ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್‌ದಿಂದಾಗಿ ಆಗಿರುವ ಆರ್ಥಿಕ ನಷ್ಟಕ್ಕೆ ಪರಿಹಾರವಾಗಿ 20 ಲಕ್ಷ ಕೋಟಿ ರುಪಾಯಿ ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದು ನಿಮಗೆಲ್ಲಾ ಗೊತ್ತೇ ಇದೆ. ನಿನ್ನೆಯಷ್ಟೇ(ಮೇ 13) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲ ಹಂತವಾಗಿ ಆರ್ಥಿಕ ಪ್ಯಾಕೇಜ್ ವಿವರಿಸಿದ್ದಾರೆ.
ಭಾರತದ ಜಿಡಿಪಿಯ 10 ಪರ್ಸೆಂಟ್‌ಗೆ ಸಮನಾದ ಆರ್ಥಿಕ ಪ್ಯಾಕೇಜ್ ಎಂದು ಒತ್ತಿ ಹೇಳುತ್ತಿರುವ ಕೇಂದ್ರ ಸರ್ಕಾರದ ಬಳಿ 20 ಲಕ್ಷ ಕೋಟಿ ಹಣವಿದ್ಯಾ? ಆರ್ಥಿಕ ಪ್ಯಾಕೇಜ್ ಘೋಷಣೆಯಾಗುತ್ತಿದ್ದಂತೆ ಎಲ್ಲಾ ಪರಿಹಾರ ಹಣ ಆಯಾ ವಲಯಕ್ಕೆ ಹೋಗಿ ಸೇರಿಕೊಳ್ಳುತ್ತಾ? ಹೀಗೆ ನಾನಾ ಪ್ರಶ್ನೆಗಳು ನಿಮ್ಮ ಬಳಿ ಇರಬಹುದು. ಆದರೆ ಇಷ್ಟು ದೊಡ್ಡ ಮಟ್ಟದ ಆರ್ಥಿಕ ಪ್ಯಾಕೇಜ್ ಹಣ ಸರ್ಕಾರದ ಬಳಿ ಇಲ್ಲ. ಹಾಗಿದ್ದರೆ ಹೇಗೆ ಈ ಪರಿಹಾರ ನೀಡಲು ಸಾಧ್ಯ ಎಂಬುದರ ಮಾಹಿತಿ ಈ ಕೆಳಗಿದೆ ಓದಿ
ಈಗಾಗಲೇ 6 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಹಣಕಾಸು ಸಚಿವರು 6 ಲಕ್ಷ ಕೋಟಿ ರುಪಾಯಿಗೂ ಅಧಿಕ ಮೌಲ್ಯದ ಪ್ಯಾಕೇಜ್‌ನ್ನು ಈಗಾಗಲೇ ಪ್ರಕಟಿಸಿದ್ದಾರೆ. ಇದೆಲ್ಲವೂ ಈಗಿನ 20 ಲಕ್ಷ ಕೋಟಿ ರುಪಾಯಿ ಪ್ಯಾಕೇಜ್‌ನಲ್ಲಿ ಸೇರುತ್ತದೆ. ಇದರ ಹೊರತಾಗಿ, 14 ಲಕ್ಷ ಕೋಟಿ ರುಪಾಯಿಗಳನ್ನು ಸರಕಾರ ಈಗ ವಿವಿಧ ಮೂಲಗಳಿಂದ ಹೊಂದಿಸಬೇಕಿದೆ.
ಉಳಿದ ಬಾಕಿ ಹಣವನ್ನ ಆರ್‌ಬಿಐ ಮುದ್ರಿಸಿಬಿಡುತ್ತಾ?
ಹಾಗಿದ್ದರೆ ಉಳಿದ ಹಣವನ್ನು ಮುದ್ರಿಸಿಬಿಡುತ್ತಾ ಎಂದು ನೀವು ಅಂದುಕೊಂಡರೆ , ಅಷ್ಟು ದೊಡ್ಡ ಮೊತ್ತ ಹಣ ಮುದ್ರಿಸುವುದು ಸಾಧ್ಯವಿಲ್ಲ. ಕೊರೊನಾವೈರಸ್ ಪ್ಯಾಕೇಜ್‌ಗಾಗಿ ಬಾಂಡ್‌ಗಳ ಮೂಲಕ ಸಾಲ ಪಡೆಯುವ ಇಲ್ಲವೇ, ನೋಟುಗಳನ್ನು ಮುದ್ರಿಸುವ ಯೋಜನೆಗಳು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಚಾಲ್ತಿಗೆ ಬರುವ ಸಾಧ್ಯತೆಗಳಿವೆ.
ಕಳೆದ ವಾರವಷ್ಟೇ ಸರ್ಕಾರ ತನ್ನ ಸಾಲ ಪಡೆಯುವ ಗುರಿಯನ್ನು 50 ಪರ್ಸೆಂಟ್‌ರಷ್ಟು ಹೆಚ್ಚಿಸಿದೆ. ಅಂದರೆ, 7.8 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿ ರುಪಾಯಿಗೆ ವಿಸ್ತರಿಸಲಾಗಿದೆ. ವಿತ್ತೀಯ ಕೊರತೆ ಹೆಚ್ಚುವುದರಿಂದಾಗಿ, ಈ ಕ್ರಮವು ಅಷ್ಟೇನೂ ಪ್ರಭಾವ ಬೀರಲಾರದು.
ಜಿಎಸ್‌ಟಿ ಸಂಗ್ರಹವೂ ಕುಸಿದಿದೆ? ಹಾಗಿದ್ರೆ ಎಲ್ಲಿಂದ ಬರುತ್ತೆ ಹಣ?
ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರುಪಾಯಿ ಮೌಲ್ಯದ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದರೂ, ಇಷ್ಟು ಹಣವನ್ನು ಯಾವ ಮೂಲದಿಂದ ಹೊಂದಿಸುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಪ್ರಸಕ್ತ ವರ್ಷದಲ್ಲಿ ಜಿಡಿಪಿ ಬೆಳವಣಿಗೆ 0% ಇರಲಿದೆ ಎಂದು ಪ್ರಮುಖ ರೇಟಿಂಗ್ ಏಜೆನ್ಸಿಗಳು ಹೇಳಿವೆ. ಜಿಎಸ್‌ಟಿ ಸಂಗ್ರಹ ತೀವ್ರ ಕುಸಿದಿದ್ದು, ಆದಾಯದ ಮೂಲಗಳು ಬತ್ತಿವೆ. ಇಂಥ ಹೊತ್ತಿನಲ್ಲಿ ಆರ್ಥಿಕತೆ ಚೇತರಿಕೆಗೆ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆಯಾಗಿದೆ.
14 ಲಕ್ಷ ಕೋಟಿ ಹೊಂದಿಸಬೇಕಿದೆ ಕೇಂದ್ರ ಸರ್ಕಾರ!
ಹೌದು, ಕೇಂದ್ರ ಸರ್ಕಾರ ಉಳಿಕೆಯ 14 ಲಕ್ಷ ಕೋಟಿ ರುಪಾಯಿಯನ್ನು ವಿವಿಧ ಆದಾಯ ಮೂಲಗಳಿಂದ ಸಂಗ್ರಹಿಸಬೇಕಿದೆ. ಈಗಾಗಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 1.74 ಲಕ್ಷ ಕೋಟಿ ರುಪಾಯಿ ಮೌಲ್ಯದ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಇದರಲ್ಲಿ ನಗದು ವರ್ಗಾವಣೆ ಮತ್ತು ಉಚಿತ ಪಡಿತರ ವಿತರಣೆಯ ಯೋಜನೆಗಳೂ ಇದ್ದವು.
ಇನ್ನು ಪ್ರಮುಖವಾಗಿ ಲಿಕ್ವಿಡಿಟಿ ಹರಿವಿನ ಉದ್ದೇಶಕ್ಕಾಗಿ ರಿಸರ್ವ್ ಬ್ಯಾಂಕ್ 4.74 ಲಕ್ಷ ಕೋಟಿ ರುಪಾಯಿಗಳ ಪ್ಯಾಕೇಜ್ ರೂಪಿಸಿದೆ. ಇಲ್ಲಿ ಹಣವು ಬ್ಯಾಂಕ್ ಮತ್ತು ಆರ್‌ಬಿಐನಲ್ಲೇ ಉಳಿಯುತ್ತದೆ. ಈ ಎರಡು ಪ್ಯಾಕೇಜ್ ಒಟ್ಟಾರೆ ಸೇರಿದರೆ 6.5 ಲಕ್ಷ ಕೋಟಿ ಆಗುತ್ತದೆ. ಹೀಗಾಗಿ ಕೇಂದ್ರ ಸರ್ಕಾರವು ಉಳಿದ 13.5 ಲಕ್ಷದಿಂದ 14 ಲಕ್ಷ ಕೋಟಿ ರುಪಾಯಿಯನ್ನು ಹೊಂದಿಸಬೇಕಿದೆ.


Click it and Unblock the Notifications