ಚಿತ್ರಮಂದಿರಗಳಿಗೆ ಬೀಗ, ಶೂಟಿಂಗ್ ಗಳು ಬಂದ್ ಮತ್ತು ಹೊಸ ಸಿನಿಮಾಗಳ ಬಿಡುಗಡೆ ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿರುವುದು... ಇವೆಲ್ಲ ಕೊರೊನಾ ಆತಂಕದಿಂದಲೇ. ಈ ವರದಿಯಂತೂ ಹಿಂದಿ ಚಿತ್ರರಂಗದ ಬಗ್ಗೆ ಇರುವಂಥದ್ದು, ಚಿತ್ರರಂಗದ ವಾಣಿಜ್ಯ ಲೆಕ್ಕಾಚಾರಗಳು ತಿಳಿದಿರುವವರ ಪ್ರಕಾರ, ಆಗಿರುವ ನಷ್ಟದ ಪ್ರಮಾಣ 300ರಿಂದ 800 ಕೋಟಿ ರುಪಾಯಿ ಇರಬಹುದು.
ಸಿನಿಮಾ ವಿಶ್ಲೇಷಕ ತರಣ ಆದರ್ಶ್ ಅಭಿಪ್ರಾಯ ಪಡುವಂತೆ, ಸದ್ಯಕ್ಕೆ ಹಿಂದಿ ಚಿತ್ರರಂಗಕ್ಕೆ 500ರಿಂದ 800 ಕೋಟಿ ರುಪಾಯಿ ನಷ್ಟವಾಗುವಂತೆ ಇದೆ. ಇನ್ನು ಮತ್ತೊಬ್ಬ ವಿಶ್ಲೇಷಕರ ಪ್ರಕಾರ, ವರ್ಷದ ಮೊದಲ ತ್ರೈ ಮಾಸಿಕದಲ್ಲಿ 350 ಕೋಟಿ ರುಪಾಯಿಗೂ ಹೆಚ್ಚು ನಷ್ಟವಾಗಲಿದೆ. ಇನ್ನು ಈ ನಷ್ಟದ ಅಂದಾಜು ಪ್ರಮಾಣ ಒಬ್ಬೊಬ್ಬರು ಒಂದೊಂದು ರೀತಿಯದ್ದಾದರೂ, ಸದ್ಯದ್ದಂತೂ ಚಿತ್ರರಂಗದ ಪಾಲಿನ ಬಿಕ್ಕಟ್ಟಿನ ಸ್ಥಿತಿ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.
ಪ್ರತಿಯೊಬ್ಬರಿಗೂ ಕೆಟ್ಟ ಸಮಯವೇ
"ಇದು ಬಹಳ ಕೆಟ್ಟ ಸಮಯ. ಚಿತ್ರರಂಗಕ್ಕೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ಕೆಟ್ಟ ಸಮಯವೇ. ಅದರಲ್ಲೂ ಚಿತ್ರೋದ್ಯಮದ ಬಗ್ಗೆ ಹೇಳಬೇಕೆಂದರೆ, ವ್ಯಾಪಾರಕ್ಕೆ ಸರಿಯಾದ ಹೊಡೆತ ಬಿದ್ದಿದೆ. ಆದರೆ ನಷ್ಟದ ಪ್ರಮಾಣ ಎಷ್ಟು ಎಂಬುದನ್ನು ಈಗಲೇ ನಿರ್ಧರಿಸುವುದಕ್ಕೆ ಆಗಲ್ಲ. ಯಾವಾಗ ಸ್ಥಿತಿ ಸಹಜವಾಗುತ್ತದೆ ಎಂಬುದೇ ಗೊತ್ತಿಲ್ಲವಲ್ಲ" ಎಂದಿದ್ದಾರೆ ಟಿ ಸೀರೀಸ್ ನ ಮುಖ್ಯಸ್ಥ ಭೂಷಣ್ ಕುಮಾರ್.
ಏಪ್ರಿಲ್ ಹದಿನೈದನೇ ತಾರೀಕಿನ ತನಕ ನಿರ್ಬಂಧ
ಏಪ್ರಿಲ್ ಹದಿನೈದನೇ ತಾರೀಕಿನ ತನಕ ನಿರ್ಬಂಧಗಳು ಮುಂದುವರಿಯಬಹುದು ಎಂಬುದು ನಿರ್ಮಾಪಕರೊಬ್ಬರ ಮಾತಾದರೆ, ಮತ್ತೊಬ್ಬ ಚಿತ್ರಕರ್ಮಿ ಸುಧೀರ್ ಮಿಶ್ರಾ ಹೇಳುವಂತೆ, ಕಳೆದ ಮೂವತ್ತೈದು ವರ್ಷದ ವೃತ್ತಿ ಜೀವನದಲ್ಲೇ ಇಂಥ ಸ್ಥಿತಿಯನ್ನು ಅವರು ನೋಡಿಲ್ಲವಂತೆ. ಕೆಲವರು ಮಾರ್ಚ್ 31ಕ್ಕೆ ಈ ಸ್ಥಿತಿ ಕೊನೆಯಾಗುತ್ತದೆ ಎನ್ನುತ್ತಿದ್ದಾರೆ. ಆದರೆ ಆ ಬಗ್ಗೆ ಯಾವುದೇ ಖಾತ್ರಿ ಇಲ್ಲ. ದಿನಗೂಲಿಯನ್ನೇ ನಂಬಿಕೊಂಡವರು ಸ್ಥಿತಿ ಬಹಳ ಕಷ್ಟ. ಇದು ಅತಿ ದೊಡ್ಡ ನಷ್ಟದ ಮುನ್ಸೂಚನೆ ಎಂದು ಅವರು ಹೇಳುತ್ತಾರೆ. ಇನ್ನು ನಿರ್ಮಾಪಕರ ಸಂಘದಿಂದ ಇದೀಗ ದಿನಗೂಲಿ ನೌಕರರಿಗಾಗಿ ಪರಿಹಾರ ನಿಧಿ ರೂಪಿಸಲಾಗಿದೆ.
ಹದಿನೈದು ದಿನ ಎಲ್ಲ ಬಂದ್
ಸಿನಿಮಾ ವಿತರಕ ರಾಜೇಶ್ ಥಡ್ವಾನಿ ಮಾತನಾಡಿ, ಪರಿಸ್ಥಿತಿ ಸರಿಹೋಗಲು ಹೆಚ್ಚಿಗೆ ಸಮಯವೇ ಆಗಬಹುದು. ಇದರ ಪರಿಣಾಮ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಆಗುತ್ತದೆ. ನಷ್ಟ ಇನ್ನೂ ಹೆಚ್ಚಾಗುತ್ತದೆ. ಸದ್ಯಕ್ಕೆ ಹದಿನೈದು ದಿನ ಎಲ್ಲ ಬಂದ್ ಮಾಡಲಾಗಿದೆ. ಒಂದು ವೇಳೆ ಚಿತ್ರಮಂದಿರಗಳು ತೆರೆಯದಿದ್ದರೆ ಇನ್ನೂ ಮುಂದೆ ಹೋಗಬಹುದು. ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಆಗಬೇಕಾದ ಸಿನಿಮಾಗಳಿಗೆ 400ರಿಂದ 500 ಕೋಟಿ ನಷ್ಟವಾಗಿದೆ. ಒಂದು ವೇಳೆ ಮತ್ತೆ ಚಿತ್ರಮಂದಿರ ತೆರೆದರೂ ಮೊದಲ ಒಂದೆರಡು ವಾರ ಪ್ರೇಕ್ಷಕರು ಬರುವುದು ಅನುಮಾನವೇ ಎಂದಿದ್ದಾರೆ.
ಎರಡನೇ ತ್ರೈ ಮಾಸಿಕದಲ್ಲಿ ಭಾರೀ ಸ್ಪರ್ಧೆ
ಸದ್ಯಕ್ಕಂತೂ ಮನರಂಜನೆ ಎಂಬುದು ಜನರ ಆಲೋಚನೆಯಲ್ಲಿ ಕೂಡ ಇಲ್ಲ. ಕಾದು ನೋಡಬೇಕಾದ ಸನ್ನಿವೇಶ ಇದು. ಎರಡನೇ ತ್ರೈ ಮಾಸಿಕದಲ್ಲಿ ಭಾರೀ ಸ್ಪರ್ಧೆ ಏರ್ಪಡುತ್ತದೆ. ಏಕೆಂದರೆ ಒಂದೇ ಸಮಯಕ್ಕೆ ಹಲವು ಸಿನಿಮಾಗಳು ಬರುತ್ತವೆ. ಶೂಟಿಂಗ್ ಷೆಡ್ಯೂಲ್ ಮುಂದಕ್ಕೆ ಹಾಕಿರುವುದರಿಂದ, ಚಿತ್ರ ಬಿಡುಗಡೆ ಮುಂದಕ್ಕೆ ಹಾಕಿರುವುದರಿಂದ 500ರಿಂದ 800 ಕೋಟಿ ನಷ್ಟವಾಗಿರುತ್ತದೆ ಎಂಬುದು ಅವರ ಮಾತು. ಈ ವರ್ಷ ಬಿಡುಗಡೆ ಆಗಬೇಕಿದ್ದ ದೊಡ್ಡ ಸಿನಿಮಾಗಳೆಂದರೆ ಸೂರ್ಯವಂಶಿ, ರಾಧೆ, ಲಕ್ಷ್ಮೀ ಬಾಂಬ್, ಕೂಲಿ ನಂಬರ್ ಒನ್, ಮುಂಬೈ ಸಾಗಾ. ಅವುಗಳ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಲಾಗಿದೆ. ಈ ವರ್ಷದ ಕೊನೆ ತ್ರೈ ಮಾಸಿಕಕ್ಕೆ ಬ್ರಹ್ಮಾಸ್ತ್ರ ಮತ್ತು ಆಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ಇವೆ.


Click it and Unblock the Notifications