ಜಾಗತಿಕವಾಗಿ ಡಿಜಿಟಲೀಕರಣದ ಹಾದಿಯಲ್ಲಿ ಭಾರತವು ಪ್ರಮುಖ ಸ್ಥಾನವನ್ನು ಪಡೆಯಲು ಮುಂದಾಗಿದೆ. ವಿಶ್ವದಾದ್ಯಂತ ಜನರಿಗೆ ಡಿಜಿಟಲ್ ಆಧಾರದಲ್ಲಿ ಟ್ರೈನಿಂಗ್ ನೀಡುವುದು, ಡಿಜಿಟಲ್ ಮೂಲಸೌಕರ್ಯವನ್ನು ಆರಂಭಿಸುವುದು ಸೇರಿದಂತೆ ಹಲವಾರು ವಿಚಾರದಲ್ಲಿ ಭಾರತ ಮೇಲುಗೈ ಸಾಧಿಸಿದೆ. ಈಗ ಜಾಗತಿಕ ಡಿಜಿಟಲೀಕರಣಕ್ಕೆ ಭಾರತದ ಮಹತ್ತರ ಕೊಡುಗೆಯೊಂದನ್ನು ಅಳವಡಿಸಲು ಹಲವಾರು ದೇಶಗಳು ಸಜ್ಜಾಗಿದೆ.
G-20 ತಂಡದ ಡಿಜಿಟಲ್ ಇಕಾನಮಿ ವರ್ಕಿಂಗ್ ಗ್ರೂಪ್ (ಡಿಇಡಬ್ಲ್ಯೂಜಿ) ಸಭೆಯು ಜಾಗತಿಕವಾಗಿ ಡಿಜಿಟಲ್ ಮೂಲಸೌಕರ್ಯ ಹೆಚ್ಚಳ, ಸೈಬರ್ ಸುರಕ್ಷತೆ, ಡಿಜಿಟಲ್ ಆರ್ಥಿಕತೆ, ಡಿಜಿಟಲ್ ಟ್ರೈನಿಂಗ್ ಹೆಚ್ಚಳಕ್ಕೆ ಆದ್ಯತೆ ನೀಡಿದೆ. ಜಾಗತಿಕ ಡಿಜಿಟಲ್ ಆರ್ಥಿಕತೆಯು ಪ್ರಸ್ತುತ 11 ಟ್ರಿಲಿಯನ್ ಡಾಲರ್ ಮೌಲ್ಯವನ್ನು ಹೊಂದಿದೆ ಎಂದು ಅಂದಾಜು ಮಾಡಲಾಗಿದೆ. 2025ರ ವೇಳೆಗೆ ಈ ಮೌಲ್ಯ 23 ಟ್ರಿಲಿಯನ್ ಡಾಲರ್‌ಗೆ ಏರುವ ನಿರೀಕ್ಷೆಯಿದೆ.
ಭಾರತದಲ್ಲಿ ಡಿಜಿಟಲ್ ಪಾವತಿ ಮತ್ತು ಡಿಜಿಟಲ್ ಸರ್ಕಾರಿ ಸೇವೆಯು ಈಗ ವಿಶ್ವದಾದ್ಯಂತ ಗಮನ ಸೆಳೆದಿದೆ. ಹಲವಾರು ದೇಶಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಈ ಬಗ್ಗೆ ಟೆಲಿಕಾಂ, ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿಯನ್ನು ನೀಡಿದ್ದಾರೆ. ಹೆಚ್ಚಿನ ಮಾಹಿತಿ ಈ ಕೆಳಗಿದೆ ಮುಂದೆ ಓದಿ....

ಹಲವು ದೇಶಗಳಲ್ಲಿ ಯುಪಿಐ ವಹಿವಾಟು!
ಈ ಬಗ್ಗೆ ಮಾಹಿತಿ ನೀಡಿದ ಟೆಲಿಕಾಂ, ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, "ಈಗಾಗಲೇ 13 ದೇಶಗಳು ಯುಪಿಐ (ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಅನ್ನು ಪಾವತಿ ವಿಧಾನವನ್ನು ಅಳವಡಿಸಿಕೊಳ್ಳಲು ಒಪ್ಪಿದೆ. ಶೀಘ್ರದಲ್ಲೇ ಸಿಂಗಾಪುರದಲ್ಲಿ ಯುಪಿಐ ವಹಿವಾಟು ಆರಂಭವಾಗಲಿದೆ," ಎಂದು ಮಾಹಿತಿ ನೀಡಿದ್ದಾರೆ.
ಇತರೆ ದೇಶಗಳಲ್ಲಿ ಡಿಜಿಟಲ್ ವ್ಯವಸ್ಥೆಯು ಭಾರತದಂತಿಲ್ಲ. ಕೆಲವೇ ಸಂಸ್ಥೆಗಳ ನಿಯಂತ್ರಣದಲ್ಲಿದೆ. ಭಾರತದಲ್ಲಿ ಮಾತ್ರ ಡಿಜಿಟಲ್ ವ್ಯವಸ್ಥೆಯು ಎಲ್ಲರಿಗೂ ಬಳಸಲು ಸಾಧ್ಯವಾಗುವಂತಿದೆ ಎಂದು ತಿಳಿಸಿದ್ದಾರೆ. ಗೂಗಲ್ ತನ್ನ ಪೇಮೆಂಟ್ ವಿಧಾನವನ್ನು ತೊರೆದು ಯುಪಿಐ ಅನ್ನು ಅಳವಡಿಸಿಕೊಂಡಿದೆ. ಪ್ರಜಾಸತಾತ್ಮಕವಾಗಿ ಈ ವಿಧಾನವು ನಡೆಯುತ್ತಿದೆ. ಎರಡು ರೂಪಾಯಿಯಿಂದ ಎರಡು ಲಕ್ಷ ರೂಪಾಯಿಯವರೆಗಿನ ವಹಿವಾಟನ್ನು ಕೆಲವೇ ಸೆಕೆಂಡುಗಳಲ್ಲಿ ಮಾಡಲು ಸಾಧ್ಯವಾಗುತ್ತಿದೆ.
ಲಕ್ನೋದಲ್ಲಿ ನಡೆದ ಡಿಇಡಬ್ಲ್ಯೂಜಿ ಸಭೆಯಲ್ಲಿ ಎಂಎಸ್‌ಎಂಇಗಳ (Micro, Small, and Medium Enterprises) ಸೈಬರ್ ಸುರಕ್ಷತೆ ಮತ್ತು ತರಬೇತಿ ಬಗ್ಗೆ ಚರ್ಚೆ ನಡೆಸಲಾಗಿದೆ. ಎಂಎಸ್‌ಎಂಇ ಭಾರತದಲ್ಲಿ ಬೆಳವಣಿಗೆ ಕಾಣುತ್ತಿರುವ ವರ್ಗವಾಗಿದೆ. ಆದ್ದರಿಂದ ಸೈಬರ್ ಅಪರಾಧದಿಂದ ಈ ವಲಯವನ್ನು ಸುರಕ್ಷಿತವಾಗಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ.


Click it and Unblock the Notifications