ಮುಕೇಶ್ ಅಂಬಾನಿಯವರ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಅಥವಾ ಜೆಎಫ್‌ಎಸ್‌ಎಲ್ ಷೇರುಗಳು ಸೋಮವಾರ (ಆಗಸ್ಟ್ 21) ಷೇರು ವಿನಿಮಯ ಕೇಂದ್ರಗಳಾದ ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಲೀಸ್ಟ್ ಮಾಡಲಾಗುತ್ತದೆ. ಈ ಹಿಂದೆ ರಿಲಯನ್ಸ್ ಸ್ಟ್ರಾಟೆಜಿಕ್ ವೆಂಚರ್ಸ್ ಎಂದು ಕರೆಯಲಾಗುತ್ತಿದ್ದ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಇಂದು ಷೇರು ಪೇಟೆಗೆ ಎಂಟ್ರಿ ನೀಡಲಿದೆ.
ಪ್ರಸ್ತುತ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಮಾರುಕಟ್ಟೆ ಮೌಲ್ಯ ಅಥವಾ ಸ್ಟಾಕ್ ಮೌಲ್ಯ 1.66 ಲಕ್ಷ ಕೋಟಿ ರೂಪಾಯಿಯಾಗಿದೆ. ಹಾಗೆಯೇ ಇದು ಬಜಾಜ್ ಫೈನಾನ್ಸ್ ನಂತರ ದೇಶದ ಎರಡನೇ ಅತಿದೊಡ್ಡ ಎನ್‌ಬಿಎಫ್‌ಸಿಯಾಗಿದೆ. ಪ್ರತಿ ಷೇರಿನ ದರ 261.85 ರೂಪಾಯಿ ಆಗಿದೆ. ವಿಶೇಷವಾಗಿ ಒಂದು ಗಂಟೆಗಳ ಕಾಲ ಸೆಷನ್ ಇರಲಿದ್ದು, ಪ್ರತಿ ಷೇರಿಗೆ 120 ರೂಪಾಯಿಯಿಂದ 150 ರೂಪಾತಿ ನಡುವೆ ವಹಿವಾಟು ನಡೆಯುವ ನಿರೀಕ್ಷೆಯಿದೆ.

ಲೀಸ್ಟಿಂಗ್‌ಗೂ ಮೊದಲು ಮೊದಲ ಡಿಜಿಟಲ್ ಎನ್‌ಬಿಎಫ್‌ಸಿ ಜಿಯೋ ಫೈನಾನ್ಶಿಯಲ್ ಸರ್ವಿಸಸ್‌ನ ಷೇರುಗಳು ಗ್ರೇ ಮಾರ್ಕೆಟ್‌ನಲ್ಲಿ ಸುಮಾರು 300 ರೂಪಾಯಿಗಳಂತೆ ವಹಿವಾಟು ಮಾಡಿದೆ. ಲೀಸ್ಟ್ ಮಾಡುವುಕ್ಕೂ ಮುನ್ನ ಈ ಸ್ಟಾಕ್ ಬೆಲೆ 261.85 ರೂಪಾಯಿ ಆಗಿದ್ದು, ಗ್ರೇ ಮಾರ್ಕೆಟ್‌ನಲ್ಲಿಯೇ ಸ್ಟಾಕ್ ಬೆಲೆಗಿಂತ ಅಧಿಕ ಬೆಲೆಯಲ್ಲಿ ವಹಿವಾಟು ನಡೆದಿದೆ.
ಹೊಸ ಉದ್ಯಮಕ್ಕೆ ಮುಕೇಶ್-ಆಕಾಶ್ ಅಂಬಾನಿ ಎಂಟ್ರಿ, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್‌ಗೆ ಸ್ಪರ್ಧೆ
ಹೂಡಿಕೆದಾರರು ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಪ್ರತಿ ಷೇರಿಗೆ ಜಿಯೋ ಫೈನಾನ್ಶಿಯಲ್ ಸರ್ವಿಸಸ್‌ನ ಒಂದು ಪಾಲನ್ನು ನಿಗದಿಪಡಿಸಲಾಗಿದೆ. ಪೋಷಕ ಸಂಸ್ಥೆಯಿಂದ ಬೇರ್ಪಟ್ಟು ಸುಮಾರು ಒಂದು ತಿಂಗಳುಗಳ ಕಾಲ ನಕಲಿ ಸ್ಟಾಕ್ ಆಗಿದ್ದ ಜೆಎಫ್‌ಎಸ್ ಷೇರುಗಳು ಅಂತಿಮವಾಗಿ ಇಂದು ವಹಿವಾಟಿಗೆ ಇಳಿಯುತ್ತಿದೆ. ಆದರೆ ಮುಂದಿನ 10 ಟ್ರೇಡಿಂಗ್ ದಿನಗಳವರೆಗೆ ಟ್ರೇಡ್-ಟು-ಟ್ರೇಡ್ ವಿಭಾಗದಲ್ಲಿ ಇರುತ್ತದೆ.
ಟ್ರೇಡ್-ಟು-ಟ್ರೇಡ್ ವಿಭಾಗವೇನು?
ಈ ವಿಭಾಗದಲ್ಲಿ, ಕಡ್ಡಾಯ ವಿತರಣಾ ಆಧಾರದ ಮೇಲೆ ಮಾತ್ರ ಷೇರುಗಳ ವಹಿವಾಟು ಮಾಡಬಹುದಾಗಿದೆ. ಇಂಟ್ರಾಡೇ ವಹಿವಾಟುಗಳು ನಡೆಸಲು ಅವಕಾಶವಿರುವುದಿಲ್ಲ ಅಥವಾ ಸಾಧ್ಯವಿಲ್ಲ. ಹೂಡಿಕೆದಾರರು ಜೆಎಫ್‌ಎಸ್‌ನ ಷೇರುಗಳನ್ನು ಖರೀದಿಸಿದರೆ ಮತ್ತು ಅದೇ ದಿನದಲ್ಲಿ ಅಥವಾ ಷೇರುಗಳನ್ನು ಡಿಮ್ಯಾಟ್ ಖಾತೆಗೆ ಜಮಾ ಮಾಡುವ ಮೊದಲು ಅದನ್ನು ಮಾರಾಟ ಮಾಡಲು ಪ್ರಯತ್ನಿಸಿದರೆ, ಅದು ತಿರಸ್ಕೃತವಾಗುತ್ತದೆ. ಸ್ಟಾಕ್ ಈ ವಿಭಾಗದಲ್ಲಿ 10 ದಿನಗಳವರೆಗೆ ಇರುತ್ತದೆ.
ತೆರಿಗೆ ಲೆಕ್ಕಾಚಾರ ಹೇಗಿದೆ?
ಡಿಮರ್ಜ್‌ಗೂ ಮುನ್ನ ಕಂಪನಿಯು ಆರ್‌ಐಎಲ್‌ನ ಸ್ವಾಧೀನ ವೆಚ್ಚವಾಗಿ ಶೇಕಡ 95.32ರಷ್ಟು ಮತ್ತು ಜಿಯೋ ಹಣಕಾಸು ಸೇವೆಗಳಿಗೆ ಶೇಕಡ 4.68ರನ್ನು ಹಂಚಿಕೆ ಮಾಡಿತು. ಷೇರುಗಳ ಮಾರಾಟದ ಸಮಯದಲ್ಲಿ ಹೂಡಿಕೆದಾರರು ತಮ್ಮ ಬಂಡವಾಳ ಲಾಭದ ತೆರಿಗೆಯನ್ನು ಲೆಕ್ಕಾಚಾರ ಮಾಡಲು ಇದು ಸಹಾಯ ಮಾಡುತ್ತದೆ. ಅಂದರೆ ಷೇರು ವಿಂಗಡಣೆಗೂ ಒಂದು ದಿನದ ಮೊದಲು ಜುಲೈ 19 ರಂದು ಆರ್‌ಐಎಲ್ ಷೇರುಗಳನ್ನು ಖರೀದಿಸಿದ ಹೂಡಿಕೆದಾರರು ಜಿಯೋ ಫೈನಾನ್ಷಿಯಲ್ ಸರ್ವೀಸಸ್‌ಗಾಗಿ 133 ರೂಪಾಯಿ (ಅಥವಾ ಮುಕ್ತಾಯದ ಬೆಲೆ 2,853 ರೂಪಾಯಿಯಲ್ಲಿ ಶೇಕಡ 4.6ರಷ್ಟು) ಪಾವತಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
ಹಿರಿಯ ಬ್ಯಾಂಕರ್ ಕೆವಿ ಕಾಮತ್ ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನಲ್ಲಿ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದರೆ, ಇಶಾ ಅಂಬಾನಿ ಜೆಎಫ್‌ಎಸ್ ಮಂಡಳಿಯಲ್ಲಿ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ನೇಮಿಸಲಾಗಿದೆ. ಐಸಿಐಸಿಐ ಮಾಜಿ ಕಾರ್ಯನಿರ್ವಾಹಕರಾಗಿದ್ದ ಹಿತೇಶ್ ಸೇಥಿಯಾ ಹೊಸ ಸಿಇಒ ಮತ್ತು ಎಂಡಿ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಅಲ್ಲದೆ, ಇತ್ತೀಚೆಗಷ್ಟೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಚರಂಜಿತ್ ಸಿಂಗ್ ಅತ್ರಾ ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸ್ಥಾನವನ್ನು ವಹಿಸಿಕೊಂಡಿದ್ದಾರೆ.


Click it and Unblock the Notifications