ನವದೆಹಲಿ, ನ. 11: ಸರ್ಕಾರಕ್ಕೆ ಮತ್ತು ಆರ್‌ಬಿಐಗೆ ತಲೆನೋವಾಗಿರುವ ಹಣದುಬ್ಬರ ತುಸು ಕಡಿಮೆ ಆಗುತ್ತಿರುವ ಸುಳಿವು ಸಿಕ್ಕಿದೆ. ಸೆಪ್ಟೆಂಬರ್ ತಿಂಗಳಲ್ಲಿ ಶೇ. 7.41ರಷ್ಟಿದ್ದ ಹಣದುಬ್ಬರ ದರ ಅಕ್ಟೋಬರ್ ತಿಂಗಳಲ್ಲಿ ಗಣನೀಯವಾಗಿ ಇಳಿದಿರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 16 ವಿವಿಧ ಆರ್ಥಿಕ ತಜ್ಞರು ಮಾಡಿರುವ ಅಂದಾಜು ಪರಿಗಣಿಸಿ ಸರಾಸರಿ ತೆಗೆದುಕೊಂಡಾಗ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ದರ ಶೇ. 6.7ಕ್ಕೆ ಬಂದು ನಿಲ್ಲಬಹುದು ಎಂದು ಹೇಳಲಾಗುತ್ತಿದೆ.
ಬಾರ್‌ಕ್ಲೇಸ್, ಐಡಿಎಫ್‌ಸಿ, ಕೋಟಕ್ ಮಹೀಂದ್ರ ಬ್ಯಾಂಕ್, ಎಚ್‌ಡಿಎಫ್‌ಸಿ, ಸೊಸೈಟೆ ಜನರೇಲ್ ಸೇರಿದಂತೆ 16 ಸಂಸ್ಥೆಗಳ ಅಭಿಮತ ಪಡೆದು ಹಣದುಬ್ಬರದ ಅಂದಾಜು ಮಾಡಲಾಗಿದೆ.
ಇದು ಹಣದುಬ್ಬರಕ್ಕೆ ಆರ್‌ಬಿಐ ನಿಗದಿ ಮಾಡಿರುವ ಶೇ. 6ರ ಗರಿಷ್ಠ ಮಿತಿಗಿಂತ ಹೆಚ್ಚೇ ಇದೆಯಾದರೂ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿ ಎಂದು ಸಮಾಧಾನಪಟ್ಟುಕೊಳ್ಳಬಹುದು. ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ಎಷ್ಟಿದೆ ಎಂಬುದರ ಅಧಿಕೃತ ವರದಿಯನ್ನು ಕೇಂದ್ರ ಸರ್ಕಾರ ನವೆಂಬರ್ 14ರಂದು ಪ್ರಕಟಿಸಿದೆ. ನವೆಂಬರ್ 11, ಇಂದು ಔದ್ಯಮಿಕ ಉತ್ಪಾದನೆ ದತ್ತಾಂಶ ಪ್ರಕಟವಾಗಲಿದೆ.
ಕಳೆದ ಆರು ತಿಂಗಳಲ್ಲೇ ಕನಿಷ್ಠ ಹಣದುಬ್ಬರ?
ಗ್ರಾಹಕ ಬೆಲೆ ಸೂಚಿ ಆಧರಿತವಾಗಿ ಹಣದುಬ್ಬರ ಅಳೆಯಲಾಗುತ್ತದೆ. 2021ರ ಅಕ್ಟೋಬರ್ ತಿಂಗಳ ದರವನ್ನು ಮೂಲವಾಗಿಟ್ಟುಕೊಂಡು ಸದ್ಯ ಹಣದುಬ್ಬರ ಲೆಕ್ಕ ಮಾಡಲಾಗುತ್ತದೆ. ಇದರಿಂದ ಆಹಾರ ಹಣದುಬ್ಬರ ಇಳಿಕೆ ಆಗುತ್ತಾದರೂ ವಾಸ್ತವದಲ್ಲಿ ಹಣ್ಣು, ತರಕಾರಿ ಇತ್ಯಾದಿ ಆಹಾರವಸ್ತುಗಳ ಬೆಲೆ ಏರಿಕೆ ಆಗಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಪಟ್ಟಿ ಮಾಡಿರುವ 22 ಆಹಾರವಸ್ತುಗಳ ಪೈಕಿ 15 ಆಹಾರ ವಸ್ತುಗಳು ಬೆಲೆ ಏರಿಕೆ ಕಂಡಿವೆ.
ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲಿ ಒಟ್ಟಾರೆ ಹಣದುಬ್ಬರ ಇಳಿಕೆ ಕಂಡರೂ ಮುಂದೆ ಅದೇ ಟ್ರೆಂಡ್ ಇರುತ್ತದೆಂದು ಹೇಳಲಾಗದು. ಆದರೆ, ಶೇ. 6.7ರ ಹಣದುಬ್ಬರ ದರವು ಆರ್‌ಬಿಐನ ಶೇ. 4ರ ಗುರಿಗಿಂತ ಬಹಳ ದೂರ ಇರುವುದಾದರೂ ಏಪ್ರಿಲ್ ತಿಂಗಳ ಶೇ. 7.79ರ ದರಕ್ಕಿಂತ ಎಷ್ಟೋ ಪಾಲು ಉತ್ತಮ ಸ್ಥಿತಿ. ಫೆಬ್ರವರಿ ನಂತರ ಅತಿ ಕಡಿಮೆ ಹಣದುಬ್ಬರ ಅಕ್ಟೋಬರ್‌ನಲ್ಲಿ ಇರಬಹುದು ಎಂಬ ಅಂದಾಜಿದೆ.
2019ರ ಸೆಪ್ಟೆಂಬರ್‌ನಲ್ಲಿ ಹಣದುಬ್ಬರ ಶೇ. 3.99ರಲ್ಲಿತ್ತು. ಅಲ್ಲಿಂದ ಶೇ. 4ರ ಗಡಿ ದಾಟಿ ಹೋದ ಹಣದುಬ್ಬರ ದರ ಈವರೆಗೂ ಶೇ. 4ರ ಮಟ್ಟಕ್ಕಿಂತ ಕೆಳಗಿಳಿಯಲೇ ಇಲ್ಲ. ಶೇ. 6ರ ತಾಳಿಕೆಯ ಮಟ್ಟವೆಂದು ಆರ್‌ಬಿಐ ನಿಗದಿ ಪಡಿಸಿರುವ ಗುರಿಯೂ ಕಳೆದ 10 ತಿಂಗಳಿಂದ ತಪ್ಪಿಹೋಗಿದೆ.
ಅರ್‌ಬಿಐ ಅಂದಾಜು
ಆರ್‌ಬಿಐ ಇತ್ತೀಚೆಗೆ ಮಾಡಿರುವ ಅಂದಾಜು ಪ್ರಕಾರ ಹಣದುಬ್ಬರವು ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ಶೇ. 6.5ಕ್ಕೆ ಬರಬಹುದು. ನಂತರದ ಕ್ವಾರ್ಟರ್‌ನಲ್ಲಿ ಶೇ. 5.8ಕ್ಕೆ ಇಳಿಯಬಹುದು. 2023-24ರ ಹಣಕಾಸು ವರ್ಷದಲ್ಲಿ ಸರಾಸರಿ ಹಣದುಬ್ಬರ ಶೇ. 5.2ಕ್ಕೆ ಇಳಿಯಬಹುದು ಎಂದು ಅಭಿಪ್ರಾಯಪಟ್ಟಿದೆ. ಎಲ್ಲವೂ ಅಂದುಕೊಂಡಂತೆ ಘಟಿಸಿದರೆ ಮಾತ್ರ ಈ ಸ್ಥಿತಿ. ಅನಿರೀಕ್ಷಿತ ವಿದ್ಯಮಾನಗಳು ಸಂಭವಿಸಿದರೆ ಲೆಕ್ಕಾಚಾರಗಳು ತಲೆಕೆಳಗು ಆಗುವ ಸಾಧ್ಯತೆ ಇರುತ್ತದೆ.
ಇನ್ನೊಂದೆಡೆ ಡ್ಯೂಷೆ ಬ್ಯಾಂಕ್‌ನ ಮುಖ್ಯ ಆರ್ಥಿಕತಜ್ಞ ಕೌಶಿಕ್ ದಾಸ್ ಅವರು ಆರ್‌ಬಿಐ ಅಂದಾಜಿಗಿಂತ ಹಣದುಬ್ಬರ ತುಸು ಹೆಚ್ಚು ಇರಬಹುದು ಎಂದು ಲೆಕ್ಕ ಹಾಕಿದ್ದಾರೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಸರಾಸರಿ ಹಣದುಬ್ಬರ ಶೇ. 6.9 ಆಗಬಹುದು. 2023-24ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 5.5 ಮುಟ್ಟಬಹುದು ಎಂದು ಅಂದಾಜು ಮಾಡಿದ್ದಾರೆ.
ಔದ್ಯಮಿಕ ಉತ್ಪಾದನೆ
ಹಣದುಬ್ಬರ ಇಳಿಕೆಯಾಗುವುದು ಒಂದು ಸಮಾಧಾನಕರ ಸುದ್ದಿಯಾದರೆ ಔದ್ಯಮಿಕ ಉತ್ಪಾದನೆ ಹೆಚ್ಚುತ್ತಿರುವುದು ಇನ್ನೊಂದು ಸಮಾಧಾನ ಸಂಗತಿ. ಭಾರತದ ಔದ್ಯಮಿಕ ಉತ್ಪಾದನೆ ಸೂಚಿ (ಐಐಪಿ- ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್) ಸೆಪ್ಟೆಂಬರ್ ತಿಂಗಳಲ್ಲಿ ಶೇ. 2.3ಕ್ಕೆ ಏರಬಹುದು ಎಂದು ವಿವಿಧ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. ಇದೇನಾದರೂ ನಿಜವಾದರೆ ಗಣನೀಯ ವೃದ್ಧಿ ಎನಿಸುತ್ತದೆ.
ಆಗಸ್ಟ್ ತಿಂಗಳಲ್ಲಿ ಐಐಪಿ ಮೈನಸ್ 0.8 ಪ್ರತಿಶತಕ್ಕೆ ಕುಸಿದಿತ್ತು. ಆಗಸ್ಟ್‌ನ ಈ ಅಂಕಿಯು ಕಳೆದ 18 ತಿಂಗಳಲ್ಲೇ ಕನಿಷ್ಠ ದರ ಎನಿಸಿದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ತಜ್ಞರ ಅಂದಾಜಿನಂತೆ ಐಐಪಿ ಸೆಪ್ಟೆಂಬರ್‌ನಲ್ಲಿ ಶೇ. 2.3ರಷ್ಟು ಐಐಪಿ ಏರಿದರೆ ಅದು ಸಾಧಾರಣ ಸಾಧನೆಯಲ್ಲ. ಇದಕ್ಕೆ ಕಾರಣ ಆರ್ಥಿಕತೆಗೆ ಪುಷ್ಟಿ ನೀಡುವ ಎಂಟು ಪ್ರಮುಖ ಉದ್ಯಮಗಳು ಗಣನೀಯ ಬೆಳವಣಿಗೆ ಸಾಧಿಸಿರುವುದು.
ಅಕ್ಟೋಬರ್ 31ರಂದು ಬಿಡುಗಡೆಯಾದ ದತ್ತಾಂಶದ ಪ್ರಕಾರ ಆಗಸ್ಟ್ ತಿಂಗಳಲ್ಲಿ ಶೇ. 4.1ರಷ್ಟು ದರ ಹೊಂದಿದ್ದ ಭಾರತದ ಎಂಟು ಪ್ರಮುಖ ಉದ್ಯಮಗಳು ಸೆಪ್ಟೆಂಬರ್ ತಿಂಗಳಲ್ಲಿ ಶೇ. 7.9ರಷ್ಟು ಬೆಳವಣಿಗೆ ಸಾಧಿಸಿವೆ. ಇದರಿಂದಾಗಿ ಒಟ್ಟಾರೆ ಔದ್ಯಮಿಕ ಉತ್ಪಾದನೆ ಸೂಚಿ ಉತ್ತಮಗೊಳ್ಳುವ ಸಾಧ್ಯತೆ ಇದೆ. ಇಂದು ಆರ್‌ಬಿಐನಿಂದ ಔದ್ಯಮಿಕ ಉತ್ಪಾದನೆಯ ಡಾಟಾ ಪ್ರಕಟವಾಗುತ್ತಿದೆ.


Click it and Unblock the Notifications