ನವದೆಹಲಿ: ಸತತ ನಾಲ್ಕು ಲಾಕ್‌ಡೌನ್ ಘೋಷಣೆಯಾದ ನಂತರ ಜುಲೈ 1 ರಿಂದ ಅನ್ಲಾಕ್ 2.0 ಚಾಲ್ತಿಯಾಗಿ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಕಳೆದ ಮೂರು ತಿಂಗಳು ಕೊರೊನಾವೈರಸ್ ಪರಿಣಾಮ ಲಾಕ್‌ಡೌನ್ ಸಂಭವಿಸಿ ಉದ್ಯೋಗ ಪ್ರಮಾಣ ಏಕಾಏಕಿ ಕುಸಿದು ಬಿದ್ದಿತ್ತು. ಇದೀಗ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಿರುವುದರಿಂದ ಉದ್ಯೋಗ ಪ್ರಮಾಣ ಗಣನೀಯವಾಗಿ ಸುಧಾರಿಸಿಕೊಳ್ಳುತ್ತಿರುವ ವರದಿಗಳು ಬಂದಿವೆ.
ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 23.48 ಕ್ಕೆ ಹೋಲಿಸಿದರೆ ಜೂನ್ ತಿಂಗಳಲ್ಲಿ ನಿರುದ್ಯೋಗ ದರವು ಶೇ 10.99 ಕ್ಕೆ ಇಳಿದಿದೆ.
ಇದು ದೇಶದ ಉದ್ಯೋಗದ ಸನ್ನಿವೇಶದಲ್ಲಿ ಸುಧಾರಣೆಯ ಲಕ್ಷಣಗಳನ್ನು ತೋರಿಸುತ್ತದೆ ಮತ್ತು ಪೂರ್ವ-ಲಾಕ್‌ಡೌನ್ ಅವಧಿಗೆ ಮರಳುತ್ತದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಹೇಳಿದೆ. ನಗರ ಪ್ರದೇಶಗಳಲ್ಲಿನ ನಿರುದ್ಯೋಗ ದರವು ಶೇ 12.02 ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಇದು ಶೇ 10.52 ರಷ್ಟಿದೆ.
ಸರಾಸರಿ ಶೇ 25.52 ನಿರುದ್ಯೋಗ
ಮಾರ್ಚ್ 25 ರಂದು ಸರ್ಕಾರವು ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ ನಂತರ ಭಾರತದ ನಿರುದ್ಯೋಗ ದರವು ಜನವರಿಯಿಂದ ಸರಾಸರಿ ಶೇ 25.52 ರಷ್ಟು ದಾಖಲಿಸಲಾಗಿದೆ. ಮೇ ತಿಂಗಳಲ್ಲಿ ನಿರುದ್ಯೋಗ ದರವು ಶೇ 23.48 ರಷ್ಟಿತ್ತು. ಏಪ್ರಿಲ್‌ನಲ್ಲಿ ಸುಮಾರು 12.2 ಕೋಟಿ ಉದ್ಯೋಗಗಳು ನಷ್ಟವಾಗಿವೆ.
ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ 37.3 ಕೋಟಿ
ಸಿಎಮ್‌ಐಇ ಅಂಕಿಅಂಶಗಳ ಪ್ರಕಾರ ಜೂನ್‌ನಲ್ಲಿ ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ 37.3 ಕೋಟಿ ಆಗಿದ್ದರೆ, ಉದ್ಯೋಗವನ್ನು ಹುಡುಕುವವರು 46.1 ಕೋಟಿಯಾಗಿದೆ ಎಂದು ಸಿಎಮ್‌ಐಇ ಹೇಳುತ್ತದೆ.
ಹರಿಯಾಣದಲ್ಲಿ ಅತಿ ಹೆಚ್ಚು
ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗ ದರ ಕಂಡು ಬಂದಿದೆ. ಅಲ್ಲಿ ಶೇ 33.6 ನಿರುದ್ಯೋಗ ರದ ಇದ್ದರೆ ರಷ್ಟಿದ್ದರೆ, ಆ ನಂತರ ತ್ರಿಪುರ 21.3 ಮತ್ತು ಜಾರ್ಖಂಡ್ ಶೇ 21 ರಷ್ಟಿದೆ. ಕರ್ನಾಟಕ, ತಮಿಳುನಾಡಿನಲ್ಲಿ ಕಡಿಮೆ ಪ್ರಮಾಣದ ನಿರುದ್ಯೋಗ ಕಂಡು ಬಂದಿದೆ.
ಲಾಕ್‌ಡೌನ್ ಪೂರ್ವ ಅವಧಿಗೆ ಚೇತರಿಸಿಕೊಂಡಿದೆ
'ಅನ್ಲಾಕ್ 2.0 ದಿಂದ ನಿರುದ್ಯೋಗ ದರವು ಕುಸಿದಿದೆ ಪ್ರಮಾಣವು ಲಾಕ್‌ಡೌನ್ ಪೂರ್ವ ಅವಧಿಗೆ ಚೇತರಿಸಿಕೊಂಡಿದೆ' ಎಂದು ಸಿಎಮ್ಐಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ. ಗ್ರಾಮೀಣ ಭಾರತದಾದ್ಯಂತ ನಿರುದ್ಯೋಗ ದರದಲ್ಲಿ ಭಾರೀ ಸುಧಾರಣೆಯಾಗಿದೆ. ಇದರ ಹಿಂದಿನ ಕಾರಣವನ್ನು ಸರ್ಕಾರವು ಎಂಜಿಎನ್‌ಆರ್‌ಇಜಿಎ ಎಂದು ಹೇಳುತ್ತದೆ. ಅಲ್ಲದೇ ಖರ್ಚು ಹೆಚ್ಚಳ ಮತ್ತು ಮುಂಗಾರು ಬಿತ್ತನೆಯ ಹೆಚ್ಚಳದಿಂದ ಉದ್ಯೋಗ ಪ್ರಮಾಣ ಹೆಚ್ಚಾಗಿದೆ ಎಂದು ವಿವರಿಸಬಹುದು ಎಂದು ಅವರು ಹೇಳುತ್ತಾರೆ.


Click it and Unblock the Notifications