ಇತ್ತೀಚಿನ ಭಾರತ ಚೀನಾ ಗಡಿ ತಂಟೆಯ ನಂತರ ಚೀನಾ ಮೂಲದ ವಸ್ತುಗಳನ್ನು ಬಹಿಷ್ಕರಿಸಲು ಭಾರತದಲ್ಲಿ ಅಭಿಯಾನಗಳು ನಡೆಯುತ್ತಿವೆ. ಹಲವಾರು ವ್ಯಾಪಾರ ಸಂಘಟನೆಗಳು ಬೆಂಬಲ ಸೂಚಿಸಿವೆ. ಸ್ವತಃ ಕೇಂದ್ರ ಸರ್ಕಾರವೂ ಕೂಡ ಕೆಲವು ಕ್ರಮಗಳನ್ನು ತೆಗೆದುಕೊಂಡು ಆಮದನ್ನು ಹತ್ತಿಕ್ಕಬೇಕು ಎನ್ನುತ್ತಿದೆ. ಆದರೆ ಇದಕ್ಕೆ ಕೇಂದ್ರ ಸಚಿವರೊಬ್ಬರು ವ್ತತಿರಿಕ್ತ ಹೇಳಿಕೆ ನೀಡಿದ್ದಾರೆ.
ಭಾರತ ಆಮದುಗಳಿಗೆ ವಿರೋಧಿಯಲ್ಲ ಮತ್ತು ಕೆಲವು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಪ್ರತಿಯೊಂದು ದೇಶವೂ ಎಲ್ಲವನ್ನೂ ಉತ್ಪಾದಿಸಲು ಸಜ್ಜುಗೊಂಡಿಲ್ಲ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.
ವೆಬಿನಾರ್ ಒಂದರಲ್ಲಿ ಮಾತನಾಡಿರುವ ಅವರು, ನಮಗೆ ಕಷ್ಟವಿರುವ ಕೆಲವು ಉತ್ಪನ್ನಗಳನ್ನು ನಾವು ಆಮದು ಮಾಡಿಕೊಳ್ಳಬೇಕಾಗುತ್ತದೆ. ಪ್ರತಿಯೊಂದು ದೇಶವು ಎಲ್ಲವನ್ನೂ ಉತ್ಪಾದಿಸಲು ಸಾಧ್ಯವಿಲ್ಲ. ಪ್ರತಿಯೊಂದು ದೇಶವು ಎಲ್ಲದರಲ್ಲೂ ಸ್ಪರ್ಧಾತ್ಮಕವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ ಗೋಯಲ್.
ರಫ್ತು ಮಾಡುವುದನ್ನು ಕಲಿಯಬೇಕು
ನಾವು ಆಮದುಗಳಿಗೆ ವಿರೋಧಿಯಲ್ಲ ಆದರೆ ನಾವು ರಫ್ತು ಮಾಡುವುದನ್ನು ಕಲಿಯಬೇಕು. ಕೊರೊನಾವೈರಸ್ ಸಾಂಕ್ರಾಮಿಕ ರೋಗವು ನಮಗೆ ಸ್ವಾವಲಂಬಿಗಳಾಗಿರಲು ಕಲಿಸಿದೆ ಮತ್ತು ಯಾರನ್ನೂ ಅವಲಂಬಿಸಬಾರದು ಎಂದು ಅದು ಕಲಿಸಿಕೊಟ್ಟಿದೆ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.
ಸರ್ಕಾರ ಹಲವು ಕ್ಷೇತ್ರಗಳನ್ನು ಗುರುತಿಸುತ್ತಿದೆ
ರಫ್ತು ಹೆಚ್ಚಿಸಲು ಮತ್ತು ಆಮದನ್ನು ಬದಲಿಸಲು ಸರ್ಕಾರ ಹಲವು ಕ್ಷೇತ್ರಗಳನ್ನು ಗುರುತಿಸುತ್ತಿದೆ. ಆಹಾರ ಸಂಸ್ಕರಣೆ, ಕಬ್ಬಿಣ ಮತ್ತು ಉಕ್ಕು, ಎಲೆಕ್ಟ್ರಾನಿಕ್ಸ್, ಕೈಗಾರಿಕಾ ಯಂತ್ರೋಪಕರಣಗಳು, ಪೀಠೋಪಕರಣಗಳು, ವಾಹನ ಭಾಗಗಳು ಮತ್ತು ಚರ್ಮ ಮತ್ತು ಪಾದರಕ್ಷೆಗಳು ಸೇರಿದಂತೆ ಭಾರತೀಯ ಉತ್ಪಾದನೆಯನ್ನು ಉತ್ತೇಜಿಸಲು 12 ಉದ್ಯಮ ಕ್ಷೇತ್ರಗಳನ್ನು ಗುರುತಿಸಿದೆ ಎಂದಿದ್ದಾರೆ.
ಗುಣಮಟ್ಟವನ್ನು ಸುಧಾರಿಸುವ ಮೂಲಕ
ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ, ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸುವ ಮೂಲಕ, ಉನ್ನತ ಮಟ್ಟದ ಆರ್ಥಿಕತೆಗಳನ್ನು ಪ್ರಯತ್ನಿಸುವ ಮೂಲಕ, ಸ್ಪರ್ಧಾತ್ಮಕ ಬೆಲೆ ನಿಗದಿ ಮತ್ತು ಹೊಸ ಅಭ್ಯಾಸಗಳನ್ನು ಬಳಸುವುದರ ಮೂಲಕ ಭಾರತವು, ಕೋವಿಡ್ ನಂತರದ ಜಗತ್ತಿನಲ್ಲಿ ಹೂಡಿಕೆ, ಮೂಲಸೌಕರ್ಯ ಮತ್ತು ನಾವೀನ್ಯತೆಗಳತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಪ್ರತಿಯೊಬ್ಬರು ಆತ್ಮ ನಿರ್ಭರ್ ಭಾರತ್ ಅಭಿಯಾನ್ ಬೆಂಬಲಿಸಿ
ಸರ್ಕಾರ ಮತ್ತು ವ್ಯಾಪಾರ ಸಂಸ್ಥೆಗಳು ಒಟ್ಟಾಗಿ ಬೆಳವಣಿಗೆಯನ್ನು ಹೆಚ್ಚಿಸಲು, ಹೆಚ್ಚಿನ ಉದ್ಯೋಗವನ್ನು ಯುವಜನರಿಗೆ ತಂದುಕೊಡಲು, ಪ್ರಪಂಚದೊಂದಿಗೆ ಶಕ್ತಿಶಾಲಿಯಾಗಿ ತೊಡಗಿಸಿಕೊಳ್ಳಲು ಭಾರತದಲ್ಲಿ ಪ್ರತಿಯೊಬ್ಬರು ಆತ್ಮ ನಿರ್ಭರ್ ಭಾರತ್ ಅಭಿಯಾನ್ ಬೆಂಬಲಿಸಿದರೆ ಆಮದನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಗೋಯಲ್ ಹೇಳಿದ್ದಾರೆ.


Click it and Unblock the Notifications