2019ರ ಕೊನೆಗೆ ಸ್ವಿಸ್ ಬ್ಯಾಂಕ್ ಗಳಲ್ಲಿ ಹಣ ಇಟ್ಟಿರುವ ನಾಗರಿಕರು ಹಾಗೂ ಸಂಸ್ಥೆಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್ ಡಮ್ ಮೊದಲ ಸ್ಥಾನದಲ್ಲಿದೆ. ಇದು ಸ್ವಿಟ್ಜರ್ಲೆಂಡ್ ನೀಡಿರುವ ಇತ್ತೀಚಿನ ಪಟ್ಟಿ. ಕಳೆದ ವರ್ಷ ಭಾರತ 74ನೇ ಸ್ಥಾನದಲ್ಲಿತ್ತು. ಈ ಬಾರಿ ಮೂರು ಸ್ಥಾನಗಳು ಕುಸಿದಿದೆ.
ಸ್ವಿಸ್ ನ್ಯಾಷನಲ್ ಬ್ಯಾಂಕ್ ಬಿಡುಗಡೆ ಮಾಡಿರುವ ವಾರ್ಷಿಕ ಲೆಕ್ಕಾಚಾರದ ವಿಶ್ಲೇಷಣೆ ಪ್ರಕಾರ, ಸ್ವಿಸ್ ಬ್ಯಾಂಕ್ ಗಳಲ್ಲಿ ಇರುವ ಭಾರತದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಹಣದ ಪ್ರಮಾಣ 0.06 ಪರ್ಸೆಂಟ್ ಮಾತ್ರ. ವಿದೇಶಿ ಗ್ರಾಹಕರೆಲ್ಲರನ್ನೂ ಗಣನೆಗೆ ತೆಗೆದುಕೊಂಡು, ಸ್ವಿಸ್ ಮೂಲದ ಬ್ಯಾಂಕ್ ಗಳಲ್ಲಿ ಎಷ್ಟು ಹಣ ಇಡಲಾಗಿದೆ ಎಂಬ ಪಟ್ಟಿಯಲ್ಲಿ ಕಂಡುಬಂದಿರುವ ಅಂಕಿ- ಅಂಶ ಇದು.
ಭಾರತ ಮೂಲದ ಹಣ 6,625 ಕೋಟಿ ರುಪಾಯಿ
2019ರ ಕೊನೆಗೆ ಯು.ಕೆ. ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸ್ವಿಸ್ ಬ್ಯಾಂಕ್ ಗಳಲ್ಲಿ ಇಟ್ಟಿರುವ ಹಣದ ಪ್ರಮಾಣ 27 ಪರ್ಸೆಂಟ್. ಭಾರತದ ಮಟ್ಟಿಗೆ ಹೇಳುವುದಾದರೆ ಇಟ್ಟಿರುವ ಮೊತ್ತ 6,625 ಕೋಟಿ ರುಪಾಯಿ. ಕಳೆದ ವರ್ಷ 5.8 ಪರ್ಸೆಂಟ್ ನಷ್ಟು ಮೊತ್ತ ಕಡಿಮೆ ಆಗಿದೆ. ಈಗ ಇಟ್ಟಿರುವ ಠೇವಣಿಯಲ್ಲಿ ವೈಯಕ್ತಿಕ ಖಾತೆದಾರರು, ಬ್ಯಾಂಕ್ ಗಳು ಹಾಗೂ ಸಂಸ್ಥೆಗಳದು ಸಹ ಹಣ ಇದೆ ಎಂದು ತಿಳಿಸಲಾಗಿದೆ. ಇದರ ಜತೆಗೆ ಡೆಪಾಸಿಟ್ ಅಲ್ಲದ ಮೊತ್ತ ಸಹ ಇದೆ. ಇದು ಅಧಿಕೃತವಾಗಿ ಸ್ವಿಸ್ ನ್ಯಾಷನಲ್ ಬ್ಯಾಂಕ್ ವರದಿ. ಇದರಲ್ಲಿ ಭಾರತೀಯರು ಕಪ್ಪು ಹಣ ಇಟ್ಟಿದ್ದಾರೆ ಎಂಬ ಬಗೆಗಿನ ಆರೋಪದ ಸೂಚನೆ ಇಲ್ಲ. ಜತೆಗೆ ಭಾರತೀಯರು, ಎನ್ ಆರ್ ಐಗಳು ಅಥವಾ ಇನ್ಯಾರಾದರೂ ಸ್ವಿಸ್ ಬ್ಯಾಂಕ್ ನಲ್ಲಿ ಬೇರೆ ದೇಶದ ಗುರುತು ಹೇಳಿಕೊಂಡು ಇಟ್ಟ ಹಣದ ಬಗ್ಗೆಯೂ ಮಾಹಿತಿ ಇಲ್ಲ.
ಟಾಪ್ ಒಂದನೇ ಸ್ಥಾನದಲ್ಲಿದೆ ಯುನೈಟೆಡ್ ಕಿಂಗ್ ಡಮ್
ಯು.ಕೆ., ಯು.ಎಸ್., ವೆಸ್ಟ್ ಇಂಡೀಸ್, ಫ್ರಾನ್ಸ್ ಹಾಗೂ ಹಾಂಕಾಂಗ್ ಮೊದಲ ಐದು ಸ್ಥಾನದಲ್ಲಿವೆ. ಸ್ವಿಸ್ ಬ್ಯಾಂಕ್ ನಲ್ಲಿ ಇರುವ ಒಟ್ಟು ಮೊತ್ತದ ಶೇಕಡಾ ಐವತ್ತಕ್ಕಿಂತ ಹೆಚ್ಚು ಮೊತ್ತ ಈ ದೇಶದ ಖಾತೆಗಳಿಗೆ ಸೇರಿದ್ದು. ಇನ್ನು ಟಾಪ್ ಟೆನ್ ಪಟ್ಟಿಯನ್ನು ನೋಡಿದರೆ, ಮೂರನೇ ಎರಡರಷ್ಟು ಮೊತ್ತ ಇವುಗಳದು. ಮೊದಲ ಹದಿನೈದು ದೇಶಗಳ ಪಟ್ಟಿ ನೋಡಿದರೆ ಶೇಕಡಾ 75ರಷ್ಟು ಹಣ ಇವುಗಳದೇ ಇದೆ. ಟಾಪ್ ಹತ್ತರ ಪಟ್ಟಿಯಲ್ಲಿ ಜರ್ಮನಿ, ಲಕ್ಸೆಂಬರ್ಗ್, ಬಹಾಮಸ್, ಸಿಂಗಪೂರ್ ಹಾಗೂ ಕೇಯ್ಮನ್ ದ್ವೀಪ ಇದೆ. ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ್, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಭೂತಾನ್ ಇವೆಲ್ಲವೂ ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲಿವೆ.
ಒಟ್ಟು ಹಣ 1.44 ಲಕ್ಷ ಕೋಟಿ ಸ್ವಿಸ್ ಫ್ರಾಂಕ್
ಈಚೆಗೆ ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇಡುವವರ ಪ್ರಮಾಣ ಕಡಿಮೆ ಆಗುತ್ತಿದೆ. ಹಣ ಇಟ್ಟವರ ರಹಸ್ಯವನ್ನು ಹಂಚಿಕೊಳ್ಳುವ ಪರಿಪಾಠ ಬಂದ ಮೇಲೆ ಆಗಿರುವ ಬದಲಾವಣೆ ಇದು. ಆದರೆ ಕಳೆದ ವರ್ಷದ ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ನಿಂದ ಆಗಿರುವ ಡೆಪಾಸಿಟ್ 3600 ಪರ್ಸೆಂಟ್ ಏರಿಕೆ ಕಂಡಿದೆ. ಹಣ ಇಡುವ ಪ್ರಮಾಣದಲ್ಲಿ ಹೆಚ್ಚಳ ಕಂಡಿರುವ ರಾಷ್ಟ್ರಗಳು ಯಾವುದೆಂದು ನೋಡಿದರೆ, ಇರಾಕ್ ಹಾಗೂ ಉತ್ತರ ಕೊರಿಯಾ ಟಾಪ್ ಟೆನ್ ಪಟ್ಟಿಯಲ್ಲಿ ಇವೆ. ಅವುಗಳ ಮೊತ್ತ ಕ್ರಮವಾಗಿ 500 ಹಾಗೂ 110 ಪರ್ಸೆಂಟ್ ಹೆಚ್ಚಳವಾಗಿವೆ. ಇಳಿಕೆ ಆಗಿರುವ ಪಟ್ಟಿಯಲ್ಲಿ ಮಾಲ್ಡೀವ್ಸ್ ಮೊದಲ ಸ್ಥಾನದಲ್ಲಿ ಇದ್ದು, 97 ಪರ್ಸೆಂಟ್ ಇಳಿಕೆ ಆಗಿದೆ. 2019ರಲ್ಲಿ ಎಲ್ಲ ದೇಶಗಳ ಜನರು, ಸಂಸ್ಥೆಗಳು ಸೇರಿದಂತೆ ಹೊಂದಿರುವ ಹಣದ ಪ್ರಮಾಣ 1.44 ಲಕ್ಷ ಕೋಟಿ ಸ್ವಿಸ್ ಫ್ರಾಂಕ್. ಭಾರತದ ರುಪಾಯಿ ಅಂದರೆ, ಒಂದು ಸ್ವಿಸ್ ಫ್ರಾಂಕ್ ಗೆ 79.80 (ಜೂನ್ 26, 2020) ಇದೆ.


Click it and Unblock the Notifications