ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಾಗ ಭಾರತದ ರಫ್ತು ಪ್ರಮಾಣವು ಏಪ್ರಿಲ್ ತಿಂಗಳಿನಲ್ಲಿ ಶೇಕಡ 12.7ರಷ್ಟು ಕುಸಿತ ಕಂಡಿದೆ. ರಫ್ತು ಪ್ರಮಾಣವು ಏಪ್ರಿಲ್‌ನಲ್ಲಿ 34.66 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿದೆ ಎಂದು ಸೋಮವಾರ ಸರ್ಕಾರದ ಡೇಟಾ ಉಲ್ಲೇಖ ಮಾಡಿದೆ. ಇನ್ನು ಇದೇ ಸಂದರ್ಭದಲ್ಲಿ ಆಮದು ಪ್ರಮಾಣವು ಕೂಡಾ ಭಾರತದಲ್ಲಿ ಕುಸಿತವಾಗಿದೆ.
ಹೌದು ಭಾರತದಲ್ಲಿ ರಫ್ತುವಿನ ಜೊತೆ ಏಪ್ರಿಲ್ ತಿಂಗಳಿನಲ್ಲಿ ಆಮದು ಪ್ರಮಾಣವು ಕೂಡಾ ಕುಸಿತ ಕಂಡಿದೆ. ಆಮದು ಪ್ರಮಾಣವು ಶೇಕಡ 14ರಷ್ಟು ಇಳಿಕೆ ಕಂಡು, 49.9 ಬಿಲಿಯನ್ ಡಾಲರ್‌ಗೆ ತಲುಪಿದೆ. ಸರ್ಕಾರ ಡೇಟಾ ಪ್ರಕಾರ ಕಳೆದ ವರ್ಷ ಇದೇ ತಿಂಗಳಿನಲ್ಲಿ ಭಾರತದಲ್ಲಿ ಆಮದು ಪ್ರಮಾಣವು 58.06 ಬಿಲಿಯನ್ ಡಾಲರ್ ಎಂದು ಘೋಷಿಸಲಾಗಿತ್ತು.

ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಸಂತೋಷ್ ಸಾರಂಗಿ ಭಾರತದಲ್ಲಿ ವಹಿವಾಟು ಪ್ರಮಾಣ 2022-23ರಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಟ್ರೇಡ್ ಡೆಫಿಸಿಟ್ ( ಒಂದು ದೇಶದ ಆಮದು ವೆಚ್ಚವು ಅದರ ರಫ್ತು ಮೌಲ್ಯವನ್ನು ಮೀರುವುದು) ಸುಮಾರು 20 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡು 15.24 ಬಿಲಿಯನ್ ಡಾಲರ್‌ಗೆ ತಲುಪಿದೆ.
ಏಪ್ರಿಲ್‌ನಲ್ಲಿ ಭಾರತದ ರಫ್ತು ಪ್ರಮಾಣ ಕುಸಿತವಾಗಿದ್ದು ಏಕೆ?
ಭಾರತದಿಂದ ರಫ್ತು ಮಾಡಲಾಗುವ ವಸ್ತುಗಳ ಮೇಲಿನ ಬೇಡಿಕೆ ಕಡಿಮೆ ಆದ ಕಾರಣದಿಂದಾಗಿ ಭಾರತದಲ್ಲಿ ರಫ್ತು ಪ್ರಮಾಣವು ಇಳಿಕೆಯಾಗಿದೆ. ಮುಖ್ಯವಾಗಿ ಭಾರತವು ಅಧಿಕವಾಗಿ ರಫ್ತು ಮಾಡುವ ದೇಶಗಳಾದ ಯುರೋಪ್ ಹಾಗೂ ಯುಎಸ್‌ನಲ್ಲಿ ಭಾರತದ ವಸ್ತುಗಳ ಮೇಲಿನ ಬೇಡಿಕೆಯು ಕಡಿಮೆಯಾಗಿದೆ. ಈ ಸ್ಥಿತಿ ಸುಧಾರಿಸಿಕೊಳ್ಳಲು ಇನ್ನೂ ಹಲವಾರು ತಿಂಗಳುಗಳು ಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
"ಬೇಡಿಕೆ ಪ್ರಮಾಣವು ಉತ್ತಮವಾಗಿದೆ. ಯುರೋಪ್‌ನಲ್ಲಿ ಭಾರತದ ವಸ್ತುಗಳ ಬೇಡಿಕೆ ಪ್ರಮಾಣ ಚಿಂತಾಜನಕ ಸ್ಥಿತಿಗೆ ಇಳಿಯುತ್ತಿದೆ. ಯುಎಸ್‌ನಲ್ಲಿ ಬೇಡಿಕೆಯು ಕಡಿಮೆಯಾಗುತ್ತಿದೆ. ಮುಂದಿನ 2-3 ತಿಂಗಳುಗಳ ಕಾಲ ಬೇಡಿಕೆ ಪ್ರಮಾಣವು ಸುಧಾರಿಸಿಕೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿಲ್ಲ," ಎಂದು ಡೈರೆಕ್ಟರ್ ಜನರಲ್ ಆಫ್ ಫಾರಿನ್ ಟ್ರೇಡ್ (ಡಿಜಿಎಫ್‌ಟಿ) ಸಂತೋಷ್ ಸಾರಂಗಿ ತಿಳಿಸಿದ್ದಾರೆ.
ಇನ್ನು ಸೆಪ್ಟೆಂಬರ್ ವೇಳೆಗೆ ಪರಿಸ್ಥಿತಿಯು ಬದಲಾವಣೆಯಾಗಬಹುದು ಎಂದು ಭರವಸೆಯನ್ನು ಸಂತೋಷ್ ಸಾರಂಗ್ ವ್ಯಕ್ತಪಡಿಸಿದ್ದಾರೆ. "ಚೀನಾ ಆರ್ಥಿಕತೆಯು ಸುಧಾರಿಸಿಕೊಳ್ಳುತ್ತಿರುವಾಗ ಆಗಸ್ಟ್ -ಸೆಪ್ಟೆಂಬರ್ ತಿಂಗಳಿನಲ್ಲಿ ಜಾಗತಿಕ ರಫ್ತು ಪ್ರಮಾಣವು ಸುಧಾರಿಸಿಕೊಳ್ಳಬಹುದು. ಯುರೋಪ್ ಮತ್ತು ಯುಎಸ್‌ನಲ್ಲಿ ಬೇಡಿಕೆ ಹೆಚ್ಚಾಗಬಹುದು," ಎಂದು ಕೂಡಾ ಹೇಳಿದ್ದಾರೆ.
ಸತತ ಐದನೇ ತಿಂಗಳಲ್ಲಿ ಆಮದು ಕುಸಿತ
ಸತತ ಐದನೇ ತಿಂಗಳು ಭಾರತದಲ್ಲಿ ಆಮದು ಪ್ರಮಾಣವು ಕುಸಿತ ಕಂಡಿದೆ. ಆಮದು ಪ್ರಮಾಣವು ಶೇಕಡ ಶೇಕಡ 14ರಷ್ಟು ಇಳಿಕೆ ಕಂಡು, 49.9 ಬಿಲಿಯನ್ ಡಾಲರ್‌ಗೆ ತಲುಪಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ವ್ಯಾಪಾರ ಕೊರತೆ ಅಥವಾ ಟ್ರೇಡ್ ಡೆಫಿಸಿಟ್ 18.36 ಬಿಲಿಯನ್ ಡಾಲರ್ ಆಗಿತ್ತು. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ 15.24 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದಕ್ಕೂ ಹಿಂದೆ 2021ರ ಏಪ್ರಿಲ್‌ನಲ್ಲಿ ಟ್ರೇಡ್ ಡೆಫಿಸಿಟ್ 15.10 ಬಿಲಿಯನ್ ಡಾಲರ್‌ಗೆ ಇಳಿದಿತ್ತು.
ಆಮದುಗಳ ಮೇಲೆ, ಸರಕುಗಳ ಬೆಲೆಗಳು ಕಡಿಮೆಯಾಗಿರುವುದು, ರತ್ನಗಳು ಮತ್ತು ಆಭರಣಗಳಂತಹ ಉತ್ಪನ್ನಗಳಿಗೆ ಕಡಿಮೆ ಬೇಡಿಕೆಯಿಂದಾಗಿ ಈ ರಫ್ತು ಪ್ರಮಾಣವು ಇಳಿಕೆಯಾಗಿದೆ ಎಂದು ಸಾರಂಗಿ ಹೇಳಿದರು. ಎಲೆಕ್ಟ್ರಾನಿಕ್ ಸರಕುಗಳು, ಎಣ್ಣೆ ಪದಾರ್ಥ, ಎಣ್ಣೆ ಬೀಜಗಳು ಮತ್ತು ಕೃಷಿ ಸರಕುಗಳಂತಹ ಹೆಚ್ಚಿನ ರಫ್ತು ಬೇಡಿಕೆಯನ್ನು ಹೊಂದಿರುವ ಉತ್ಪನ್ನಗಳನ್ನು ಹೆಚ್ಚಾಗಿ ರಫ್ತು ಮಾಡಿಕೊಳ್ಳುವಂತೆ ಮಾಡಬೇಕಾಗಿದೆ ಎಂದು ಸಲಹೆ ನೀಡಿದ್ದಾರೆ.


Click it and Unblock the Notifications