ನವದೆಹಲಿ, ಮಾರ್ಚ್ 21: ಭಾರತ ಈಗ ಎಲ್ಲಾ ವಿಭಾಗದಲ್ಲೂ ದೊಡ್ಡ ಮಟ್ಟಿಗಿನ ಅಭಿವೃದ್ಧಿ ಹೊಂದುತ್ತಿದ್ದು, ಈಗ ಜಾಗತಿಕ ಮಟ್ಟದಲ್ಲಿ 'ಸ್ಟಾರ್ಟ್‌ಅಪ್' ಎಂದರೆ 'ನವೋದ್ಯಮ' ಸ್ಥಾಪನೆ ವಿಚಾರದಲ್ಲಿ ಕೂಡ ಹೊಸ ದಾಖಲೆ ಬರೆಯುತ್ತಿದೆ. ಹಾಗಾದರೆ ಇಡೀ ಜಾಗತಿಕ ಮಟ್ಟದಲ್ಲಿ 'ಸ್ಟಾರ್ಟ್‌ಅಪ್'ಗಳ ಸ್ಥಾಪನೆ ವಿಚಾರದಲ್ಲಿ ಭಾರತಕ್ಕೆ ಎಷ್ಟನೆಯ ಸ್ಥಾನ ಪಡೆದಿದೆ ತಿಳಿದಿದೆಯೇ?
ಭಾರತದ ಅಭಿವೃದ್ಧಿಶೀಲ ಆರ್ಥಿಕ ವ್ಯವಸ್ಥೆಗೆ 'ಸ್ಟಾರ್ಟ್‌ಅಪ್' ಒಂದು ರೀತಿಯಲ್ಲಿ, ಹೊಸ ಹುಮ್ಮಸ್ಸು ನೀಡಿದೆ. ಹೀಗಾಗಿಯೇ 'ಸ್ಟಾರ್ಟ್‌ಅಪ್' ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇದ್ದವು. ಈ ನಿರೀಕ್ಷೆಗಳು ನಿಜವಾಗಿವೆ. ಈ ಹಿನ್ನೆಲೆ ಭಾರತದಲ್ಲಿ ಕಳೆದ ಕೆಲವೇ ವರ್ಷಗಳಲ್ಲಿ, ಲಕ್ಷ ಲಕ್ಷ 'ಸ್ಟಾರ್ಟ್‌ಅಪ್' ಸ್ಥಾಪನೆ ಆಗಿವೆ. ಇದೀಗ ಪ್ರಧಾನಿ ಮೋದಿ ಅವರು ಕೂಡ ಅಭಿವೃದ್ಧಿ ಬಗ್ಗೆ ಹೊಸ ವಿಚಾರ ತಿಳಿಸಿದ್ದಾರೆ. ಇದರ ಜೊತೆ ಭಾರತ ಜಾಗತಿಕ ಮಟ್ಟದಲ್ಲಿ ಸ್ಟಾರ್ಟ್‌ಅಪ್ ಸ್ಥಾಪನೆ ವಿಚಾರದಲ್ಲಿ ಎಷ್ಟನೆ ಸ್ಥಾನದಲ್ಲಿ ಇದೆ? ಎಂಬ ಬಗ್ಗೆಯೂ ಮಾತನಾಡಿದ್ದಾರೆ.

ಯುವಜನರ ಅಭಿವೃದ್ಧಿಗೆ ಪೂರಕ
ನವದೆಹಲಿಯಲ್ಲಿ ನಡೆದ 'ಸ್ಟಾರ್ಟ್‌ಅಪ್ ಮಹಾಕುಂಭ' ಕಾರ್ಯಕ್ರಮದಲ್ಲಿ ಮಾತನಾಡಿದ, ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ವಿಚಾರವನ್ನು ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಅತಿಹೆಚ್ಚು ನವೋದ್ಯಮ ಎಂದರೆ ಸ್ಟಾರ್ಟ್‌ಅಪ್ ಹೊಂದಿದ ದೇಶಗಳ ಪೈಕಿ ಭಾರತ 3ನೇ ಸ್ಥಾನ ಪಡೆದಿದೆ ಎಂದಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು. ಭಾರತದಲ್ಲಿ 2014ರ ವೇಳೆಗೆ ಕೇವಲ 100 ಸ್ಟಾರ್ಟ್‌ಅಪ್ ಇದ್ದವು. ಆ ಸಂಖ್ಯೆ ಇದೀಗ 1.25 ಲಕ್ಷಕ್ಕೆ ತಲುಪಿದೆ. ಇವುಗಳ ಪೈಕಿ ಶೇ 45 ರಷ್ಟು ನವೋದ್ಯಮ ಮಹಿಳೆಯರು ಮುನ್ನಡೆಸುತ್ತಿದ್ದಾರೆ. 12 ಲಕ್ಷ ಯುವ ಜನರು, ಇವುಗಳಲ್ಲಿ ತೊಡಗಿಸಿಕೊಂಡು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾರೆ ಎಂದಿದ್ದಾರೆ.
ಲಕ್ಷ ಲಕ್ಷ ಕೋಟಿ ಬಂಡವಾಳ
ಹಾಗೆಯೇ ಇದರ ಜೊತೆಗೆ ಸುಮಾರು ₹8,300 ಕೋಟಿ ರೂಪಾಯಿ ಎಂದರೆ ಒಂದು ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ 110 ಸ್ಟಾರ್ಟ್‌ಅಪ್ ಕಂಪನಿಗಳು ಇವೆ. ಸ್ಟಾರ್ಟ್‌ಅಪ್‌ಗಳು 12 ಸಾವಿರಕ್ಕು ಹೆಚ್ಚು ಪೇಟೆಂಟ್‌ಗೆ ಅರ್ಜಿಯನ್ನ ಸಲ್ಲಿಸಿವೆ ಎಂದು ಪ್ರಧಾನಿ ಮೋದಿ ಅವರು ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕವಾಗಿ ಭಾರತ ಮತ್ತೊಮ್ಮೆ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ.
ಹಾಗೆಯೇ ತಮ್ಮ ಮಾತನ್ನು ಮುಂದುವರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಜಾಗತಿಕ ಮಟ್ಟದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮುನ್ನಡೆಸುವ ಶಕ್ತಿ ಭಾರತಕ್ಕೆ ಇದೆ. ಈ ಕಾರಣಕ್ಕೆ ಜಾಗತಿಕ ಸವಾಲುಗಳಿಗೆ ಪರಿಹಾರ ಹುಡುಕುವ ಕಡೆಗೂ ನವೋದ್ಯಮ ಮತ್ತು ನವೋದ್ಯಮಿಗಳು ಕಾರ್ಯ ನಿರ್ವಹಿಸಬೇಕಾಗಿದೆ ಎಂಬ ಸಲಹೆಯನ್ನು ಕೂಡ ಪಿಎಂ ಮೋದಿ ಅವರು ಈ ವೇಳೆ ಉದ್ಯಮಿಗಳಿಗೆ ಹಾಗೂ ಯುವ ಸಮೂಹಕ್ಕೆ ನೀಡಿದರು.
ಸಣ್ಣ ಸಣ್ಣ ಪಟ್ಟಣದಲ್ಲೂ 'ಸ್ಟಾರ್ಟ್‌ಅಪ್'
ಭಾರತದಲ್ಲಿ ನಿರುದ್ಯೋಗ ನಿವಾರಣೆ ವಿಚಾರದಲ್ಲಿ ಕೂಡ ಸ್ಟಾರ್ಟ್‌ಅಪ್ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿವೆ. ಅಲ್ಲದೆ ಸಣ್ಣ, ಸಣ್ಣ ಪಟ್ಟಣದಲ್ಲೂ 'ಸ್ಟಾರ್ಟ್‌ಅಪ್' ಸ್ಥಾಪನೆ ಆಗಿರುವ ಕಾರಣಕ್ಕೆ ದೇಶದ ಪ್ರತಿಯೊಂದು ಭಾಗದಲ್ಲೂ ಅಭಿವೃದ್ಧಿ ತಲುಪಿಸಬಹುದು ಎಂಬ ಮಾತು ತಜ್ಞರದ್ದು. ಈ ಪೈಕಿ ಇದೀಗ ಜಾಗತಿಕ ಮಟ್ಟದಲ್ಲಿಯೂ ಭಾರತ 'ಸ್ಟಾರ್ಟ್‌ಅಪ್' ಸ್ಥಾಪನೆ ವಿಚಾರದಲ್ಲಿ ಎತ್ತರದ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ.


Click it and Unblock the Notifications