ಇನ್ನೇನು 2019-20ರ ಹಣಕಾಸು ವರ್ಷ ಮುಕ್ತಾಯದ ಹಂತಕ್ಕೆ ಸಾಗುತ್ತಿದೆ. ಮಾರ್ಚ್ ಮುಗಿಯುತ್ತಿದ್ದಂತೆ ಉದ್ಯೋಗಿಗಳು ಸಂಬಳ ಹೆಚ್ಚಳ ಆಗುತ್ತದೆ ಎಂದು ಎದುರು ನೋಡುತ್ತಿದ್ದಾರೆ. ಆದರೆ ವರದಿಯೊಂದರ ಪ್ರಕಾರ 2020ರಲ್ಲಿ ಭಾರತದ ಕಂಪನಿಗಳಲ್ಲಿ ಉದ್ಯೋಗಿಗಳ ಸಂಬಳ ಹೆಚ್ಚಳವು ದಶಕದಲ್ಲೇ ಅತಿ ಕಡಿಮೆ ಎಂದು ದಾಖಲಾಗಿದೆ.
2020ರಲ್ಲಿ ಭಾರತದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸರಾಸರಿ 9.1 ಪರ್ಸೆಂಟ್ ಸಂಬಳವನ್ನು ಹೆಚ್ಚಳ ಮಾಡುತ್ತವೆ ಎಂದು ವಾರ್ಷಿಕ ವೇತನ ದೃಷ್ಟಿಕೋನ ಸಮೀಕ್ಷೆಯಲ್ಲಿ ತಿಳಿಸಿದೆ. ದೇಶದ ಕಠಿಣ ಆರ್ಥಿಕ ವಾತಾವರಣದ ನಡುವೆ ಕಂಪನಿಗಳು ತಮ್ಮ ಪರ್ಸ್‌ನ್ನು ಬಿಗಿಗೊಳಿಸಲಿವೆ ಎಂದು ಮಂಗಳವಾರ ತಿಳಿಸಿದೆ.
ದಶಕದಲ್ಲೇ ಅತಿ ಕಡಿಮೆ ಸಂಬಳ ಹೆಚ್ಚಳ
2009ರಲ್ಲಿ ಭಾರತದ ಕಂಪನಿಗಳು ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆ ಸರಾಸರಿ 6.6 ಪರ್ಸೆಂಟ್ ಸಂಬಳ ಹೆಚ್ಚಳ ಮಾಡಿದ್ದವು. ಇದನ್ನು ಬಿಟ್ಟರೆ ಕಳೆದ ವೇತನ ಮೌಲ್ಯಮಾಪನ ಖುತುವಿನಲ್ಲಿ ಭಾರತೀಯ ಕಂಪನಿಗಳು ಸರಾಸರಿ 9.3 ಪರ್ಸೆಂಟ್ ಏರಿಕೆ ಮಾಡಿದ್ದವು. ಇದು 20 ವರ್ಷಗಳಲ್ಲಿ ಅತ್ಯಂತ ಕಡಿಮೆ ಆಗಿದೆ.
ಇದೀಗ ಈ ಕುಸಿತವು 2020ರಲ್ಲೂ ಮುಂದುವರೆದಿದ್ದು 9.1 ಪರ್ಸೆಂಟ್‌ಗೆ ಇಳಿಕೆಯಾಗಲಿದೆ. 2015ರಿಂದ ಸಂಬಳ ಏರಿಕೆಯು ಇಳಿಮುಖದತ್ತ ಸಾಗಿದೆ.
20 ವಲಯಗಳ 1000 ಸಂಸ್ಥೆಗಳಲ್ಲಿ ವೇತನ ಹೆಚ್ಚಳ ಇಳಿಕೆ
ವಾರ್ಷಿಕ ವೇತನ ದೃಷ್ಟಿಕೋನ ಸಮೀಕ್ಷೆಯು ಭಾರತದಲ್ಲಿ ಅತ್ಯಂತ ವಿಸ್ತಾರವಾದ ಅಧ್ಯಯನ ಮೂಲಕ ಮಾಹಿತಿ ತಿಳಿಸಿದೆ. 20 ವಲಯಗಳಿಂದ 1,000 ಕ್ಕೂ ಹೆಚ್ಚು ಸಂಸ್ಥೆಗಳ ಅಂಕಿ-ಅಂಶವನ್ನು ವಿಶ್ಲೇಷಿಸಿದೆ.
ಸಮೀಕ್ಷೆಯ ಪ್ರಕಾರ ಸ್ಟಾರ್ಟ್ಅಪ್ / ಇ-ಕಾಮರ್ಸ್, ಸೇವೆಗಳು ಮತ್ತು ಫಾರ್ಮಾ ಸಂಸ್ಥೆಗಳು , ಲಾಜಿಸ್ಟಿಕ್ಸ್, ಇನ್ಫ್ರಾ, ಆಟೋ ಮತ್ತು ಆತಿಥ್ಯದಂತಹ ಕ್ಷೇತ್ರಗಳು ಈ ವರ್ಷ ವೇತನ ಮೌಲ್ಯಮಾಪನ ಖುತುವಿನಲ್ಲಿ ಕಡಿಮೆ ಸರಾಸರಿ ವೇತನ ಹೆಚ್ಚಳವನ್ನು ಪಾವತಿಸುವ ನಿರೀಕ್ಷೆಯಿದೆ.
ಇ-ಕಾಮರ್ಸ್ ಮತ್ತು ಸ್ಟಾರ್ಟ್‌ಅಪ್ ಸಂಸ್ಥೆಗಳಲ್ಲಿ ಸಂಬಳ ಹೆಚ್ಚಳ
ಇ-ಕಾಮರ್ಸ್ ಮತ್ತು ಸ್ಟಾರ್ಟ್ಅಪ್ ಸಂಸ್ಥೆಗಳು ವೃತ್ತಿಪರ ಸೇವೆಗಳಂತೆಯೇ 10 ಪರ್ಸೆಂಟ್ ಸರಾಸರಿ ಹೆಚ್ಚಳವನ್ನು ನೀಡಲು ಸಿದ್ಧವಾಗಿದ್ದರೆ, ಫಾರ್ಮಾ ಮತ್ತು ಐಟಿ ಕಂಪನಿಗಳು ಕ್ರಮವಾಗಿ 9.9 ಪರ್ಸೆಂಟ್ ಮತ್ತು 9.6 ಪರ್ಸೆಂಟ್ ರಷ್ಟು ಸಂಬಳವನ್ನು ಹೆಚ್ಚಿಸುವ ಸಾಧ್ಯತೆಯಿದೆ.
7.6 ಪರ್ಸೆಂಟ್ ರಷ್ಟು ವೇತನ ಹೆಚ್ಚಳವನ್ನು ಹೊಂದಿರುವ ಲಾಜಿಸ್ಟಿಕ್ಸ್ ಮತ್ತು ಸಾರಿಗೆ ಕ್ಷೇತ್ರವು ಈ ವರ್ಷ ವೇತನ ಏರಿಸುವಲ್ಲಿ ಅತ್ಯಂತ ಕಡಿಮೆ ಸ್ಥಾನದಲ್ಲಿದೆ. ಆತಿಥ್ಯ (8.2%) ಮತ್ತು ಮೂಲಸೌಕರ್ಯ (8.3%) ನಂತರದ ಸ್ಥಾನದಲ್ಲಿದೆ.
ಆಟೋಮೊಬೈಲ್ ಉದ್ಯಮದಲ್ಲಿ ಇಳಿಕೆಯತ್ತ ಸಾಗಿರುವ ಸಂಬಳ ಹೆಚ್ಚಳ ದರ
ಆಟೋಮೊಬೈಲ್ ಉದ್ಯಮದದಲ್ಲಿ ಉದ್ಯೋಗಿಗಳಿಗೆ ನೀಡುವ ಸಂಬಳ ಹೆಚ್ಚಳವು ತುಂಬಾ ಇಳಿಕೆಯತ್ತ ಸಾಗುತ್ತಿದ್ದು, 2018ರಲ್ಲಿ 10.1 ಪರ್ಸೆಂಟ್ ರಿಂದ 2020ರಲ್ಲಿ 8.3 ಪರ್ಸೆಂಟ್ ಇಳಿಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
''ಭಾರತಕ್ಕೆ ಸಂಬಂಧಿಸಿದ ಕಂಪನಿಗಳು 2019ಕ್ಕೆ ಹೋಲಿಸಿದರೆ ಸರಾಸರಿ 9.3 ಪರ್ಸೆಂಟ್ ಹೆಚ್ಚಳವನ್ನು ನೀಡಿವೆ, ಇದು 2018ಕ್ಕೆ ಹೋಲಿಸಿದರೆ ಆರ್ಥಿಕತೆಯ ಕುಸಿತವನ್ನು ಪ್ರತಿಬಿಂಬಿಸುತ್ತದೆ. 2020ರಲ್ಲಿ ಈ ದರವು 20 ಬೇಸಿಸ್ ಪಾಯಿಂಟ್‌ಗಳಿಂದ ಇಳಿದು 9.1 ಪರ್ಸೆಂಟ್‌ಗೆ ತಲುಪಿದೆ. ಆದಾಗ್ಯೂ ಸಮೀಕ್ಷೆಯಲ್ಲಿ ಭಾಗವಹಿಸುವ 5 ಕಂಪೆನಿಗಳಲ್ಲಿ ಎರಡು ಅಂಕಿಯ ಹೆಚ್ಚಳವನ್ನು ಮಾಡಲು ಎದುರು ನೋಡುತ್ತಿದೆ. ಇದು ಸಕಾರಾತ್ಮಕ ಆರ್ಥಿಕ ದೃಷ್ಟಿಕೋನವನ್ನು ನಿರೀಕ್ಷಿಸುತ್ತದೆ " ಎಂದು ಸಮೀಕ್ಷೆಯು ಒತ್ತಿ ಹೇಳಿದೆ.
ಏಷ್ಯಾದ ಇತರೆ ರಾಷ್ಟ್ರಗಳಿಗಿಂತ ಭಾರತೀಯ ಕಂಪನಿಗಳೇ ಬೆಸ್ಟ್
ಭಾರತದ ಕಂಪನಿಗಳು ಈ ಬಾರಿ ಉದ್ಯೋಗಿಗಳಿಗೆ ಸರಾಸರಿ ಸಂಬಳ ಹೆಚ್ಚಳ ತಗ್ಗಿಸಿದ್ದರೂ , ಏಷ್ಯಾದ ಇತರೆ ರಾಷ್ಟ್ರಗಳ ಕಂಪನಿಗಳಿಗಿಂತ ಉತ್ತಮ ವೇತನ ಹೆಚ್ಚಳವನ್ನು ನೀಡಲಿದೆ ಎಂದು ಪ್ರಮುಖ ಮಾನವ ಸಂಪನ್ಮೂಲ ಮತ್ತು ಸಲಹಾ ಸಂಸ್ಥೆ ಅಯಾನ್ ಹೇಳಿದೆ. ಚೀನಾದ ಕಂಪನಿಗಳು 6.3%, ಫಿಲಿಪೈನ್ಸ್ 5.8%, ಮಲೇಷ್ಯಾ 5.3%, ಸಿಂಗಾಪುರ್ 3.8%, ಆಸ್ಟ್ರೇಲಿಯಾ 3.1% ಮತ್ತು ಜಪಾನ್ 2.4% ಹೆಚ್ಚಳ ಮಾಡುವ ನಿರೀಕ್ಷೆಯಿದೆ.


Click it and Unblock the Notifications