ಭಾರತದ ಅತೀ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್‌ನ ಚೇರ್‌ಮನ್ ಮುಕೇಶ್ ಅಂಬಾನಿ ತನ್ನ ಉದ್ಯಮವನ್ನು ಬೇರೆ ಬೇರೆ ಕ್ಷೇತ್ರಗಳಿಗೆ ವಿಸ್ತರಣೆ ಮಾಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಆರಂಭದಿಂದ ಈವರೆಗೆ ಹಲವಾರು ಕ್ಷೇತ್ರಗಳಿಗೆ ತನ್ನ ಉದ್ಯಮವನ್ನು ವಿಸ್ತರಿಸುತ್ತಾ ಸಾಗುತ್ತಿದ್ದಾರೆ. ಈಗ ಮುಕೇಶ್ ಅಂಬಾನಿ ಹಾಗೂ ಪುತ್ರ ಆಕಾಶ್ ಅಂಬಾನಿ ಹೊಸ ಉದ್ಯಮಕ್ಕೆ ಎಂಟ್ರಿ ನೀಡಿದ್ದು ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಸ್ಪರ್ಧೆ ನೀಡುತ್ತಿದ್ದಾರೆ.
ಹೌದು, ಭಾರತದ, ಏಷ್ಯಾದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಎಂದಿಗೂ ಕೂಡಾ ಅತೀ ದೊಡ್ಡ ರಿಸ್ಕ್‌ಗಳನ್ನು ತೆಗೆದುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಹೊಸ ಕ್ಷೇತ್ರಕ್ಕೆ ಎಂಟ್ರಿ ನೀಡಿ ಮಾರುಕಟ್ಟೆಯ ಸ್ಥಿತಿಯನ್ನೇ ಬದಲಾವಣೆ ಮಾಡುವ ವಿಚಾರದಲ್ಲಿ ಹೆಸರುವಾಸಿಯಾಗಿದ್ದಾರೆ. ಈಗ ಮುಕೇಶ್ ಅಂಬಾನಿಯ ಹಿರಿಯ ಪುತ್ರ ಆಕಾಶ್ ಅಂಬಾನಿ ಕನ್ಸ್ಯೂಮರ್ ಫೈನಾನ್ಸ್ ಕ್ಷೇತ್ರಕ್ಕೆ ಎಂಟ್ರಿ ನೀಡಿದ್ದಾರೆ.

ಎಲ್ಲಿ ಆರಂಭ ಮಾಡಲಾಗುತ್ತದೆ?
ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷರಾಗಿರುವ ಮುಕೇಶ್ ಅಂಬಾನಿಯ ಹಿರಿಯ ಮಗ ಆಕಾಶ್ ಅಂಬಾನಿ ಈಗ ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನೊಂದಿಗೆ ಗ್ರಾಹಕ ಹಣಕಾಸು ಕ್ಷೇತ್ರಕ್ಕೆ ಪ್ರವೇಶಿಸಲು ನಿರ್ಧಾರ ಮಾಡಿದ್ದಾರೆ. ವರದಿಗಳ ಪ್ರಕಾರ ಈ ಮೊದಲ ಯೋಜನೆಯಲ್ಲಿ ಪ್ರಸ್ತುತ ಕೆಲವು ಆಯ್ದ ಪ್ರದೇಶಗಳಲ್ಲಿ ಮಾತ್ರ ಪರೀಕ್ಷೆ ಮಾಡಲಾಗುತ್ತದೆ. ಅಂದರೆ ಪ್ರಾಯೋಗಿಕವಾಗಿ ಕೆಲವು ರಿಲಯನ್ಸ್ ಡಿಜಿಟಲ್‌ನ ಪ್ರಾದೇಶಿಕ ಕಚೇರಿಗಳಲ್ಲಿ ಆರಂಭ ಮಾಡಲಾಗುತ್ತದೆ.
ಮುಕೇಶ್ ಅಂಬಾನಿ ರಿಲಯನ್ಸ್ ಜಿಯೋ ಸಂಸ್ಥೆಯ ಡೈರೆಕ್ಟರ್ ಸ್ಥಾನದಿಂದ ಕೆಳಕ್ಕೆ ಇಳಿದ ಬಳಿಕ ಆಕಾಶ್ ಅಂಬಾನಿ ರಿಲಯನ್ಸ್ ಜಿಯೋದ ಹೊಸ ಚೇರ್‌ಮನ್ ಆಗಿ ನೇಮಕಗೊಂಡಿದ್ದಾರೆ. ರಿಲಯನ್ಸ್ ಜಿಯೋ ಪ್ರಸ್ತುತ ಈ ಯೋಜನೆಯ ಪ್ರಾಯೋಗಿಕ ಪ್ರಯೋಗವನ್ನು ಮಾಡುತ್ತಿದೆ ಎಂದು ಇಕಾನಮಿಕ್ ಟೈಮ್ಸ್ ಹಿಂದಿ ವರದಿಯು ಉಲ್ಲೇಖಿಸಿದೆ. ಈ ವರ್ಷದಲ್ಲಿಯೇ ಸಂಸ್ಥೆಯು ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಅನ್ನು ಆರಂಭ ಮಾಡಲಿದೆ.
ವರ್ಲ್ಡ್ ಕ್ಲಾಸ್ ಸಿಟಿ ನಿರ್ಮಾಣ
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಂಗಸಂಸ್ಥೆ ಮಾಡೆಲ್ ಎಕನಾಮಿಕ್ ಟೌನ್‌ಶಿಪ್ ಲಿಮಿಟೆಡ್ ಅಥವಾ ಎಂಇಟಿ ಸಿಟಿಯನ್ನು ಪ್ರಸ್ತುತ ರಾಷ್ಟ್ರ ರಾಜಧಾನಿ ಪ್ರದೇಶದ ಬಳಿ ನಿರ್ಮಾಣ ಮಾಡುತ್ತಿದೆ. ಈ ಹಿಂದಿಗಿಂತಲೂ ಹೆಚ್ಚು ವಿಶ್ವದರ್ಜೆಯ ಸ್ಮಾರ್ಟ್ ಸಿಟಿಯನ್ನು ನಿರ್ಮಾಣ ಮಾಡುವ ಯೋಜನೆಯನ್ನು ಮುಕೇಶ್ ಅಂಬಾನಿ ಹೊಂದಿದ್ದಾರೆ.
ಹೊಸ ಗ್ರೀನ್‌ಫೀಲ್ಡ್ ನಗರವನ್ನು ಗುರುಗ್ರಾಮದ ಬಳಿ ಹರಿಯಾಣದ ಜಜ್ಜರ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಪ್ರಮುಖ ದೆಹಲಿ ಎನ್‌ಸಿಆರ್ ಆರ್ಥಿಕ ಪ್ರದೇಶವಾಗಿದೆ. 8,000 ಎಕರೆ ಪ್ರದೇಶದಲ್ಲಿ ನಗರವನ್ನು ನಿರ್ಮಿಸಲಾಗುತ್ತಿದೆ. 220 ಕೆವಿ ವಿದ್ಯುತ್ ಉಪಕೇಂದ್ರ, ನೀರು ಸರಬರಾಜು, ಸಂಸ್ಕರಣಾ ಘಟಕ ಮತ್ತು ವಿಶಾಲ ರಸ್ತೆಗಳಂತಹ ಮೂಲಸೌಕರ್ಯಗಳು ಈಗಾಗಲೇ ಆ ಪ್ರದೇಶದಲ್ಲಿದೆ.
ಪ್ರಸ್ತುತ, ಹೊಸ ರಿಲಯನ್ಸ್ ಸ್ಮಾರ್ಟ್ ಸಿಟಿಯು 4 ಜಪಾನಿನ ದೈತ್ಯರಿಗೆ ನೆಲೆಯಾಗಿದೆ. ನಿಹಾನ್ ಕೊಹ್ಡೆನ್, ಪ್ಯಾನಾಸೋನಿಕ್, ಡೆನ್ಸೊ ಮತ್ತು ಟಿ-ಸುಜುಕಿ ಸಂಸ್ಥೆಗಳು ಈ ಪ್ರದೇಶದಲ್ಲಿಯೆ ಇದೆ. ನಿಹಾನ್ ಕೊಹ್ಡೆನ್ ನಿರ್ಮಾಣದ ಅಡಿಯಲ್ಲಿನ ಸೌಲಭ್ಯವು ಭಾರತದಲ್ಲಿನ ಅದರ ಅತಿದೊಡ್ಡ ಉತ್ಪಾದನಾ ಘಟಕವಾಗಿದೆ. ಎಂಇಟಿ ಸಿಟಿಯು ಜಪಾನ್ ಇಂಡಸ್ಟ್ರಿಯಲ್ ಟೌನ್‌ಶಿಪ್ ಆಗಿದೆ.
ಎಂಇಟಿ ಸಿಟಿಯ ಸಿಇಒ ಎಸ್‌ವಿ ಗೋಯಲ್ ಪ್ರಕಾರ, ಕಂಪನಿಯು 400 ಕ್ಕೂ ಹೆಚ್ಚು ಕೈಗಾರಿಕಾ ಗ್ರಾಹಕರನ್ನು ಹೊಂದಿದೆ. ಉತ್ತರ ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರೀನ್‌ಫೀಲ್ಡ್ ಸ್ಮಾರ್ಟ್ ಸಿಟಿಗಳಲ್ಲಿ ಒಂದಾದ ವಾಕ್-ಟು-ವರ್ಕ್ ಮಾಸ್ಟರ್‌ಪ್ಲಾನ್ ಅನ್ನು ಮಾಡೆಲ್ ಎಕನಾಮಿಕ್ ಟೌನ್‌ಶಿಪ್ ಲಿಮಿಟೆಡ್ ನಿರ್ಮಿಸಿದೆ. ಅಲ್ಲಿ ಘಟಕಗಳನ್ನು ಸ್ಥಾಪಿಸುವ ಕಂಪನಿಗಳಿಗೆ ನಗರವು ಪ್ಲಗ್-ಎನ್-ಪ್ಲೇ ಮೂಲಸೌಕರ್ಯವನ್ನು ಸಹ ನೀಡುತ್ತದೆ.


Click it and Unblock the Notifications