ನಾವೆಲ್ಲರೂ ಒಂದಲ್ಲಾ ಒಂದು ಸಂದರ್ಭದಲ್ಲಿ ಯಾರಿಗೋ "ಧನ್ಯವಾದ" ಹೇಳಬೇಕಾಗುತ್ತದೆ. ಹೇಳಲೇಬೇಕಾಗಿರುತ್ತದೆ. ಈ ಲೇಖನವನ್ನು ಓದಿದ ಮೇಲೆ ಕೃತಜ್ಞತೆಯನ್ನು ತೋರಿಸುವ ಅವಕಾಶದ ಮಹತ್ವ ಅರ್ಥವಾದಲ್ಲಿ ಸಂತೋಷ. ತನಗೆ ಗಣಿತ ಹೇಳಿಕೊಟ್ಟಿದ್ದ ಗುರ್ ದಯಾಲ್ ಸರೂಪ್ ಸೈನಿ ಅವರಿಗೆ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಎಂ.ಡಿ. ಹಾಗೂ ಸಿಇಒ ವೈದ್ಯನಾಥನ್ ಅವರು 30 ಲಕ್ಷ ರುಪಾಯಿ ಮೌಲ್ಯದ ಒಂದು ಲಕ್ಷ ಷೇರುಗಳನ್ನು ಗೌರವ ಸೂಚಕವಾಗಿ ನೀಡಿದ್ದಾರೆ.
ತಮ್ಮ ಜೀವನದ ಆರಂಭದ ಹಂತದಲ್ಲಿ ನೆರವು ನೀಡಿದ ಸೈನಿ ಅವರಿಗೆ ಗೌರವ ಸಲ್ಲಿಸುವುದಕ್ಕಾಗಿ ಷೇರುಗಳನ್ನು ವರ್ಗಾವಣೆ ಮಾಡಿದ್ದಾರೆ. ಇಂಟರ್ ವ್ಯೂಗಾಗಿ ತೆರಳುವುದಕ್ಕೆ ವೈದ್ಯನಾಥನ್ ಗೆ ಸೈನಿ ಅವರು ಹಣ ನೀಡಿದ್ದರಂತೆ. ಆ ಬಗ್ಗೆ ಮಾಹಿತಿಯು ಫೇಸ್ ಬುಕ್ ನಲ್ಲಿ ಪೋಸ್ಟ್ ಆದ ಮೇಲೆ ವೈರಲ್ ಆಗಿದೆ.
ಇಂಟರ್ ವ್ಯೂಗೆ ಭಾಗವಹಿಸಲು ಹಣ
"ಅವರಿಗೆ (ವೈದ್ಯನಾಥನ್) ಬಿಐಟಿಎಸ್ ಗೆ ಪ್ರವೇಶ ಸಿಕ್ಕ ಮೇಲೆ ಇಂಟರ್ ವ್ಯೂ ಹಾಗೂ ಕೌನ್ಸೆಲಿಂಗ್ ನಲ್ಲಿ ಭಾಗವಹಿಸುವುದಕ್ಕೆ ತೆರಳಲು ಹಣ ಇರಲಿಲ್ಲ. ಆಗ ವೈದ್ಯನಾಥನ್ ರ ಗಣಿತ ಮೇಷ್ಟರು ಗುರ್ ದಯಾಳ್ ಸೈನಿ ಅವರು 500 ರುಪಾಯಿ ನೀಡಿದ್ದರು. ವೈದ್ಯ ವ್ಯಾಸಂಗ ಮಾಡಿದ್ದು ಬಿಐಟಿಎಸ್, ಮೆಸ್ರಾದಲ್ಲಿ. ವೃತ್ತಿ ಜೀವನದಲ್ಲಿ ಅದ್ಭುತ ಜೀವನ ನಡೆಸಿದ್ದಾರೆ," ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಇದೆ.
ಹಣ ಹಿಂತಿರುಗಿಸಲು ಹುಡುಕಾಟ
ಆ ಹಣವನ್ನು ಹಿಂತಿರುಗಿಸುವುದಕ್ಕೆ ವೈದ್ಯನಾಥನ್ ಅವರು ಸೈನಿಗಾಗಿ ಹುಡುಕಾಡಿದ್ದಾರೆ. ಆದರೆ ಅಷ್ಟರಲ್ಲಿ ಕೆಲಸ ಬದಲಾಯಿಸಿ ಬಿಟ್ಟಿರುತ್ತಾರೆ. ಹಲವು ವರ್ಷಗಳ ನಂತರ ಸೈನಿ ಆಗ್ರಾದಲ್ಲಿ ಇದ್ದಾರೆ ಎಂದು ತಮ್ಮ ಹಳೆಯ ಸಹೋದ್ಯೋಗಿ ಮೂಲಕ ಮಾಹಿತಿ ಸಿಗುತ್ತದೆ. ಆಗ ತಮ್ಮ ಗೌರವವನ್ನು ಅವರಿಗೆ ಸೂಚಿಸಿದ್ದಾರೆ.
ಐಡಿಎಫ್ ಸಿ ಫಸ್ಟ್ ಬ್ಯಾಂಕ್ 1 ಲಕ್ಷ ಷೇರುಗಳ ವರ್ಗಾವಣೆ
ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ನಿಂದ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಫೈಲಿಂಗ್ ಮಾಡಲಾಗಿದೆ. "ನಾವು ಈ ಮೂಲಕ ತಿಳಿಯಪಡಿಸುವುದೇನೆಂದರೆ, ವೈದ್ಯನಾಥನ್ ಗೆ ಸೇರಿದ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ನ ಫುಲ್ಲಿ ಪೇಯ್ಡ್ ಅಪ್ 1 ಲಕ್ಷ ಷೇರುಗಳನ್ನು ವರ್ಗಾವಣೆ ಮಾಡಿದ್ದಾರೆ. ತಮ್ಮ ಮಾಜಿ ಶಿಕ್ಷಕರಾದ ಗುರ್ ದಯಾಳ್ ಸರೂಪ್ ಸೈನಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ," ಎಂದು ಬ್ಯಾಂಕ್ ಫೈಲಿಂಗ್ ನಲ್ಲಿ ತಿಳಿಸಲಾಗಿದೆ.
ಇದು ನಿಜವಾದ ಗುರು- ಶಿಷ್ಯ ಸಂಬಂಧ
ವೈದ್ಯನಾಥನ್ ಅವರು ತಮ್ಮ ಗುರುಗಳಿಗೆ ತೋರಿಸಿದ ಗೌರವವನ್ನು ನೆಟ್ಟಿಗರು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಈ ಕಾಲದಲ್ಲಿ ಇಂಥ ನಡವಳಿಕೆ ನೋಡುವುದು ಅಪರೂಪ ಎಂದು ಒಬ್ಬರು ಹೇಳಿದ್ದರೆ, ಇದು ನಿಜವಾದ ಗುರು- ಶಿಷ್ಯ ಸಂಬಂಧ. ಇದನ್ನು ನೋಡಲು ಸಿಗುವುದು ಈ ಕಾಲದಲ್ಲಿ ಅಪರೂಪ. ಬಹಳ ವಿದ್ಯಾರ್ಥಿಗಳಿಗೆ ಇಂಥ ಶಿಕ್ಷಕರು ಸಿಗುವುದು ಕಷ್ಟ. ಇನ್ನು ಎತ್ತರ ತಲುಪಿಕೊಂಡ ಮೇಲೆ ವಿದ್ಯಾರ್ಥಿಗಳು ಇಷ್ಟು ವಿಧೇಯರಾಗಿ ಇರುವುದು ಕೂಡ ಕಷ್ಟ ಎಂದಿದ್ದಾರೆ.


Click it and Unblock the Notifications