ಉಡುಪಿ ಮೂಲದ ಡಿಜಿಟಲ್ ಟ್ರಾನ್ಸ್‌ಫಾರ್ಮೇಶನ್ ಸೊಲ್ಯೂಷನ್ಸ್ ಸಂಸ್ಥೆ ರೋಬೋಸಾಫ್ಟ್ ಟೆಕ್ನಾಲಜೀಸ್ ಅನ್ನು ಜಪಾನ್ ಮೂಲದ ಟೆಕ್ನೋಪ್ರೋ ಹೋಲ್ಡಿಂಗ್‌ಗೆ ಬರೋಬ್ಬರಿ 805 ಕೋಟಿ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದೆ. ಆಗಸ್ಟ್ 10 ರಂದು ಈ ಕುರಿತು ಮಾರಾಟ ಒಪ್ಪಂದಕ್ಕೆ ಕಂಪನಿಯು ಸಹಿ ಹಾಕಿದೆ.
ಕರ್ನಾಟಕದ ನಗರವಾದ ಉಡುಪಿಯಲ್ಲಿರುವ ರೋಬೋಸಾಫ್ಟ್ ಅನ್ನು 1996 ರಲ್ಲಿ ರೋಹಿತ್ ಭಟ್ ಸ್ಥಾಪಿಸಿದರು. ಈ ಕಂಪನಿಯು ಭಾರತವನ್ನು ಹೊರತುಪಡಿಸಿ ಜಪಾನ್ ಮತ್ತು ಅಮೆರಿಕಾದಲ್ಲಿ ವಿತರಣಾ ಕೇಂದ್ರವನ್ನು ಹೊಂದಿದ್ದು 1,000ಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿದೆ.
ಈ ಕಂಪನಿಯು ಪ್ರಾಜೆಕ್ಟ್‌ಗಳನ್ನು ತೆಗೆದುಕೊಂಡು ಬಳಕೆದಾರರ ವಿನ್ಯಾಸ, ಎಂಜಿನಿಯರಿಂಗ್ ಮತ್ತು ವಿಶ್ಲೇಷಣೆಯಂತಹ ಡಿಜಿಟಲ್ ರೂಪಾಂತರದಲ್ಲಿ ಪರಿಹಾರಗಳನ್ನು ನೀಡುತ್ತದೆ. ಇವರ ಮೊದಲ ಗ್ರಾಹಕ ಆಪಲ್ ಅನ್ನೋದು ವಿಶೇಷ.
ಹಣಕಾಸು ವರ್ಷ 2020-21ರಲ್ಲಿ ಕಂಪನಿಯ ನಿವ್ವಳ ಮಾರಾಟವು 184 ಕೋಟಿ ರೂಪಾಯಿಗಳಷ್ಟಿದ್ದು, ಹಿಂದಿನ ವರ್ಷ 97.4 ಕೋಟಿ ರೂಪಾಯಿಗೆ ಹೋಲಿಸಿದರೆ ಶೇಕಡಾ 89ರಷ್ಟು ಹೆಚ್ಚಾಗಿದೆ. ಇನ್ನು ಕಂಪನಿಯ ನಿವ್ವಳ ಆದಾಯವು ಪ್ರಸಕ್ತ ಹಣಕಾಸು ವರ್ಷ 49.4 ಕೋಟಿಯಷ್ಟಿದ್ದು, ಮಾರ್ಚ್ 2020 ಕ್ಕೆ ಕೊನೆಗೊಳ್ಳುವ ವರ್ಷದಲ್ಲಿ 18.2 ಕೋಟಿ ರೂಪಾಯಿಗಳಿಂದ ಶೇಕಡಾ 170ರಷ್ಟು ಹೆಚ್ಚಾಗಿದೆ.

''ರೋಬೋಸಾಫ್ಟ್ ಕಳೆದ ಎರಡು ದಶಕಗಳಲ್ಲಿ ಅದ್ಭುತವಾದ ಪ್ರಯಾಣವನ್ನು ಹೊಂದಿದೆ ಮತ್ತು ಈ ಅವಧಿಯಲ್ಲಿ ಅಧಿಕವಾಗಿ ಬೆಳೆದಿದೆ. ಅಸೆಂಟ್ ಕ್ಯಾಪಿಟಲ್ ಮತ್ತು ಕಲಾರಿ ಕ್ಯಾಪಿಟಲ್ ಜೊತೆಗಿನ ಪಾಲುದಾರಿಕೆಯು ನಮಗೆ ಬಲವಾದ ಬೆಳವಣಿಗೆ ಕಂಡಿದ್ದೇವೆ. ಇದೀಗ ಟೆಕ್ನೋಪ್ರೋನಂತಹ ಜಾಗತಿಕ ದೈತ್ಯನಿಗೆ ನಮ್ಮ ಕಂಪನಿ ಹಸ್ತಾಂತರಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ'' ಎಂದು ರೋಬೋಸಾಫ್ಟ್ ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರೋಹಿತ್ ಭಟ್ ಹೇಳಿದರು.
ಕಂಪನಿಯು ಕ್ರಮವಾಗಿ 2011 ಮತ್ತು 2008 ರಲ್ಲಿ ಕಲಾರಿ ಮತ್ತು ಅಸೆಂಟ್ ಕ್ಯಾಪಿಟಲ್‌ನಿಂದ ಹಣವನ್ನು ಸಂಗ್ರಹಿಸಿತ್ತು. ಇನ್ನು ರೋಬೋಸಾಫ್ಟ್ ಕಂಪನಿಯು ಪ್ರಸ್ತುತ ಇರುವಂತಹ ನಿರ್ವಹಣಾ ತಂಡವೇ ಮುನ್ನಡೆಸುತ್ತದೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ರವಿತೇಜ ಬೊಮ್ಮಿರೆಡ್ಡಿಪಲ್ಲಿ ನೇತೃತ್ವದಲ್ಲಿ ಮುನ್ನೆಡೆಯಲಿದೆ. ಇತ್ತೀಚೆಗೆ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಉನ್ನತೀಕರಿಸಲಾಗಿದೆ.
ಜಪಾನ್‌ನ ಟೆಕ್ನೋಪ್ರೋ ಕಂಪನಿ:
ಟೋಕಿಯೊ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಕಂಪನಿಯಾದ ಟೆಕ್ನೋಪ್ರೊ ಐಟಿ, ಎಂಜಿನಿಯರಿಂಗ್ ಮತ್ತು ಆರ್ & ಡಿ ಯಲ್ಲಿ ಪರಿಣತಿ ಹೊಂದಿದ್ದು, 20,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ. ಟೆಕ್ನೋಸಾಫ್ಟ್ ಪ್ರಕಾರ, ಕಂಪನಿಯು ಜಪಾನ್‌ನಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ಮಾಧ್ಯಮ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಸಿನರ್ಜಿಗಳನ್ನು ಹೊಂದಿದೆ ಮತ್ತು ಕಂಪನಿಯು ಭಾರತದಲ್ಲಿ ಎಂಜಿನಿಯರಿಂಗ್ ಪ್ರತಿಭೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
"ಕಂಪನಿಯ ಮುಂದಿನ ಬೆಳವಣಿಗೆಯಲ್ಲಿ ನಾವು ರೋಬೋಸಾಫ್ಟ್‌ನೊಂದಿಗೆ ನಿಕಟ ಸಹಯೋಗವನ್ನು ಎದುರು ನೋಡುತ್ತಿದ್ದೇವೆ ಮತ್ತು ಟೆಕ್ನೊಪ್ರೊ ಮತ್ತು ರೋಬೋಸಾಫ್ಟ್‌ಗಳ ನಡುವೆ ಅದ್ಭುತವಾದ ಸಹಕಾರವನ್ನು ಕಾಣುತ್ತೇವೆ" ಎಂದು ಟೆಕ್ನೋಪ್ರೊ ಅಧ್ಯಕ್ಷರು, ಪ್ರತಿನಿಧಿ ನಿರ್ದೇಶಕರು ಮತ್ತು ಸಿಇಒ ತಕೇಶಿ ಯಾಗಿ ಹೇಳಿದರು.
"ಟೆಕ್ನೊಪ್ರೊ ಜೊತೆಗಿನ ಪಾಲುದಾರಿಕೆ ನಮಗೆ ಜಪಾನ್‌ನಲ್ಲಿ ಬೆಳೆಯಲು ಹೊಸ ಅವಕಾಶಗಳನ್ನು ಒದಗಿಸುತ್ತದೆ, ಇದು ಡಿಜಿಟಲ್ ರೂಪಾಂತರದ ಹಾದಿಯಲ್ಲಿದೆ ಮತ್ತು ಯುಎಸ್, ಯುರೋಪ್ ಮತ್ತು ಭಾರತದ ನಮ್ಮ ಪ್ರಮುಖ ಮಾರುಕಟ್ಟೆಗಳಲ್ಲಿ ವಿಸ್ತರಿಸುವುದನ್ನು ಮುಂದುವರಿಸಿದೆ. ಇದು ರೋಬೋಸಾಫ್ಟ್‌ನ ದೃಷ್ಟಿಕೋನ ಮತ್ತು ಕಾರ್ಯತಂತ್ರದ ದೃಡೀಕರಣವಾಗಿದೆ ಮತ್ತು ನಮ್ಮ ಬಲವಾದ ದಾಖಲೆಯಾಗಿದೆ. ನಾವು ವಿಶ್ವಾದ್ಯಂತ ನಮ್ಮ ಗ್ರಾಹಕರಿಗೆ ಹೊಸತನ ಮತ್ತು ಡಿಜಿಟಲ್ ರೂಪಾಂತರವನ್ನು ಮುಂದುವರಿಸುತ್ತೇವೆ'' ಎಂದು ರೊಬೊಸಾಫ್ಟ್ ಸಿಇಒ ರವಿತೇಜ ಬೊಮ್ಮಿರೆಡ್ಡಿಪಲ್ಲಿ ಹೇಳಿದರು.


Click it and Unblock the Notifications