ರಿಲಯನ್ಸ್ ರೀಟೇಲ್ ನಿಂದ ಫೇಸ್ ಬುಕ್ ನ ವಾಟ್ಸಾಪ್ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿ ಮೂರು ದಿನಕ್ಕೆ ನವೀಮುಂಬೈ, ಥಾಣೆ ಮತ್ತು ಕಲ್ಯಾಣ್ ನಲ್ಲಿ ಜಿಯೋಮಾರ್ಟ್ ದೋಸ್ತಿ ವ್ಯವಹಾರಕ್ಕೆ ಚಾಲನೆ ಸಿಕ್ಕಿದೆ. ಆ ಮೂಲಕ ವಾಟ್ಸಾಪ್ ನ 4 ಕೋಟಿ ಬಳಕೆದಾರರಿಗೆ ರಿಲಯನ್ಸ್ ಜಿಯೋಮಾರ್ಟ್ ಗೆ ನೇರ ಸಂಪರ್ಕ ಸಿಕ್ಕಂತೆ ಆಗಿದೆ.
ಜಿಯೋಮಾರ್ಟ್ ನಲ್ಲಿ ಖರೀದಿ ಮಾಡಬೇಕು ಅಂದರೆ, ಜಿಯೋಮಾರ್ಟ್ ನ ವಾಟ್ಸಾಪ್ ನಂಬರ್ 8850008000 ಅನ್ನು ತಮ್ಮ ಮೊಬೈಲ್ ಫೋನ್ ನಲ್ಲಿ ಮೊದಲಿಗೆ ಸೇವ್ ಮಾಡಿಕೊಳ್ಳಬೇಕು. ಆ ನಂತರ ಗ್ರಾಹಕರಿಗೆ ಲಿಂಕ್ ವೊಂದನ್ನು ಕಳುಹಿಸಲಾಗುತ್ತದೆ. ಆ ಲಿಂಕ್ ವ್ಯಾಲಿಡಿಟಿ ಮೂವತ್ತು ನಿಮಿಷ ಇರುತ್ತದೆ.
ಅದನ್ನು ಕ್ಲಿಕ್ ಮಾಡಿದರೆ, ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ವಿಳಾಸ, ಫೋನ್ ನಂಬರ್ ತುಂಬಬೇಕು. ಆ ನಂತರ ಲಭ್ಯವಿರುವ ಉತ್ಪನ್ನಗಳ ಮಾಹಿತಿ ಸಿಗುತ್ತದೆ. ಇದರಲ್ಲಿ ರಿಲಯನ್ಸ್ ರೀಟೇಲ್ ಸ್ವಂತ ಬ್ರ್ಯಾಂಡ್ ಸೇರಿದಂತೆ ಇತರ ಬ್ರ್ಯಾಂಡ್ ಗಳ ಉತ್ಪನ್ನಗಳೂ ಮಾರಾಟಕ್ಕಿವೆ.
ನಗದು ರೂಪದಲ್ಲಿ ಮಾತ್ರ ಪಾವತಿ
ಆರ್ಡರ್ ಅಂತಿಮವಾಗಿ ನೀಡಿದ ನಂತರ ಆ ಬಗ್ಗೆ ಮಾಹಿತಿ ವಾಟ್ಸಾಪ್ ನಲ್ಲಿ ಸ್ಥಳೀಯ ಕಿರಾಣಾ ಮಳಿಗೆಗಳಿಗೆ ಹಂಚಿಕೊಳ್ಳಲಾಗುತ್ತದೆ. ಗ್ರಾಹಕರಿಗೆ ಉತ್ಪನ್ನಗಳು ಹಾಗೂ ಕಿರಾಣಾ/ಜಿಯೋಮಾರ್ಟ್ ಸ್ತೋರ್ ನ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಮಳಿಗೆಯಲ್ಲಿ ಬಿಲ್ ಆದ ತಕ್ಷಣ ಗ್ರಾಹಕರಿಗೆ ಮಾಹಿತಿ ದೊರೆಯುತ್ತದೆ. ಸದ್ಯಕ್ಕೆ ಹಣ ಪಾವತಿ ನಗದು ರೂಪದಲ್ಲಿ ಮಾತ್ರ ಮಾಡಲು ಅವಕಾಶ ಇದೆ. ಇನ್ನು ಗ್ರಾಹಕರೇ ತಾವು ನೀಡಿದ ಆರ್ಡರ್ ಅನ್ನು ಮಳಿಗೆಗಳಿಂದ ತೆಗೆದುಕೊಂಡು ಹೋಗಬೇಕು. ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ ರಿಲಯನ್ಸ್ ರೀಟೇಲ್ ಲಿಮಿಟೆಡ್. ಕಳೆದ ಡಿಸೆಂಬರ್ ನಲ್ಲಿ ಜಿಯೋಮಾರ್ಟ್ ಎಂದು ಆರಂಭ ಮಾಡಿದೆ. ತನ್ನನ್ನು "ದೇಶ್ ಕೀ ನಯೀ ದುಕಾನ್" ಎಂದು ಕರೆದುಕೊಂಡಿಸ್ಸು, ಸದ್ಯಕ್ಕೆ ಜಿಯೋಮಾರ್ಟ್ ನಿಂದ ಮುಂಬೈ ಉಪನಗರಗಳಾದ ನವೀ ಮುಂಬೈ, ಥಾಣೆ ಹಾಗೂ ಕಲ್ಯಾಣ್ ನಲ್ಲಿ ಆನ್ ಲೈನ್ ವ್ಯವಹಾರ ಮಾಡಬಹುದು.
ಹೆಚ್ಚು ವೆಚ್ಚ ಉಳಿತಾಯಕ್ಕೆ ಅವಕಾಶ
ಇನ್ನು ಈ ದಿನಸಿ ಅಂಗಡಿಗಳ ಮೂಲಕ ರಿಲಯನ್ಸ್ ನ ಸ್ವಂತ ಬ್ರ್ಯಾಂಡ್ ಗಳಾದ ಬೆಸ್ಟ್ ಫಾರ್ಮ್ಸ್, ಗುಡ್ ಲೈಫ್, ಮಸ್ತಿ ಓಯೆ, ಕಾಫೆ, ಎಂಜೋ, ಮೋಪ್ಜ್, ಎಕ್ಸ್ ಪೆಲ್ಜ್ ಮತ್ತು ಹೋಮ್ ಒನ್ ಉತ್ಪನ್ನಗಳನ್ನೂ ಮಾರಾಟ ಮಾಡಲಾಗುತ್ತದೆ. ಇದರ ಜತೆಗೆ ಮನೆ ಬಳಿಯ ಮಳಿಗೆಗಳು, ಸೂಪರ್ ಮಾರ್ಕೆಟ್, ಹೈಪರ್ ಮಾರ್ಕೆಟ್, ಹೋಲ್ ಸೇಲ್ , ಸ್ಪೆಷಾಲಿಟಿ ಮತ್ತು ಆನ್ ಲೈನ್ ಸ್ಟೋರ್ ಗಳ ನಿರ್ವಹಣೆ ಕೂಡ ಮಾಡುತ್ತದೆ. ಇ ಕಾಮರ್ಸ್ ಪ್ಲಾಟ್ ಫಾರ್ಮ್ ಅಡಿಯಲ್ಲಿ ಎಲ್ಲ ಬಗೆಯ ಮಾರಾಟಗಾರರನ್ನೂ ಹೊಂದಿದೆ. ಬದಲಿಗೆ ಆ ಮಾರಾಟಗಾರರು ಬೇಡಿಕೆಗೆ ಸ್ಪಂದಿಸುತ್ತಾರೆ. ಇದರಿಂದ ಕಂಪೆನಿಗೆ ಈಗಿನ ಸಾಂಪ್ರದಾಯಿಕ ಇ ಕಾಮರ್ಸ್ ವ್ಯವಹಾರಗಳಿಗಿಂತ ಹೆಚ್ಚು ಉಳಿತಾಯ ಮಾಡಲು ಸಾಧ್ಯವಾಗುತ್ತದೆ.
ಚೀನಾದ ಆಲಿಬಾಬಾ ಮಾದರಿ
ಈಗ ರಿಲಯನ್ಸ್ ನಿಂದ ಸ್ಥಳೀಯ ಮಾರಾಟಗಾರರಿಗೆ O2O (ಆನ್ ಲೈನ್ ಟು ಆಫ್ ಲೈನ್) ಮಾರುಕಟ್ಟೆ ಸ್ಥಳ ಒದಗಿಸಲಾಗುತ್ತಿದೆ. ಅಂದ ಹಾಗೆ ಈ ಐಡಿಯಾ ಮೊದಲನೆಯದಾಗಿ ಜಾರಿಗೆ ತಂದಿದ್ದು ಚೀನಾದ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ಸ್. ಈ ವ್ಯವಹಾರದ ಮಾದರಿಯಲ್ಲಿ ಗ್ರಾಹಕರು ಆನ್ ಲೈನ್ ಉತ್ಪನ್ನಗಳು ಅಥವಾ ಸೇವೆಯನ್ನು ಹುಡುಕುತ್ತಾರೆ ಹಾಗೂ ಆಫ್ ಲೈನ್ ಅಂದರೆ ನೇರ ಮಾರಾಟ ವ್ಯವಸ್ಥೆ ಮೂಲಕ ಖರೀದಿ ಮಾಡುತ್ತಾರೆ.


Click it and Unblock the Notifications