ಆದಾಯ ತೆರಿಗೆ ಇಲಾಖೆಯು ಸೋಮವಾರದಂದು (ಜನವರಿ 4, 2021) ಜೀ ಸಮೂಹ ಹಾಗೂ ಲಾರ್ಸನ್ ಅಂಡ್ ಟೂಬ್ರೋ (L&T ಇಂಡಿಯಾ) ಕಚೇರಿ ಮೇಲೆ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದಲ್ಲಿ ಈ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಈ ಮೂಲಗಳ ಪ್ರಕಾರ, ಜೀ ಸಮೂಹಕ್ಕೆ ಸೇರಿದ ಮುಂಬೈನಲ್ಲಿನ 15 ಸ್ಥಳಗಳಲ್ಲಿ ಐ.ಟಿ. ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆ ಸಂಜೆಯ ತನಕ ಮುಂದುವರಿಯುತ್ತದೆ ಎಂದು ತಿಳಿಸಿರುವುದಾಗಿ ವರದಿ ಆಗಿದೆ.
ಜಿಎಸ್ ಟಿ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಡಿಜಿಜಿಐ ಹಂಚಿಕೊಂಡ ಮಾಹಿತಿ ಆಧಾರದಲ್ಲಿ ಎರಡು ಕಂಪೆನಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಡೆರೈಕ್ಟೊರೇಟ್ ಜನರಲ್ ಆಫ್ ಸೆಂಟ್ರಲ್ ಎಕ್ಸೈಸ್ ಇಂಟೆಲಿಜೆನ್ಸ್ (ಡಿಜಿಸಿಇಐ) ಎಂದು ಇದ್ದದ್ದು ಈಗ ಡೈರೆಕ್ಟೊರೇಟ್ ಜನರಲ್ ಆಫ್ ಜಿಎಸ್ ಟಿ ಇಂಟೆಲಿಜೆನ್ಸ್ (ಡಿಜಿಜಿಐ) ಎಂದು ಹೆಸರು ಬದಲಾಗಿದೆ. ಜಿಎಸ್ ಟಿ ಗುಪ್ತಚರ ವಿಭಾಗವು ಹಂಚಿಕೊಂಡ ಮಾಹಿತಿ ಆಧಾರದಲ್ಲಿ ಈ ಎರಡು ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 133A ಅಡಿಯಲ್ಲಿ ತೆರಿಗೆ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.
"ತೆರಿಗೆ ಅಧಿಕಾರಿಗಳು ಕಂಪೆನಿಯ ಕಚೇರಿಗಳಿಗೆ ಭೇಟಿ ನೀಡಿ, ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕಂಪೆನಿಯ ಸಂಬಂಧಪಟ್ಟ ಅಧಿಕಾರಿಗಳು ಎಲ್ಲ ಅಗತ್ಯ ಮಾಹಿತಿಗಳನ್ನು ನೀಡುತ್ತಿದ್ದಾರೆ ಮತ್ತು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ," ಎಂದು ಜೀ ವಕ್ತಾರರು ಮಾಹಿತಿ ನೀಡಿದ್ದಾರೆ. ಎಲ್ ಅಂಡ್ ಟಿಯಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.


Click it and Unblock the Notifications