ಇನ್ಫೋಸಿಸ್ ಸಿಇಒ ಸಲೀಲ್ ಪಾರೇಖ್ ಅವರು ಈಗ ತಮ್ಮ ಮೇಲಿನ ಆರೋಪಗಳಿಂದ ಮುಕ್ತರಾಗಿದ್ದಾರೆ. ಅನಾಮಧೇಯರ ಆರೋಪಗಳ ಕುರಿತು ಕಂಪನಿಯು ಸ್ವತಂತ್ರ ತನಿಖೆ ಪೂರ್ಣಗೊಂಡಿದ್ದು, ಕಂಪನಿಯ ಉನ್ನತ ಅಧಿಕಾರಿಗಳು ಲೆಕ್ಕಪತ್ರದಲ್ಲಿ ಯಾವುದೇ ಕಾನೂನು ಬಾಹಿರ ವಿಧಾನಗಳನ್ನು ಅನುಸರಿಸಿಲ್ಲ ಎಂದು ಇನ್ಫೋಸಿಸ್ ಹೇಳಿದೆ.
'' ನಿರ್ದೇಶಕ ಮಂಡಳಿಯ ಲೆಕ್ಕಪತ್ರ ಸಮಿತಿಯು, ಈ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾನೂನು ಸಲಹಾ ಸಂಸ್ಥೆಗಳಾದ ಶಾರ್ದೂಲ್ ಅಮರ್‌ಚಂದ್ ಮಂಗಲದಾಸ್ ಆ್ಯಂಡ್ ಕಂಪನಿ ಮತ್ತು ಪ್ರೈಸ್ ವಾಟರ್‌ಹೌಸ್ ಕೂಪರ್ಸ್ ನೆರವು ಪಡೆದು ಸಮಗ್ರ ತನಿಖೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ'' ಎಂದು ಲೆಕ್ಕಪತ್ರ ಸಮಿತಿ ಅಧ್ಯಕ್ಷ ಡಿ. ಸುಂದರಂ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಲಾಭ ಹೆಚ್ಚಿಸಲು ಕಂಪನಿಯ ಉನ್ನತ ಅಧಿಕಾರಿಗಳು ಕಾನೂನುಬಾಹಿರ ಕ್ರಮಗಳನ್ನು ಅನುಸರಿಸಿದ್ದಾರೆ ಎಂದು ದೂರುಗಳನ್ನು ನೀಡಲಾಗಿತ್ತು. ಇದು ಷೇರುಪೇಟೆಯ ಗಮನಕ್ಕೂ ಬಂದಿತ್ತು. ಆದರೆ ಕಂಪನಿಯ ಉನ್ನತ ಅಧಿಕಾರಿಗಳು ನ್ಯಾಯಬಾಹಿರ ವಿಧಾನಗಳನ್ನು ಅನುಸರಿಸಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಇನ್ಫೋಸಿಸ್ ಹೇಳಿದೆ.
ಇತ್ತೀಚೆಗಷ್ಟೇ ಇನ್ಫೋಸಿಸ್ ಮೂರನೇ ತ್ರೈಮಾಸಿಕ ವರದಿ ಬಿಡುಗಡೆ ಮಾಡಿತ್ತು. ಕಂಪನಿಯ ನಿವ್ವಳ ಲಾಭದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಬಂದಿದ್ದು, 4,457 ಕೋಟಿ ರುಪಾಯಿಗೆ ತಲುಪಿದೆ ಎಂದು ವರದಿ ಮಾಡಿದೆ. ಇದರ ಆದಾಯವು 7.9 ಪರ್ಸೆಂಟ್ ಏರಿಕೆಯಾಗಿ 23,097 ಕೋಟಿ ರುಪಾಯಿಗೆ ತಲುಪಿದೆ. ಜೊತೆಗೆ 2020ರ ಹಣಕಾಸು ವರ್ಷದ ಆದಾಯದ ದೃಷ್ಟಿಕೋನವನ್ನು 10 ಪರ್ಸೆಂಟ್‌ನಿಂದ 10.5 ಪರ್ಸೆಂಟ್‌ಗೆ ಪರಿಷ್ಕರಿಸಿದೆ. QoQ ಆಧಾರದ ಮೇಲೆ ಇನ್ಪೋಸಿಸ್ ಲಾಭವು 10.9 ಪರ್ಸೆಂಟ್ ಏರಿಕೆಯಾಗಿದೆ.


Click it and Unblock the Notifications