"ನಾವು ಜಾಗತಿಕ ಮಟ್ಟದ ಲಿಸ್ಟಿಂಗ್ ಗೆ ಹೋಗಬೇಕು. ಜಾಗತಿಕ ಹಣಕಾಸು ಹೂಡಿಕೆಯನ್ನು ಸೆಳೆಯಬೇಕು. ನಾನು ಬಂದ ಐ.ಟಿ. (ಮಾಹಿತಿ ತಂತ್ರಜ್ಞಾನ) ವಲಯವು ವಿಶ್ವದರ್ಜೆಯದ್ದಾಗಿತ್ತು. ಅದು ವಿಶ್ವದರ್ಜೆಯ ಆಡಳಿತದ ಕಾರಣಕ್ಕೆ. ಅದರಿಂದ ಪಾಠ ಕಲಿಯಬೇಕು. ನಮ್ಮ ಇಡೀ ದೇಶದಲ್ಲಿ ಸಾಲದ ಸಮಸ್ಯೆ ಇದ್ದಾಗ ನಮ್ಮ ಕಂಪೆನಿಗೆ ಯಾವುದೇ ಸಾಲ ಇರಲಿಲ್ಲ" ಎಂದು ಇನ್ಫೋಸಿಸ್ ನ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಕ್ರಿಸ್ ಗೋಪಾಲಕೃಷ್ಣನ್ ಬುಧವಾರ ಹೇಳಿದ್ದಾರೆ.
ಭಾರತದ ಹಲವು ಕಂಪೆನಿಗಳು ಸ್ಪರ್ಧೆಗೆ 'ಹೆದರುತ್ತವೆ'. ದೇಶೀ ಸಂಸ್ಥೆಗಳಲ್ಲಿನ ಕಾರ್ಪೊರೇಟ್ ಆಡಳಿತ ವ್ಯವಸ್ಥೆ ಉತ್ತಮವಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕು. ಭಾರತೀಯ ಐ.ಟಿ. ವಲಯದಿಂದ ಕಂಪೆನಿಗಳು ಕಲಿಯಬೇಕು. ಸ್ಟಾರ್ಟ್ ಅಪ್ ಮನಸ್ಥಿತಿಯಿಂದ ಹೊಸ ತಂತ್ರಜ್ಞಾನಗಳ ಪ್ರಯೋಗಕ್ಕೆ ಮುಂದಾಗಬೇಕು ಎಂದಿದ್ದಾರೆ.
ಜಾಗತಿಕ, ದೇಶೀಯ ಆರ್ಥಿಕತೆ ಬೆಳವಣಿಗೆ ಕಾಣುತ್ತದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು ಅಂದರೆ, ಕಂಪೆನಿಗಳು ಆವಿಷ್ಕಾರಗಳಿಗಾಗಿ ಹಣ ಹೂಡಿಕೆ ಮಾಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

"ನೀವು ದೊಡ್ಡ ಕಂಪೆನಿಯಾದರೆ ಹೆಚ್ಚು ಹಣವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಅಂತಲೇ ಮೀಸಲಿಡಬೇಕು. ನಮ್ಮ ಆಡಳಿತವನ್ನು ಉತ್ತಮಗೊಳಿಸಬೇಕು. ನಮ್ಮ ಕಂಪೆನಿಗಳು ಈಗಲೂ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿಲ್ಲ. ನನಗೆ ಹೀಗೆ ಹೇಳಲು ಬೇಸರವಾಗುತ್ತದೆ. ಆದರೆ ಕೆಲವೇ ಕಂಪೆನಿಗಳಿಗೆ ಮಾತ್ರ ಆ ಸಾಮರ್ಥ್ಯ ಇದೆ. ಆದ್ದರಿಂದ ಈಗಲೂ ನಾವು ಸ್ಪರ್ಧೆಗೆ ಹೆದರುತ್ತೇವೆ" ಎಂದು ಅವರು ಹೇಳಿದ್ದಾರೆ.
ಜಾಗತಿಕ ಆರ್ಥಿಕತೆಯು 1980ರಲ್ಲಿ 11 ಟ್ರಿಲಿಯನ್ ಅಮೆರಿಕನ್ ಡಾಲರ್ ಇತ್ತು. ಅಲ್ಲಿಂದ ಈಗ 80 ಟ್ರಿಲಿಯನ್ ಅಮೆರಿಕನ್ ಡಾಲರ್ ಗೆ ಬೆಳೆದಿದೆ. ಮುಂದಿನ 30 ವರ್ಷಗಳಲ್ಲಿ ಮೂರು ಪಟ್ಟು ಬೆಳೆಯಲಿದೆ. ಈ ಬೆಳವಣಿಗೆಗೆ ಕಂಪ್ಯೂಟಿಂಗ್ ಟೆಕ್ನಾಲಜಿಯ ಕೊಡುಗೆ ಮಹತ್ತರವಾದದ್ದು. 1980ಕ್ಕೂ ಮುಂಚೆ ಮೈಕ್ರೋಸಾಫ್ಟ್, ಗೂಗಲ್ ಮತ್ತು ಅಮೆಜಾನ್ ಇರಲಿಲ್ಲ. ಅವೆಲ್ಲ ಹುಟ್ಟಿದ್ದು ಡಿಜಿಟಲ್ ಕಂಪ್ಯೂಟಿಂಗ್ ಯುಗದಲ್ಲಿ ಎಂದಿದ್ದಾರೆ.
1980ರಲ್ಲಿ ಭಾರತವು 160 ಬಿಲಿಯನ್ ಆರ್ಥಿಕತೆಯ ದೇಶವಾಗಿತ್ತು. ಅದು 2.8 ಟ್ರಿಲಿಯನ್ ಅಮೆರಿಕನ್ ಡಾಲರ್ ಗಳಷ್ಟಾಗಿದೆ. ಈ 40 ವರ್ಷಗಳಲ್ಲಿ 18 ಪಟ್ಟು ಬೆಳೆದಿದೆ ಎಂದು ಕ್ರಿಸ್ ಗೋಪಾಲಕೃಷ್ಣನ್ ಹೇಳಿದ್ದಾರೆ.


Click it and Unblock the Notifications