ಐಸಿಐಸಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ವಿಡಿಯೋಕಾನ್ ಸಿಇಒ, ಚೇರ್‌ಮನ್ ವೇಣುಗೋಪಲ್ ದೂತ್‌ರನ್ನು ಕೇಂದ್ರಿಯಾ ತನಿಖಾ ದಳ (ಸಿಬಿಐ) ಬಂಧನ ಮಾಡಿದೆ. ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೋಚರ್ ಹಾಗೂ ಆಕೆಯ ಪತಿ ದೀಪಕ್ ಕೋಚರ್‌ರನ್ನು ಸಿಬಿಐ ಬಂಧನ ಮಾಡಿದ ಎರಡು ದಿನಗಳ ನಂತರ ಸಿಬಿಐ ಈಗ ವೇಣುಗೋಪಲ್ ದೂತ್‌ರನ್ನು ಬಂಧಿಸಿದೆ.
ಚಂದಾ ಕೋಚರ್ ಐಸಿಐಸಿಐ ಬ್ಯಾಂಕ್‌ನಲ್ಲಿ ಸಿಇಒ ಆಗಿದ್ದ ಸಂದರ್ಭದಲ್ಲಿ ಸುಮಾರು 3,000 ಕೋಟಿ ರೂಪಾಯಿಯ ಸಾಲ ವಂಚನೆ ಪ್ರಕರಣ ನಡೆದಿದೆ ಎಂಬ ಆರೋಪದ ತನಿಖೆಯನ್ನು ಸಿಬಿಐ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿ ಕೋಚರ್ ದಂಪತಿಯ ವಿಚಾರಣೆ ನಡೆಸಿ, ವಿಚಾರಣೆಗೆ ಸಹಕಾರ ನೀಡದ ಕಾರಣದಿಂದಾಗಿ ಬಂಧನ ಮಾಡಲಾಗಿದೆ.
ಚಂದಾ ಕೋಚರ್, ಆಕೆಯ ಪತಿ ದೀಪಕ್ ಕೋಚರ್ ಹಾಗೂ ವಿಡಿಯೋಕಾನ್ ಗ್ರೂಪ್ ಪ್ರೊಮೋಟರ್ ವೇಣುಗೋಪಲ್ ದೂತ್ ಭ್ರಷ್ಟಾಚಾರ ಮಾಡಿದ್ದಾರೆ ಹಾಗೂ ಕ್ರಿಮಿನಲ್ ಪಿತೂರಿ ಮಾಡಿದ್ದಾರೆ ಎಂಬ ಆರೋಪವಿದೆ. ಸಾಲ ವಂಚನೆ ಪ್ರಕರಣದ ಎಫ್‌ಐಆರ್‌ನಲ್ಲಿ ನುಪವರ್ ರಿನಿವೇಬಲ್ಸ್ (ಎನ್‌ಆರ್‌ಎಲ್), ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ಹೆಸರು ಕೂಡಾ ಉಲ್ಲೇಖವಾಗಿದೆ.

ದೀಪಕ್ ಕೋಚರ್‌ನ ನುಪವರ್ ರಿನಿವೇಬಲ್ಸ್ ಮೇಲೆ ವೇಣುಗೋಪಲ್ ದೂತ್ 64 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ಸಿಬಿಐ ಹೇಳಿದೆ. ವಿಡಿಯೋಕಾನ್ ಗ್ರೂಪ್ ಪ್ರೊಮೋಟರ್ ವೇಣುಗೋಪಲ್ ದೂತ್ ಈ ಹೂಡಿಕೆಯನ್ನು ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಡೆಟ್ (ಎಸ್‌ಇಪಿಎಲ್) ಮೂಲಕ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮಾಹಿತಿ ಪ್ರಕಾರ ಈ ಮೊತ್ತವನ್ನು ದೀಪಕ್ ಕೋಚರ್ ನಿರ್ವಹಣೆ ಮಾಡುವ ಪಿನ್ನಾಕಲ್ ಎನರ್ಜಿ ಟ್ರಸ್ಟ್‌ಗೆ ವರ್ಗಾವಣೆ ಮಾಡಲಾಗಿದೆ. 2010ರಿಂದ 2012ರ ನಡುವೆ ಈ ಹಣ ವರ್ಗಾವಣೆಗಳು ನಡೆದಿದೆ.
ಸಿಬಿಐ ಪ್ರಕಾರ ವಿಡಿಯೋಕಾನ್ ಗ್ರೂಪ್ ಸಂಸ್ಥೆಗೆ 3,250 ಕೋಟಿ ರೂಪಾಯಿ ಸಾಲ ಮಂಜೂರು ಆಗಿದೆ. ಆದರೆ ಈ ಸಾಲವನ್ನು ಮಂಜೂರು ಮಾಡುವಾಗ ಆರ್‌ಬಿಐ ನಿಯಮ ಹಾಗೂ ಐಸಿಐಸಿಐ ಬ್ಯಾಂಕ್ಸ್ ಕ್ರೆಡಿಟ್ ಪಾಲಿಸಿಯನ್ನು ಉಲ್ಲಂಘನೆ ಮಾಡಲಾಗಿದೆ.


Click it and Unblock the Notifications