ಭಾರತದ ಐಐಟಿಗಳಲ್ಲಿ ಮತ್ತೆ ಮೈಕ್ರೋಸಾಫ್ಟ್ ಮಿರಿಮಿರಿ ಮಿಂಚುತ್ತಿದೆ. ಅದಕ್ಕೆ ಕಾರಣ ಆಗಿರುವುದು ಐಐಟಿ ಮದ್ರಾಸ್ ನಲ್ಲಿ ಐಟಿ ದೈತ್ಯ ಕಂಪೆನಿ ಮೈಕ್ರೋಸಾಫ್ಟ್ ಕಂಪೆನಿ ನೀಡಿರುವ ವಾರ್ಷಿಕ ವೇತನ ಪ್ಯಾಕೇಜ್. ಅದು ಎಷ್ಟು ಗೊತ್ತಾ $ 1,64,000. ಅದನ್ನು ಭಾರತೀಯ ರುಪಾಯಿ ಮೌಲ್ಯದಲ್ಲಿ ಹೇಳಬೇಕು ಅಂದರೆ 1.17 ಕೋಟಿ. ಅಂತಿಮ ಪ್ಲೇಸ್ ಮೆಂಟ್ ನ ಮೊದಲ ದಿನದ ಟಾಪ್ ರಿಕ್ರೂಟರ್ ಆಗಿ ಮೈಕ್ರೋಸಾಫ್ಟ್ ಕಾಣಿಸಿಕೊಂಡಿದೆ.
ಕೆಲವು ಹಳೆ ಜತೆಗೆ ಹೊಸ ಐಐಟಿಗಳಲ್ಲಿ ಮೊದಲ ಹಂತದಲ್ಲಿ ಅಂತಿಮ ಪ್ಲೇಸ್ ಮೆಂಟ್ ಪ್ರಕ್ರಿಯೆಗಳು ಭಾನುವಾರ ನಡೆದಿವೆ. ಕಳೆದ ವರ್ಷ ಕೂಡ ಮೈಕ್ರೋಸಾಫ್ಟ್ ನಿಂದಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ವೇತನದ ಆಫರ್ ಬಂದಿತ್ತು. ಅದು ಎಷ್ಟು ಗೊತ್ತಾ? $ 2,15,000. ಭಾರತದ ರುಪಾಯಿ ಲೆಕ್ಕದಲ್ಲಿ 1.54 ಕೋಟಿ. ಹೀಗೆ ಹಲವು ಐಐಟಿಗಳಲ್ಲಿ ಆಫರ್ ನೀಡಿತ್ತು.
ಮೊದಲ ದಿನದ ಪ್ಲೇಸ್ ಮೆಂಟ್ ನಲ್ಲೇ ಮೈಕ್ರೋಸಾಫ್ಟ್ ನಿಂದ ವಿವಿಧ ಕ್ಯಾಂಪಸ್ ಗಳಲ್ಲಿ ಅಂದರೆ ಐಐಟಿ ಬಾಂಬೆ, ಐಐಟಿ ಮದ್ರಾಸ್, ಐಐಟಿ ಖರಗ್ ಪುರ್ ಹಾಗೂ ಐಐಟಿ ಗುವಾಹತಿಯಲ್ಲಿ ಉದ್ಯೋಗದ ಆಫರ್ ನೀಡಲಾಗಿದೆ. ಐಐಟಿ ಮದ್ರಾಸ್ ನಲ್ಲಿ ಮೈಕ್ರೋಸಾಫ್ಟ್ ನಿಂದ 20, ಗೋಲ್ಡ್ ಮನ್ ಸ್ಯಾಕ್ಸ್ 11, ಕ್ವಾಲ್ ಕಮ್ 9 ಹಾಗೂ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನಿಂದ 7 ಆಫರ್ ನೀಡಲಾಗಿದೆ.

ಐಐಟಿ ಖರಗ್ ಪುರ್ ನಲ್ಲಿ ಮೈಕ್ರೋಸಾಫ್ಟ್ 24, ಗೋಲ್ಡ್ ಮನ್ ಸ್ಯಾಕ್ಸ್ 14 ಆಫರ್ ನೀಡಿದೆ. ಅಂತರರಾಷ್ಟ್ರೀಯ ಆಫರ್ ಗಳ ವಿಚಾರಕ್ಕೆ ಬಂದರೆ ಉಬರ್, ಸೇಲ್ಸ್ ಫೋರ್ಸ್ ಹಾಗೂ ಕೊಹೆಸಿಟಿಯಿಂದ ವಾರ್ಷಿಕ ಸಿಟಿಸಿ (ಕಾಸ್ಟ್ ಟು ಕಂಪೆನಿ) 1 ಕೋಟಿ ರುಪಾಯಿ ಹಂತದಲ್ಲಿ ಇದೆ ಎಂದು ಮೂಲಗಳು ತಿಳಿಸಿವೆ.
ಮೈಕ್ರೋಸಾಫ್ಟ್ ಹೊರತುಪಡಿಸಿದರೆ ಆಮ್ ಸ್ಟರ್ ಡ್ಯಾಮ್ ಮೂಲದ ಆಪ್ಟಿವರ್ಸ್ 1.02 ಕೋಟಿ ಹಾಗೂ ಉಬರ್ ನಿಂದ 1.02 ಕೋಟಿ ರುಪಾಯಿ ಅತಿ ಹೆಚ್ಚು ವೇತನದ ಆಫರ್ ನೀಡಿವೆ.
ಇನ್ನು ದೇಶೀಯವಾಗಿ ಅತಿ ಹೆಚ್ಚು ವೇತನದ ಆಫರ್ ನೀಡಿರುವುದು ಐಐಟಿ ಬಾಂಬೆಯಲ್ಲಿ. ಕ್ವಾಲ್ ಕಮ್ ನಿಂದ ವಾರ್ಷಿಕ 32.59 ಲಕ್ಷ ಆಫರ ನೀಡಲಾಗಿದೆ. ಅದೇ ರೀತಿ ಗೂಗಲ್ 32 ಲಕ್ಷ, ಗೋಲ್ಡ್ ಮನ್ ಸ್ಯಾಕ್ಸ್ 31.50 ಲಕ್ಷ ರುಪಾಯಿ ಆಫರ್ ನೀಡಿದೆ.


Click it and Unblock the Notifications