ಭಾರತ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ ಬೆಳಗ್ಗೆ ಆರಂಭದ ಸೆಷನ್ ನಲ್ಲಿ ಭಾರೀ ಇಳಿಕೆ ಕಂಡಿವೆ. ಸೆನ್ಸೆಕ್ಸ್ 400ಕ್ಕೂ ಹೆಚ್ಚು ಪಾಯಿಂಟ್ ಹಾಗೂ ನಿಫ್ಟಿ 120ಕ್ಕೂ ಹೆಚ್ಚು ಪಾಯಿಂಟ್ ಗಳಷ್ಟು ಇಳಿಕೆ ಕಂಡಿವೆ. ಮೊದಲಿಗೆ ಚೀನಾದಲ್ಲಿ ದೊಡ್ಡ ಮಟ್ಟದಲ್ಲಿ ಹಬ್ಬಿ, ಅನಾಹುತ ಸೃಷ್ಟಿಸಿದ ಕೊರೊನಾ ವೈರಾಣು ಇದೀಗ ದಕ್ಷಿಣ ಕೊರಿಯಾ, ಇಟಲಿ ಹಾಗೂ ಮಧ್ಯಪ್ರಾಚ್ಯಕ್ಕೂ ಹಬ್ಬಿ ಆತಂಕ ಸೃಷ್ಟಿಸಿರುವುದು ಹೂಡಿಕೆ ಮೇಲೆ ಪರಿಣಾಮ ಬೀರಿದೆ.
ಇನ್ನು ಅಮೆರಿಕ ಡಾಲರ್ ವಿರುದ್ಧ ರುಪಾಯಿ 24 ಪೈಸೆ ಕುಸಿತ ಕಂಡು, 71.89ರಲ್ಲಿ ವಹಿವಾಟು ನಡೆಸಿದೆ. ಏಷ್ಯಾದ ಇತರ ಕರೆನ್ಸಿಗಳಂತೆ ಭಾರತದ ರುಪಾಯಿ ಕೂಡ ದುರ್ಬಲವಾಗಿದೆ. ಸೋಮವಾರದಂದು ಚಿನ್ನದ MCX ಫ್ಯೂಚರ್ ಬೆಲೆ 10 ಗ್ರಾಮ್ ಗೆ 43,000 ರುಪಾಯಿ ದಾಟಿದೆ.
ಅನಿಲ ಬೆಲೆಯಲ್ಲಿ ಕಡಿತ ಅಗಬಹುದು ಎಂಬ ವರದಿ ಬಂದಿರುವ ಹಿನ್ನೆಲೆಯಲ್ಲಿ ಆಯಿಲ್ ಇಂಡಿಯಾ, ಒಎನ್ ಜಿಸಿ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿದೆ. ರೇಟಿಂಗ್ ನಲ್ಲಿ ಕಡಿಮೆ ಮಾಡಿರುವ ಕಾರಣಕ್ಕೆ ಯೆಸ್ ಬ್ಯಾಂಕ್ ಷೇರಿನ ಬೆಲೆಯಲ್ಲಿ ಕುಸಿತವಾಗಿದೆ. ಪಿಎನ್ ಬಿ ಹೌಸಿಂಗ್ ಷೇರುಗಳ ಬೆಲೆ ಕಡಿಮೆ ಆಗಲು ಸಹ ಇದೇ ಕಾರಣವಾಗಿದೆ.

ಹಿಂಡಾಲ್ಕೋ, ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್, ಜೆಎಸ್ ಡಬ್ಲ್ಯು ಸ್ಟೀಲ್ ಹಾಗೂ ವೇದಾಂತ ಷೇರುಗಳು ಸಹ ಇಳಿಕೆಯಾಗಿವೆ. ಇದ್ದುದರಲ್ಲಿ ಟಿಸಿಎಸ್, ಟೆಕ್ ಮಹೀಂದ್ರಾ ಹಾಗೂ ಇನ್ಫೋಸಿಸ್ ನಂತಹ ಐಟಿ ವಲಯದ ಷೇರುಗಳು ಏರಿಕೆ ಕಂಡಿವೆ.


Click it and Unblock the Notifications