ಹೊಸ ಅಧ್ಯಯನವೊಂದು ಬಿಡುಗಡೆ ಆಗಿದ್ದು, ಅದರ ಪ್ರಕಾರ ಭಾರತದಲ್ಲಿ 2019ನೇ ಇಸವಿಯಲ್ಲಿ 4,196 ಗಂಟೆಗಳ ಕಾಲ ಇಂಟರ್ ನೆಟ್ ಸ್ಥಗಿತಗೊಂಡು, ಆರ್ಥಿಕವಾಗಿ $ 1.3 ಬಿಲಿಯನ್ ( ಭಾರತದ ರುಪಾಯಿಗಳಲ್ಲಿ 9,200 ಕೋಟಿ) ನಷ್ಟ ಉಂಟು ಮಾಡಿದೆ. ಇರಾಕ್, ಸೂಡಾನ್ ನಂತರ ಆರ್ಥಿಕವಾಗಿ ಅತಿ ದೊಡ್ಡ ನಷ್ಟ ಅನುಭವಿಸಿದ ದೇಶ ಭಾರತ.
"ದ ಗ್ಲೋಬಲ್ ಕಾಸ್ಟ್ ಆಫ್ ಇಂಟರ್ ನೆಟ್ ಸ್ಲೋಡೌನ್ಸ್" ಎಂಬ ಶೀರ್ಷಿಕೆಯಡಿ ಯು.ಕೆ. ಮೂಲದ ಸಂಸ್ಥೆ ಟಾಪ್10VPNನಿಂದ COST ಟೂಲ್ ಬಳಸಿಕೊಂಡು ಈ ದತ್ತಾಂಶವನ್ನು ಲೆಕ್ಕ ಹಾಕಿದೆ. ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರ, ಅರುಣಾಚಲಪ್ರದೇಶ, ಅಸ್ಸಾಂ, ಮೇಘಾಲಯ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಇತರೆಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಿತ್ತು.
ಇದರಿಂದ ಸರಾಸರಿ 84 ಲಕ್ಷ ಗ್ರಾಹಕರ ಮೇಲೆ ಪರಿಣಾಮ ಆಗಿತ್ತು. ಇದರಲ್ಲಿ ಕೆಲವು ಜಿಲ್ಲೆಯ ನಿರ್ದಿಷ್ಟ ನಗರಗಳಲ್ಲಿ ಕೆಲವು ಗಂಟೆಗಳ ಕಾಲ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಿರುವುದರ ಲೆಕ್ಕ ಸೇರಿಸಿಲ್ಲ. ಆದ್ದರಿಂದ ಪೂರ್ತಿ ನಷ್ಟದ ಪ್ರಮಾಣವು $ 1.3 ಬಿಲಿಯನ್ ಗಿಂತ ಹೆಚ್ಚೇ ಇರುತ್ತದೆ.

ಕಳೆದ ವರ್ಷದ ಆಗಸ್ಟ್ 4ರಂದು ಕಾಶ್ಮೀರದಲ್ಲಿ ಇಂಟರ್ ನೆಟ್ ಸ್ಥಗಿತಗೊಳಿಸಿದ್ದು, ವಿಶ್ವದಲ್ಲಿ ಯಾವುದೇ ದೇಶ ವಿಧಿಸಿರುವ ಅತಿ ದೀರ್ಘಾವಧಿಯ ಇಂಟರ್ ನೆಟ್ ಸ್ಥಗಿತ. ಇದೀಗ ಸುಪ್ರೀಂ ಕೋರ್ಟ್, ಸಂವಿಧಾನದ ಪ್ರಕಾರ ಇಂಟರ್ ನೆಟ್ ಮೂಲಭೂತ ಹಕ್ಕು ಎಂದು ಹೇಳಿದೆ. ಇನ್ನೊಂದು ವಾರದೊಳಗೆ ಈ ರೀತಿಯ ಘಟನೆಗಳನ್ನು ಪರಿಶೀಲಿಸಲು ಜಮ್ಮು- ಕಾಶ್ಮೀರ ಆಡಳಿತಕ್ಕೆ ಸೂಚಿಸಿದೆ.
ಇಡೀ ಜಗತ್ತಿನಾದ್ಯಂತ ಇಂಟರ್ ನೆಟ್ ಸ್ಥಗಿತದಿಂದ 2019ರಲ್ಲಿ $ 8.05 ಬಿಲಿಯನ್ ನಷ್ಟವಾಗಿದೆ. 2015-16ರ ಸಾಲಿಗೆ ಹೋಲಿಸಿದರೆ 235 ಪರ್ಸೆಂಟ್ ಹೆಚ್ಚಾಗಿದೆ. 21 ದೇಶಗಳಲ್ಲಿ 122 ಪ್ರಮುಖ ಇಂಟರ್ ನೆಟ್ ಷಟ್ ಡೌನ್ ಆಗಿ, 18,225 ಗಂಟೆಗಳ ಕಾಲ ಸೇವೆ ಸ್ಥಗಿತವಾಗಿದೆ.
ಜಾಗತಿಕವಾಗಿ ಸಾಮಾಜಿಕ ಮಾಧ್ಯಮ ಚಾನೆಲ್ ಗಳ ಪೈಕಿ ವಾಟ್ಸಾಪ್ ಅತಿ ಹೆಚ್ಚು ಬ್ಲಾಕ್ ಆಗಿದ್ದರೆ, ಆ ನಂತರದ ಸ್ಥಾನದಲ್ಲಿ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ಇದೆ. ಕಳೆದ ವರ್ಷ ಇಂಟರ್ ನೆಟ್ ಸ್ಥಗಿತದಿಂದ ಅತಿ ಹೆಚ್ಚು ಅಂದರೆ $ 2.3 ಬಿಲಿಯನ್ ನಷ್ಟ ಅನುಭವಿಸಿದ ದೇಶ ಇರಾಕ್. ಆ ನಂತರ $ 1.87 ಬಿಲಿಯನ್ ನಷ್ಟದೊಂದಿಗೆ ಸೂಡಾನ್ ಎರಡನೇ ಸ್ಥಾನದಲ್ಲಿದೆ.


Click it and Unblock the Notifications