೆ ಜಾಲ ಹಾಮ್ಲೇಸ್ ಅನ್ನು ಕಳೆದ ವರ್ಷ ಖರೀದಿಸಿದೆ. ಅಂತೂ ಜಿಯೋಗೆ ಮೊದಲ ಹೂಡಿಕೆದಾರರು ಸಿಕ್ಕಿದ್ದಾರೆ. ಮುಂದೆ ಐಪಿಒ ಮೂಲಕ ಹಾಗೂ ಇತರ ಹೂಡಿಕೆದಾರರನ್ನು ಸೆಳೆಯುವ ಮೂಲಕ ಇನ್ನಷ್ಟು ಬಂಡವಾಳ ಸಂಗ್ರಹಿಸಬಹುದು.


Click it and Unblock the Notifications