ಭಾರತದ ಆರ್ಥಿಕತೆ... ಎಂದು ವಾಕ್ಯ ಆರಂಭ ಮಾಡಿದರೆ ಸಾಕು, "ಹೌದು, ನಮಗೆ ಗೊತ್ತಿದೆ. ದಿನದಿನಕ್ಕೂ ಗಂಭೀರವಾಗುತ್ತಿದೆ" ಎಂಬ ಭಾವ ನಿಮ್ಮ ಮನಸಿನಲ್ಲಿ ಹಾದು ಹೋಗಬಹುದು. ನಿಮಗೆ ಈ ವರದಿಯಲ್ಲಿ ಮುಖ್ಯವಾದ ಸಂಗತಿ ತಿಳಿಸಬೇಕಿದೆ. ಸದ್ಯಕ್ಕೆ ಬಹಳ ಚರ್ಚೆಯಲ್ಲಿರುವ ಆ ಸುದ್ದಿಯ ಪ್ರಕಾರ ಕನ್ನಡಿಗರೊಬ್ಬರು ಕೇಂದ್ರ ವಿತ್ತ ಸಚಿವ ಸ್ಥಾನವನ್ನು ಅಲಂಕರಿಸಬಹುದು ಎನ್ನಲಾಗುತ್ತಿದೆ.
ಏದುಸಿರು ಬಿಡುತ್ತಿರುವ ಭಾರತದ ಆರ್ಥಿಕತೆಗೆ ಚೈತನ್ಯ ತುಂಬುವ ಸಲುವಾಗಿ ಕುಂದಾಪುರ ವಾಮನ ಕಾಮತ್- ಕೆ. ವಿ. ಕಾಮತ್ ಅವರನ್ನು ಕೇಂದ್ರ ಹಣಕಾಸು ಸಚಿವ ಸ್ಥಾನಕ್ಕೆ ನೇಮಿಸಬಹುದು ಎಂಬ ಮಾತು ಹರಿದಾಡುತ್ತಿದೆ. ಜಿಡಿಪಿ ಪಾತಾಳಕ್ಕೆ ಕುಸಿದಿರುವಾಗ, ಆರ್ಥಿಕತೆಯನ್ನು ಹೇಗಾದರೂ ಮೇಲೆತ್ತಬೇಕಾದ ಜವಾಬ್ದಾರಿ ಇರುವಾಗ ಈಗಿನ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸ್ಥಾನಕ್ಕೆ ಬೇರೊಬ್ಬ ಸಮರ್ಥರನ್ನು ನೇಮಿಸಲಾಗುತ್ತದೆ ಎಂಬ ಸುದ್ದಿ ಇದೆ.
BRICS ಬ್ಯಾಂಕ್ ನ ಮುಖ್ಯಸ್ಥರಾಗಿದ್ದಾರೆ
ಕೆ. ವಿ. ಕಾಮತ್ ಅವರು ಈಗ BRICS ಬ್ಯಾಂಕ್ ನ ಮುಖ್ಯಸ್ಥರಾಗಿದ್ದಾರೆ. ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಬಹಳ ದೊಡ್ಡ ಮಟ್ಟದ ಅನುಭವ ಹೊಂದಿದ್ದಾರೆ. ಜತೆಗೆ ಯಾವ ರಾಜಕೀಯ ಪಕ್ಷಗಳೊಂದಿಗೂ ನಂಟು ಹೊಂದಿಲ್ಲ. ಈಗಿನ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸಬಲ್ಲ ಸಾಮರ್ಥ್ಯ ಕೆ. ವಿ. ಕಾಮತ್ ಅವರಿಗಿದೆ ಎಂದು ಭಾವಿಸಿ, ವಿತ್ತ ಸಚಿವರನ್ನಾಗಿ ಮಾಡಬಹುದು ಎಂಬ ಮಾತಿದೆ.
ದೇಶ- ವಿದೇಶದಲ್ಲಿ ಬಹಳ ಚರ್ಚೆ
ಒಂದು ವೇಳೆ ಕೆ.ವಿ. ಕಾಮತ್ ಹಣಕಾಸು ಸಚಿವರಾದಲ್ಲಿ ಈ ವರೆಗಿನ ಪದ್ಧತಿಯಲ್ಲಿ ಬದಲಾವಣೆ ತಂದಂತೆ ಆಗುತ್ತದೆ. ಈ ವಿಚಾರವು ದೇಶ- ವಿದೇಶದಲ್ಲಿ ಬಹಳ ಚರ್ಚೆಯಾಗುತ್ತಿದೆ. ಈಗ ಎಪ್ಪತ್ತೆರಡು ವಯಸ್ಸಿನ ಕೆ.ವಿ. ಕಾಮತ್ ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೋಸಿಸ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಮಂಗಳೂರಿನಲ್ಲಿ ಜನಿಸಿದವರು
ಹ್ಯೂಸ್ಟನ್ ಮೂಲದ ತೈಲ ಕಂಪೆನಿ ಶ್ಲುಂಬರ್ಗರ್ ಮತ್ತು ಭಾರತ ಮೂಲದ ಫಾರ್ಮ್ಯಾಸ್ಯುಟಿಕಲ್ ಕಂಪೆನಿ ಲುಪಿನ್ ನ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಾಮತ್ ಅವರು ಜನಿಸಿದ್ದು ಮಂಗಳೂರಿನಲ್ಲಿ, ಡಿಸೆಂಬರ್ 2, 1947ರಲ್ಲಿ. ಅವರ ಬಾಲ್ಯ ಕಳೆದದ್ದು ಮಂಗಳೂರಿನಲ್ಲೇ. ಪ್ರಾಥಮಿಕ ಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣ ಪಡೆದಿದ್ದು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ.
ಐಐಎಂ ಅಹ್ಮದಾಬಾದ್ ನಲ್ಲಿ ಪಿಜಿ ಡಿಪ್ಲೊಮಾ
ಸುರತ್ಕಲ್ ನಲ್ಲಿ ಇರುವ ಕೆಆರ್ ಇಸಿ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್, ಅಹ್ಮದಾಬಾದ್ ನಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್ ಮೆಂಟ್ ಕೋರ್ಸ್ ಪೂರ್ಣಗೊಳಿಸಿದ್ದಾರೆ.


Click it and Unblock the Notifications