ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಚಾರ ದಟ್ಟಣೆ (Traffic) ಉಂಟಾಗಿದೆ. ಬಿಎಂಆರ್‌ಸಿಎಲ್ (BMRCL) ಮೆಟ್ರೋ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆ, ಎಚ್‌ಎಸ್‌ಆರ್ ಲೇಔಟ್ (HSR Layout) ಸಮೀಪದ ಫ್ಲೈಓವರ್‌ನ್ನು ಬಂದ್ ಮಾಡಲಾಗಿದೆ.
ಹೌದು, ಸಂಚಾರ ದಟ್ಟಣೆಯನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ಬೆಂಗಳೂರು ಸಂಚಾರ ಪೊಲೀಸರು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ.ಕೆ.ಆರ್.ಪುರಂ, ಮಾರತಹಳ್ಳಿ ಹಾಗೂ ಕಾಡುಬೀಸನಹಳ್ಳಿ ಸೇರಿದಂತೆ ಇತರೆಡೆಗೆ ಕೆಲಸಕ್ಕೆ ತೆರಳುವವರೂ ಪರದಾಡುವಂತಹ ಪರಿಸ್ಥಿತಿ ಎದುರಾಗಿತು. ಇದರಿಂದ ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಆಗಿರುವುದರಿಂದ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ಕಾಮಗಾರಿಕೆಗಾಗಿ ಫ್ಲೈಓವರ್ ಮುಚ್ಚುವಿಕೆಯಿಂದ ಈಗಾಗಲೇ ಹೊರ ವರ್ತುಲ ರಸ್ತೆಯಲ್ಲಿ (ಒಆರ್‌ಆರ್) ಸಂಚಾರ ದಟ್ಟಣೆ ಉಂಟಾಗಿದ್ದು,ಈ ಪ್ರದೇಶದಲ್ಲಿ ವಾಹನಗಳ ಸಂಚಾರದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರಿದೆ.
ಫ್ಲೈಓವರ್ ಸಂಚಾರ ಕ್ಲೋಸ್ ಮಾಡಲು ಕಾರಣವೇನು?
ಎಚ್‌ಎಸ್‌ಆರ್ ಲೇಔಟ್‌ನ 14 ನೇ ಮುಖ್ಯರಸ್ತೆಯಲ್ಲಿ ಬಿಎಂಆರ್‌ಸಿಎಲ್ ಸ್ಲೈಡಿಂಗ್ ಗರ್ಡಲ್ ಓರೆಯಾಗಿರುವ ಕಾರಣ, ಫ್ಲೈಓವರ್ ಸಂಚಾರವನ್ನು ಮುಚ್ಚಲಾಗಿದೆ. ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಲು ಸೂಚನೆಯನ್ನು ನೀಡಲಾಗಿದೆ.
ಸಿಲ್ಕ್ ಬೋರ್ಡ್ ಕಡೆಗೆ ಹೊರಹೋಗುವ ಸಂಚಾರವನ್ನು 19 ನೇ ಮುಖ್ಯರಸ್ತೆ ಮೂಲಕ ತಿರುಗಿಸಲಾಗಿದೆ. ಸಾರ್ವಜನಿಕರು ಇದಕ್ಕೆ ದಯವಿಟ್ಟು ಸಹಕರಿಸಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಪ್ರಯಾಣವನ್ನು ಯೋಜಿಸಿ ಎಂದು ಬೆಂಗಳೂರು ಸಂಚಾರ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ
ಫ್ಲೈಓವರ್ ದಿಢೀರನೆ ಮುಚ್ಚುವಿಕೆಯ ನಿರ್ಧಾರದಿಂದ ಅನೇಕ ಪ್ರಯಾಣಿಕರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ. ವಾರಾಂತ್ಯದಲ್ಲಿ ಅಥವಾ ಆಫ್-ಪೀಕ್ ಸಮಯದಲ್ಲಿ ನಿರ್ಮಾಣ ಕಾರ್ಯವನ್ನು ಏಕೆ ನಿಗದಿಪಡಿಸಲಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಾಹನ ಸವಾರರ ಆಕ್ರೋಶ
ಎಚ್‌ಎಸ್‌ಆರ್ ಲೇಔಟ್ ಫ್ಲೈಓವರ್‌ನ್ನು ಬಂದ್ ಮಾಡಿರುವುದಕ್ಕೆ ವಾಹನ ಸವಾರರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆ ಬಳಕೆದಾರರೊಬ್ಬರು, ಇಂತಹ ವಿಷಯವನ್ನು ಒಂದು ದಿನ ಮುಂಚಿತವಾಗಿ ವಾಹನ ಸವಾರರ ಗಮನಕ್ಕೆ ತರಬೇಕು. ಆಗ ಅವರು, ಪರ್ಯಾಯ ಯೋಜನೆಗಳನ್ನು ರೂಪಿಸಿಕೊಳ್ಳುತ್ತಾರೆ. ಭಾರೀ ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಜನರ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.
ಬಿಎಂಆರ್‌ಸಿಎಲ್ ಅಧಿಕಾರಿಗಳು ಈ ಕಾಮಗಾರಿಯನ್ನು ವಾರಂತ್ಯ ಅಥವಾ ಟ್ರಾಫಿಕ್ ಕಡಿಮೆಯಿರುವ ಸಮಯದಲ್ಲಿ ಮಾಡಬಹುದಿತ್ತು. ಕನಿಷ್ಠ ಶುಕ್ರವಾರದಂದು ಕೈಗೊಳ್ಳಬಹುದಿತ್ತು. ಬುಧವಾರ ಹೊರ ವರ್ತುಲ ರಸ್ತೆಯಿಂದ ಐಟಿಪಿಎಲ್‌ವರೆಗೆ ಹಲವು ಕಂಪನಿಗಳು ಕಾರ್ಯನಿರ್ವಹಿಸುತ್ತವೆ. ಈಗ ರಸ್ತೆಗಳು ಸಂಪೂರ್ಣ ಅಸ್ತವ್ಯಸ್ತಗೊಂಡಿವೆ. ಮುಂದಿನ ಸಲವಾದರೂ ಅಧಿಕಾರಿಗಳು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಮತ್ತೊಬ್ಬ ಬಳಕೆದಾರ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಯಲಹಂಕ ವಾಯುನೆಲೆಯಲ್ಲಿ ಏರ್ ಶೋ 2025 ಆರಂಭವಾಗಿದೆ. ಆ ಭಾಗದಲ್ಲೂ ಇನ್ನಿಲ್ಲದಂತೆ ವಾಹನ ದಟ್ಟಣೆ ಕಂಡು ಬಂದಿದೆ. ಮಹಾಕುಂಭ ಮೇಳದಿಂದಾಗಿ ಪ್ರಯಾಗ್‌ರಾಜ್ ರಸ್ತೆಗಳಲ್ಲಿ ಉಂಟಾಗಿದ್ದ ಟ್ರಾಪಿಕ್ ಜಾಮ್‌ಗೆ ಬೆಂಗಳೂರು ದಟ್ಟಣೆ ಸ್ಪರ್ಧೆ ಒಡ್ಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನದಿಂದಾಗಿ ಬೆಂಗಳೂರಿನ ಉತ್ತರ ಭಾಗಗಳು ಸಹ ಭಾರೀ ದಟ್ಟಣೆಯನ್ನು ಅನುಭವಿಸಬೇಕಾಗುತ್ತದೆ. ಮುಂಬರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯು ಸಂದರ್ಶಕರ ಒಳಹರಿವನ್ನು ತರಲಿದ್ದು, ಒಟ್ಟಾರೆ ಸಂಚಾರ ಪರಿಸ್ಥಿತಿಗಳು ಹದಗೆಡುವ ಸಾಧ್ಯತೆಯಿದೆ.
ಸಂಚಾರ ಪೊಲೀಸರು ದಟ್ಟಣೆಯನ್ನು ನಿರ್ವಹಿಸಲು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದಾರೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಜಾಲ ವಿಸ್ತರಣೆ ಆಗುತ್ತಿದೆ. ನಮ್ಮ ಮೆಟ್ರೋ 2a ಮತ್ತು 2b ಯೋಜನೆ ಕಾರ್ಯ ಭರದಿಂದ ಸಾಗಿದೆ. ಸಿಲ್‌ಬೋರ್ಡ್‌ನಿಂದ ಎಚ್‌ಆರ್‌ಲೇಔಟ್ ಮಾರ್ಗವಾಗಿ ಕೆ.ಆರ್.ಪುರಂವರೆಗೆ ನೀಲಿ ಮಾರ್ಗದಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ


Click it and Unblock the Notifications