ದೇಶಾದ್ಯಂತ ಮೇ 22 ರಿಂದ ಸುಮಾರು 1.7 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಗೋಯಲ್ ಮತ್ತು ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಅವರೊಂದಿಗಿನ ವೀಡಿಯೊ ಸಂಭಾಷಣೆಯಲ್ಲಿ, "ಮುಂದಿನ 2-3 ದಿನಗಳಲ್ಲಿ ವಿವಿಧ ನಿಲ್ದಾಣಗಳ ಕೌಂಟರ್‌ಗಳಲ್ಲಿ ಬುಕ್ಕಿಂಗ್ ಪುನರಾರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ನಾವು ಪ್ರೋಟೋಕಾಲ್ ಅನ್ನು ಅಭಿವೃದ್ಧಿಪಡಿಸುತ್ತಿದ್ದೇವೆ'' ಎಂದಿದ್ದಾರೆ.

"ಮುಂಬರುವ ದಿನಗಳಲ್ಲಿ ಹೆಚ್ಚಿನ ರೈಲುಗಳ ಪುನರಾರಂಭವನ್ನು ನಾವು ಪ್ರಕಟಿಸಲಿದ್ದೇವೆ. ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಗಳ ಕಾರ್ಯಾಚರಣೆಗೆ ಸಹ ನಾವು ಅನುಮತಿ ನೀಡಿದ್ದೇವೆ. ಆದಾಗ್ಯೂ, ಟೇಕ್‌ಅವೇಗಳಿಗೆ ಮಾತ್ರ ಅವಕಾಶ ನೀಡಲಾಗುವುದು" ಎಂದು ರೈಲ್ವೆ ಸಚಿವರು ಹೇಳಿದರು.
"ಕೆಲವು ರಾಜ್ಯಗಳು ವಲಸೆ ಕಾರ್ಮಿಕರನ್ನು ತಮ್ಮ ಮನೆಗಳಿಗೆ ವಾಪಸ್ ಕಳುಹಿಸಲು ವಿಶೇಷ ರೈಲುಗಳನ್ನು ಓಡಿಸಲು ನಮ್ಮೊಂದಿಗೆ ಸಹಕರಿಸಲಿಲ್ಲ. ಪಶ್ಚಿಮ ಬಂಗಾಳಕ್ಕೆ ಮರಳಲು ಬಯಸುವ ಸುಮಾರು 40 ಲಕ್ಷ ಜನರಿದ್ದಾರೆ ಎಂದು ನಾನು ಭಾವಿಸುತ್ತೇನೆ ಆದರೆ ಇಲ್ಲಿಯವರೆಗೆ ಕೇವಲ 27 ವಿಶೇಷ ರೈಲುಗಳು ಮಾತ್ರ ರಾಜ್ಯವನ್ನು ಪ್ರವೇಶಿಸಿವೆ . "
ಜೂನ್ 1 ರಿಂದ ಚಾಲನೆಯಾಗಲಿರುವ 100 ವಿಶೇಷ ರೈಲುಗಳಿಗೆ ಬುಕಿಂಗ್ ತೆರೆದ 2.5 ಗಂಟೆಗಳಲ್ಲಿ, 4 ಲಕ್ಷ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಗೋಯಲ್ ಹೇಳಿದ್ದಾರೆ. ಜನರು ಮತ್ತೆ ಕೆಲಸಕ್ಕೆ ಬರಲು ರಿವರ್ಸ್ ಬುಕಿಂಗ್ ಪ್ರಾರಂಭಿಸಿದ್ದಾರೆ ಎಂದರು.
ಜೂನ್ 1 ರಿಂದ ಪ್ರಾರಂಭವಾಗಲಿರುವ 200 ಪ್ಯಾಸೆಂಜರ್ ರೈಲುಗಳ ಪಟ್ಟಿಯನ್ನು ಭಾರತೀಯ ರೈಲ್ವೆ ಬುಧವಾರ ಬಿಡುಗಡೆ ಮಾಡಿತು. ಈ ರೈಲುಗಳ ಟಿಕೆಟ್ ಬುಕ್ಕಿಂಗ್ ಇಂದು ಬೆಳಿಗ್ಗೆ 10 ರಿಂದ ಪ್ರಾರಂಭವಾಯಿತು.


Click it and Unblock the Notifications