ಜಾಗತಿಕ ಬೆಳವಣಿಗೆಗೆ ಭಾರತವು ಸರಿಸುಮಾರು ಶೇಕಡ 15ರಷ್ಟು ಕೊಡುಗೆಯನ್ನು ನೀಡುತ್ತಿದೆ. ಇದು ದೇಶದ ಬಲವಾದ ಸ್ಥೂಲ ಆರ್ಥಿಕ ಮೂಲಭೂತ ಮತ್ತು ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಹಣಕಾಸು ವರ್ಷ 2024ರ ಮೂರನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದರು. ಆರ್‌ಬಿಐನ ಆರು ಸದಸ್ಯರ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಮೂರು ದಿನಗಳ ಸಭೆ ಆಗಸ್ಟ್ 8 ರಿಂದ 10 ರವರೆಗೆ ನಡೆಯಿತು. ಈ ಸಭೆಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಶಕ್ತಿಕಾಂತ ದಾಸ್ ಇಂದು ಪ್ರಕಟಿಸಿದ್ದಾರೆ.

ಹಣದುಬ್ಬರದ ನಿಯಂತ್ರಣಕ್ಕಾಗಿ ಈ ಹಿಂದೆ ಸತತವಾಗಿ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡುತ್ತಾ ಬಂದಿದ್ದ ಆರ್‌ಬಿಐ ಸತತ ಮೂರನೇ ಬಾರಿಗೆ ಈಗ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ನಿರ್ಧರಿಸಿದೆ. ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ವಿತ್ತೀಯ ನೀತಿ ಸಮಿತಿ (ಎಂಪಿಸಿ) ಸರ್ವಾನುಮತದಿಂದ ದರವನ್ನು ಯಥಾಸ್ಥಿತಿಯಲ್ಲಿ ಶೇಕಡ 6.5ರಷ್ಟು ಇರಿಸಲು ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
ಭಾರತದ ಬೆಳವಣಿಗೆಯ ವೇಗವನ್ನು ಉಳಿಸಿಕೊಳ್ಳುವಲ್ಲಿ ನಾವು ಉತ್ತಮ ಪ್ರಗತಿ ಸಾಧಿಸಿದ್ದೇವೆ. ಹಣದುಬ್ಬರವು ಮಧ್ಯಮವಾಗಿದ್ದರೂ, ಕೆಲಸ ಇನ್ನೂ ಮುಗಿದಿಲ್ಲ. ಹಣದುಬ್ಬರದ ಅಪಾಯಗಳು ಇನ್ನೂ ಕೂಡಾ ಇದೆ. ಅಂತರಾಷ್ಟ್ರೀಯ ಆಹಾರ ಮತ್ತು ಶಕ್ತಿಯ ಬೆಲೆ, ದೀರ್ಘಕಾಲದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಹವಾಮಾನ ವೈಪರೀತ್ಯದ ನಡುವೆ ಈ ಬೆಳವಣಿಗೆ ಕಂಡು ಬಂದಿದೆ.
ಇನ್ನು ಆರ್‌ಬಿಐ ಯುಪಿಐ ಕನ್ವರ್ಸೇಷನಲ್ ಪೇಮೆಂಟ್ಸ್ ಅನ್ನು ಪ್ರಸ್ತಾಪಿಸಿದೆ. ಯುಪಿಐ ಲೈಟ್ ಮೂಲಕ ಸಮೀಪದ ಫೀಲ್ಡ್ ಟೆಕ್ ಅನ್ನು ಬಳಸಿಕೊಂಡು ಯುಪಿಐನಲ್ಲಿ ಆಫ್‌ಲೈನ್ ಪಾವತಿಗಳನ್ನು ಕೇಂದ್ರ ಬ್ಯಾಂಕ್ ಪರಿಚಯಿಸುತ್ತಿದೆ. ಆಫ್‌ಲೈನ್ ಮೋಡ್‌ನಲ್ಲಿ ಕಡಿಮೆ ಮೊತ್ತದ ವಹಿವಾಟಿನ್ನು ಮಾಡಬಹುದಾಗಿದೆ. ಆದರೆ ಈ ಹಿಂದೆ ಈ ಕನಿಷ್ಠ ಮಿತಿ 200 ರೂಪಾಯಿ ಇದ್ದದ್ದೂ 500 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.


Click it and Unblock the Notifications