ಷೇರು ಮಾರ್ಕೆಟ್ ಬಗ್ಗೆ ಜಗತ್ತಿನಾದ್ಯಂತ ಹೆಸರಾದ ಹೂಡಿಕೆದಾರ ವಾರೆನ್ ಬಫೆಟ್ ಏನು ಹೇಳಿದ್ದಾರೆ ಗೊತ್ತಾ? "ಉಳಿದವರೆಲ್ಲ ಅತ್ಯಾಸೆ ಪಡುವಾಗ ನೀವು ಭಯ ಪಡಬೇಕು, ಹಾಗೇ ಉಳಿದವರು ಭಯ ಪಡುವಾಗ ನೀವು ಆಸೆ ಪಡಬೇಕು" ಎಂದಿದ್ದಾರೆ.
ಈಗಿನ ಷೇರು ಮಾರುಕಟ್ಟೆ ನೋಡಿ ಎಲ್ಲರೂ ಭಯ ಪಡುತ್ತಿದ್ದಾರೆ. ಹಾಗಿದ್ದರೆ ಹೂಡಿಕೆ ಮಾಡುವ ಉದ್ದೇಶ ಇರುವವರು ಏನು ಮಾಡಬೇಕು? ಈ ವಿಚಾರವಾಗಿ ಕನ್ನಡ ಗುಡ್ ರಿಟರ್ನ್ಸ್ ನಿಂದ ಕೆಲವು ಷೇರು ದಲ್ಲಾಳಿಗಳು ಹಾಗೂ ಹೂಡಿಕೆ ಸಲಹೆಗಾರರನ್ನು ಮಾತನಾಡಿಸಲಾಗಿದ್ದು, ಅವರ ಅಭಿಪ್ರಾಯಗಳನ್ನು ದಾಖಲಿಸಲಾಗುತ್ತಿದೆ.
ಸದ್ಯದ ಸನ್ನಿವೇಶದಲ್ಲಿ ಷೇರು ಮಾರ್ಕೆಟ್ ನಲ್ಲಿ ಹಣ ಹೂಡಬಹುದಾ? ಯಾವ ಷೇರುಗಳನ್ನು ಖರೀದಿಸಬೇಕು? ಯಾವ ಸ್ಟ್ರಾಟೆಜಿ ಇರಬೇಕು? ಇತ್ಯಾದಿ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರ ಹೀಗಿದೆ.
ಬ್ಲ್ಯೂ ಚಿಪ್ ಷೇರುಗಳನ್ನು ಆರಿಸಿಕೊಳ್ಳಬಹುದು
ಈಗಿನ ಸನ್ನಿವೇಶದಲ್ಲಿ ಬ್ಲ್ಯೂಚಿಪ್ ಷೇರುಗಳು ನಿಮ್ಮ ಆಯ್ಕೆಯಾಗಿರಲಿ. ರಿಲಯನ್ಸ್, ಎಲ್ ಅಂಡ್ ಟಿ, ಇನ್ಫೋಸಿಸ್, ಟಿಸಿಎಸ್, ಹಿಂದೂಸ್ತಾನ್ ಯುನಿಲಿವರ್... ಇಂಥ ಷೇರುಗಳ ಬೆಲೆಯಲ್ಲಿ ಕಡಿಮೆಯಾಗಿರುವುದು ಹೌದು. ಮಾರ್ಕೆಟ್ ಮೇಲಕ್ಕೆ ಏರಲು ಆರಂಭವಾಗುತ್ತಿದ್ದಂತೆ ಇವುಗಳು ಸಹ ಏರಿಕೆ ಕಾಣಲು ಶುರುವಾಗುತ್ತವೆ. ಇನ್ನು ಮೂಲಭೂತವಾಗಿ ಕಂಪೆನಿಗಳ ಗುಣಮಟ್ಟ ಚೆನ್ನಾಗಿರುವುದರಿಂದ ಒಂದು ವೇಳೆ ಖರೀದಿ ಮಾಡಿದ ಬೆಲೆಗಿಂತ ಮತ್ತೂ ಕುಸಿತ ಕಂಡರೆ ಹೆದರುವ ಅಗತ್ಯ ಇಲ್ಲ. ಉದಾಹರಣೆಗೆ, ಐವತ್ತು ಷೇರು ಖರೀದಿ ಮಾಡಬೇಕು ಅಂದುಕೊಂಡಿದ್ದಲ್ಲಿ 15-15-20 ಹೀಗೆ ಬೆಲೆ ಇಳಿಕೆ- ಏರಿಕೆ ಗಮನಿಸಿ, ಸ್ವಲ್ಪ ಪ್ರಮಾಣದಲ್ಲಿ ಖರೀದಿಯನ್ನು ಶುರು ಮಾಡಬಹುದು. ಇನ್ನು ಒಂದೇ ಕಂಪೆನಿಯ ಮೇಲೆ ಹಣ ಹೂಡುವುದಕ್ಕಿಂತ ವಿವಿಧ ಕ್ಷೇತ್ರದ ಕಂಪೆನಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಉದಾ: ಫಾರ್ಮಾಸ್ಯುಟಿಕಲ್ಸ್, ಐಟಿ, ಎಫ್ ಎಂಸಿಜಿ... ಹೀಗೆ.
ಕಂಪೆನಿಯ ಇತಿಹಾಸವನ್ನು ತಿಳಿದುಕೊಳ್ಳಿ
ಇನ್ನು ಖರೀದಿ ಮಾಡಬೇಕಾದ ಷೇರು ಯಾವ ಕಂಪೆನಿಯದು ಎಂದು ಗೊತ್ತಾದ ಮೇಲೆ ಆ ಕಂಪೆನಿಯ ಇತಿಹಾಸವನ್ನು ಗಮನಿಸಿ. ಅದು ಈವರೆಗೆ ನೀಡಿದ ಡಿವಿಡೆಂಡ್ ಯಾವ ಪ್ರಮಾಣದ್ದು? ಬೋನಸ್ ಷೇರು ನೀಡಲಾಗಿದೆಯಾ? ಕಂಪೆನಿಯ ಆರ್ಥಿಕ ಸ್ಥಿತಿ ಹೇಗಿದೆ? ಮುಖ್ಯವಾಗಿ ಸಾಲದ ಪ್ರಮಾಣ ಎಷ್ಟಿದೆ, ಪ್ರವರ್ತಕರು ಷೇರುಗಳನ್ನು ಅಡಮಾನ ಮಾಡಿದ್ದಾರಾ ಇತ್ಯಾದಿ ವಿಷಯಗಳನ್ನು ಗಮನಿಸಿ. ಸಾಧ್ಯವಾದಲ್ಲಿ ಕಂಪೆನಿ ಆಡಳಿತ ಮಂಡಳಿ ಬಗ್ಗೆ ಒಂದಿಷ್ಟು ತಿಳಿದುಕೊಳ್ಳಿ. ಆ ಕಂಪೆನಿ ಮಾಡುತ್ತಿರುವ ವ್ಯವಹಾರ ಯಾವುದಕ್ಕೆ ಸಂಬಂಧಿಸಿದ್ದು ಎಂಬುದು ಸಹ ಮುಖ್ಯವಾಗುತ್ತದೆ. ಏಕೆಂದರೆ ಎನ್ ಬಿಎಫ್ ಸಿ (ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪೆನಿ), ವಿಮಾನಯಾನ, ಬ್ಯಾಂಕಿಂಗ್, ವಾಹನ ಹಾಗೂ ಉಕ್ಕು ಉತ್ಪಾದನೆ ಮಾಡುವ ಕಂಪೆನಿಗಳು ಕಷ್ಟದಲ್ಲಿವೆ. ಆದ್ದರಿಂದ ಅಂಥ ಕಂಪೆನಿಗಳ ಷೇರುಗಳಿಂದ ಸದ್ಯಕ್ಕೆ ದೂರ ಇರುವುದು ಉತ್ತಮ.
ನಿರೀಕ್ಷಿತ ಲಾಭ ಬಂದಲ್ಲಿ ತೆಗೆದುಕೊಳ್ಳಿ
ಹೂಡಿಕೆ ಅಂತ ಮಾಡುವುದು ದೀರ್ಘಾವಧಿಗೆ ಎಂಬುದೇನೋ ನಿಜ. ಆದರೆ ನಿರೀಕ್ಷೆ ಮಾಡಿದಷ್ಟು ಲಾಭ ಅಲ್ಪಾವಧಿಯಲ್ಲೇ ಬಂದಲ್ಲಿ ಷೇರುಗಳನ್ನು ಮಾರಿ, ಲಾಭ ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಮಾರ್ಕೆಟ್ ಏರಿಳಿತ ವಿಪರೀತ ವೇಗವಾಗಿದೆ. ಆದ್ದರಿಂದ ಲಾಭ ಬಂದ ಮೇಲೆ ದೀರ್ಘಾವಧಿ ಎಂದು ಕಾಯುತ್ತಾ ಕೂರುವುದು ಬುದ್ಧಿವಂತಿಕೆ ಅಲ್ಲ. ಷೇರು ಖರೀದಿ ಮಾಡುವಾಗಲೇ ಎಷ್ಟು ಲಾಭ ಬಂದರೆ ಮಾರುವುದು ಎಂಬುದನ್ನು ನಿರ್ಧರಿಸಿಕೊಂಡಿರಿ. ಅಷ್ಟು ಪ್ರಮಾಣದಲ್ಲಿ ಬಂದ ನಂತರ ಷೇರು ಮಾರಿಬಿಡಿ. ಇನ್ನು ಖರೀದಿ- ಮಾರಾಟ ಎರಡೂ ವಿಚಾರಕ್ಕೆ ಸಂಬಂಧಿಸಿದ ಹಾಗೆ ವಾಸ್ತವವನ್ನು ಮಾತ್ರ ನಂಬಿ, ಊಹಾಪೋಹವನ್ನಲ್ಲ. ವದಂತಿಗಳಿಗೆ ಕಿವಿ ಕೊಟ್ಟರೆ ನಷ್ಟದ ಪಾಲಾಗಬೇಕಾಗುತ್ತದೆ. ಅದೇ ರೀತಿಯಲ್ಲಿ ಹಣ ತೊಡಗಿಸಿದ ಹಾಗೂ ತೊಡಗಿಸಬೇಕಾದ ಕಂಪೆನಿಯಲ್ಲಿ ಆಗುವ ಬೆಳವಣಿಗೆಗಳ ಬಗ್ಗೆಯೂ ಲಕ್ಷ್ಯ ಇರಲಿ.
ಅವಕಾಶಗಳಿಗೆ ಯಾವತ್ತೂ ಕೊರತೆ ಇಲ್ಲ
ಷೇರು ಮಾರುಕಟ್ಟೆಯಲ್ಲಿ ಅವಕಾಶಗಳಿಗೆ ಯಾವಾಗಲೂ ಕೊರತೆ ಇರುವುದಿಲ್ಲ. ಮಾರ್ಕೆಟ್ ಬಿದ್ದಿದೆ ಎಂಬ ಕಾರಣಕ್ಕೆ ಸಾಲ ಮಾಡಿ, ಬಡ್ಡಿ ಕಟ್ಟಿ ಹಣವನ್ನು ತೊಡಗಿಸುವುದು ಬುದ್ಧಿವಂತಿಕೆ ಅಲ್ಲ. ಉಳಿತಾಯದ ಹಣವನ್ನು ಸ್ವಲ್ಪ ಪ್ರಮಾಣದಲ್ಲಿ (ಅದಕ್ಕೂ ಇಂತಿಷ್ಟು ಎಂಬ ಮಿತಿ ಅಗತ್ಯ) ಹೂಡಿಕೆ ಮಾಡಿ. ಅದನ್ನು ಬಿಟ್ಟು, ಬಡ್ಡಿಗೆ ಸಾಲ ತಂದು ಹಣ ಹೂಡಿದರೆ ಅದು ಒತ್ತಡಕ್ಕೆ ಕಾರಣವಾಗುತ್ತದೆ. ಇನ್ನು ಷೇರು ಮಾರ್ಕೆಟ್ ಹೇಗೆ ಏರಿದರೆ ಯಾವ ಎತ್ತರಕ್ಕೆ ಬೇಕಾದರೂ ಹೋಗುವ ಸಾಧ್ಯತೆ ಇದೆಯೋ, ಅದೇ ರೀತಿ ತಳ ಕಚ್ಚಿದರೂ ಯಾವ ಮಟ್ಟಕ್ಕಾದರೂ ಕುಸಿಯಬಹುದು. ಯಾವುದಕ್ಕೂ ಇದೇ ಮಿತಿ ಎಂಬುದಿಲ್ಲ. ಇನ್ನು ಯಾವುದೇ ಕೆಲಸ ಮಾಡುವ ಮುನ್ನ ಅದರ ಬಗ್ಗೆ ತಿಳಿವಳಿಕೆ ಪಡೆದಿರಬೇಕು, ಅಗತ್ಯ ಕಂಡುಬಂದಲ್ಲಿ ತಜ್ಞರು- ಅನುಭವಿಗಳ ಸಲಹೆ ಪಡೆಯಬೇಕು. ಆದ್ದರಿಂದ ಹೂಡಿಕೆ ತಜ್ಞರ ಸಲಹೆ- ಮಾರ್ಗದರ್ಶನ ಪಡೆದುಕೊಳ್ಳಿ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications