ಕರ್ನಾಟಕ ತನ್ನ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜೆಸಿಸಿ) 2029ರ ವೇಳೆಗೆ ದ್ವಿಗುಣ ಗೊಳಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ 3.5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ ಎಂದು ಶುಕ್ರವಾರ ಬಿಡುಗಡೆ ಮಾಡಿದ ಕರಡು ನೀತಿಗಳಲ್ಲಿ ತಿಳಿದು ಬಂದಿದೆ.
ಕರಡು ನೀತಿಯ ಅನ್ವಯ ಹಲವು ಮಹತ್ವದ ನಿರ್ಣಯಗಳು ಒಳಗೊಂಡಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳ ಮೂಲಕ ಆರ್ಥಿಕ ಉತ್ಪಾದನೆಯಲ್ಲಿ 50 ಬಿಲಿಯನ್ ಡಾಲರ್ ಮುಟ್ಟುವ ಗುರಿಯನ್ನು ಹೊಂದಲಾಗಿದೆ. ದೇಶದಲ್ಲಿ ಸುಮಾರು 5.70 ಲಕ್ಷ ಜೆಸಿಸಿಗಳು ಇದ್ದು, ಈ ಪೈಕಿ ಬೆಂಗಳೂರು ಅಧಿಕ ಪಾಲನ್ನು ಹೊಂದಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಸದ್ಯ ರಾಜ್ಯದಲ್ಲಿ 570 ಜೆಸಿಸಿಗಳು ಕಾರ್ಯ ನಿರ್ವಹಿಸುತ್ತಿವೆ.

ಭಾರತದಲ್ಲೇ ಜೆಸಿಸಿ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಲಿದೆ. ಬೆಂಗಳೂರು ಹೊರತು ಪಡಿಸಿ ರಾಜ್ಯದ ವಿವಿಧ ಸ್ಥಳಗಳಲ್ಲಿ ನ್ಯಾನೋ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಲಾಗಿದೆ. ಮೈಸೂರು, ಶಿವಮೊಗ್ಗ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ನಗರದಲ್ಲಿ ನ್ಯಾನೋ ಕೇಂದ್ರಗಳ ಸ್ಥಾಪನೆಗೆ ಚಿಂತನೆ ನಡೆದಿದೆ.
3 ಹೊಸ ತಂತ್ರಜ್ಞಾನ ಪಾರ್ಕ್
1,700 ಕ್ಕೂ ಹೆಚ್ಚು ಜಿಸಿಸಿ ಗಳು ಭಾರತದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು, 1.9 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿವೆ. 2030 ರ ವೇಳೆಗೆ ಈ ಸಂಖ್ಯೆ 2,100-2,200 ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ 2.5 ಮಿಲಿಯನ್‌ನಿಂದ 2.8 ಮಿಲಿಯನ್ ಜನರಿಗೆ ಉದ್ಯೋಗ ಸೃಷ್ಟಿ ಆಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು ಹಾಗೂ ಬೆಂಗಳೂರು ಹೊರ ವಲಯದಲ್ಲಿ 3 ಹೊಸ ತಂತ್ರಜ್ಞಾನ ಪಾರ್ಕ್ ರಚಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಮೂಲಕ ಕೌಶಲ್ಯ ಅಭಿವೃದ್ಧಿಗೆ ಪೂರಕ ಕೋರ್ಸ್, ಸಂಶೋಧನೆಗಳಿಗೆ ಧನ ಸಹಾಯ ನೀಡುತ್ತದೆ. ವಿಶೇಷವಾಗಿ ಕೃತಕ ಬುದ್ಧಿಮತ್ತೆಯ ಮೇಲೆ ಕೇಂದ್ರಿಕರಿಸುವ ಸಂಶೋಧಕರಿಗೆ ಒತ್ತು ನೀಡಲಾಗುವುದು. ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗಾಗಿ 100 ಕೋಟಿ ಆವಿಷ್ಕಾರ ನಿಧಿ ರಚಿಸಲು ಉದ್ದೇಶಿಸಲಾಗಿದೆ.
ಇನ್ನು ಬೆಂಗಳೂರಿನ ಕ್ಲಸ್ಟರ್ ಆಚೆಗೆ ನ್ಯಾನೋ ಜೆಸಿಸಿಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಸೂಕ್ತ ಬಲ ಮತ್ತ ಬೆಂಬಲವನ್ನು ನೀಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಬೆಂಗಳೂರು ಆಚೆಗೆ ಸಂಸ್ಥೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಕರಡು ಪ್ರತಿಯಲ್ಲಿ ತಿಳಿಸಿಲಾಗಿದೆ. ಅದರಂತೆ ಬಾಡಿಗೆ, ಪೇಟೆಂಟ್, ವಿದ್ಯುತ್, ತೆರಿಗೆಯ ಮೇಲೆ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. ಆದರೆ ಕಂಪನಿಗಳು ಎಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತವೇ ಎಂಬುದರ ಮೇಲೆ ಈ ಅಂಶಗಳು ನಿರ್ಧಾರವಾಗಲಿವೆ.


Click it and Unblock the Notifications