ಸೋಮವಾರದಿಂದ (ಜುಲೈ 3) ಕರ್ನಾಟಕ ರಾಜ್ಯದ ಬಜೆಟ್ ಅಧಿವೇಶನವು ಆರಂಭವಾಗಲಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಈ ಆಡಳಿತಾವಧಿಯ ಮೊದಲ ಬಜೆಟ್ ಅಧಿವೇಶದ ಇದಾಗಿದೆ. ಅಧಿಕಾರಕ್ಕೆ ಬಂದ ಒಂದುವರೆ ತಿಂಗಳುಗಳ ಬಳಿಕ ಬಜೆಟ್ ಅಧಿವೇಶನ ನಡೆಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯ ಜುಲೈ 7ರಂದು ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಮಂಡನೆ ಸಿದ್ಧರಾಮಯ್ಯ ಅವರ 14ನೇ ಬಜೆಟ್ ಮಂಡನೆಯಾಗಲಿದೆ.
ಕರ್ನಾಟಕ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಸೋಮವಾರ ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೂಲಕ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ. ಕರ್ನಾಟಕ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರವು ಘೋಷಿಸಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಾಯಿದೆ, 2022 ಎಂಬ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸುವ ಸಾಧ್ಯತೆಯಿದೆ. ಈ ನಡುವೆ ಜನಸಾಮಾನ್ಯರ ನಿರೀಕ್ಷೆಗಳೇನು, ರೈತರ ನಿರೀಕ್ಷೆಗಳೇನು ಎಂದು ತಿಳಿಯೋಣ ಮುಂದೆ ಓದಿ.....

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು
ಕರ್ನಾಟಕದ ಸಿದ್ಧರಾಮಯ್ಯ ಸರ್ಕಾರವು ಪ್ರಮುಖವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಚುನಾವಣೆಗೂ ಮುನ್ನ ಘೋಷಿಸಿದ್ದು, ಅದರ ಅನುಷ್ಠಾನವಾಗಲಿದೆ. ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಭಾರೀ ಚರ್ಚೆ ನಡೆಯುವ ನಿರೀಕ್ಷೆಯಿದೆ. ಗೃಹ ಜ್ಯೋತಿ (ಮನೆಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದು), ಗೃಹ ಲಕ್ಷ್ಮಿ (ಬಿಪಿಎಲ್/ಎಪಿಎಲ್ ಪಡಿತರ ಚೀಟಿ ಹೊಂದಿರುವ ಮಹಿಳಾ ಮುಖ್ಯಸ್ಥರಿಗೆ 2,000 ರೂಪಾಯಿ ಭರವಸೆ) ಎರಡು ಗ್ಯಾರಂಟಿಗಳಾಗಿದೆ.
ಅನ್ನ ಭಾಗ್ಯ ( ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ), ಯುವ ನಿಧಿ (ಈ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ನಿರುದ್ಯೋಗಿ ಪದವೀಧರರಿಗೆ 3,000 ರೂಪಾಯಿ ಭತ್ಯೆ), ಮತ್ತು ಶಕ್ತಿ ಕರ್ನಾಟಕದಾದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ ನೀಡುವ ಯೋಜನೆಗಳಾಗಿದೆ. ಈಗಾಗಲೇ ಶಕ್ತಿ ಯೋಜನೆಯು ಜಾರಿಗೆ ಬಂದಿದೆ.
ಇನ್ನುಳಿದಂತೆ ಕೆಲವು ಯೋಜನೆಗಳು ಜುಲೈ 1ರಿಂದ ಜಾರಿಯಾಗಲಿದೆ. ಈ ಯೋಜನೆಗಳಿಗೆ ಬಜೆಟ್ ನಿಧಿಯನ್ನು ಸರ್ಕಾರ ಘೋಷಣೆ ಮಾಡುವ ನಿರೀಕ್ಷೆಯಿದೆ. 3.35 ಲಕ್ಷ ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ರಾಜ್ಯವು ಈ ಐದು ಭರವಸೆಗಳಿಗೆ 60,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಖರ್ಚು ಮಾಡಲಿದೆ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಂದಾಜು ಮಾಡಿದ್ದಾರೆ.
ಬಜೆಟ್ ನಿರೀಕ್ಷೆಗಳು
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪ್ರಮುಖವಾಗಿ ಬಿಜೆಪಿ ಸರ್ಕಾರವು ಘೋಷಿಸಿದ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಾಯಿದೆ, 2022 ಎಂಬ ಮತಾಂತರ ವಿರೋಧಿ ಕಾನೂನನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡನೆ ಮಾಡಬಹುದು. ಇನ್ನು ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆಯನ್ನು ರದ್ದುಗೊಳಿಸುವ ಮಸೂದೆಯನ್ನು ಕೂಡಾ ಸರ್ಕಾರ ಮಾಡುವ ನಿರೀಕ್ಷೆಯಿದೆ. ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಕಾಯಿದೆ, 2020 ಗೆ ಸಂಬಂಧಿಸಿ ತಿದ್ದುಪಡಿ ಮಾಡುವ ನಿರೀಕ್ಷೆಯೂ ಇದೆ.
ಕರ್ನಾಟಕ ರೈತರ ಬೇಡಿಕೆಗಳು
ರಾಜ್ಯದ ರೈತರುಗಳು ಸರ್ಕಾರದ ಮುಂದೆ ಬಜೆಟ್ ಮಂಡನೆಗೂ ಮುನ್ನ ಹಲವಾರು ಬೇಡಿಕೆಗಳನ್ನು ಇರಿಸಿದೆ. ಅದರಲ್ಲಿ ಪ್ರಮುಖವಾಗಿ ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ಅಕ್ಕಿ, ರಾಗಿ, ಜೋಳ, ಸಿರಿಧಾನ್ಯಗಳನ್ನು ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಬೆಳೆ ನಿರ್ಧಾರ ಮಾಡಿ, ಖರೀದಿಸಬೇಕು ಎಂಬುವುದಾಗಿದೆ. ಕೃಷಿ ಉತ್ಪನ್ನಗಳ ಮೇಲೆ ರಸಗೊಬ್ಬರ, ಕೀಟನಾಶಕ, ಹನಿ ನೀರಾವರಿ ಉಪಕರಣಗಳ ಮೇಲೆ ವಿಧಿಸಿರುವ ಜಿಎಸ್‌ಟಿ ರದ್ದುಗೊಳಿಸಬೇಕು ಎಂಬುವುದು ರೈತರ ಬೇಡಿಕೆಯಾಗಿದೆ.
ಕೃಷಿ ರೈತರ ಸಾಲ ನೀತಿ ಬದಲಾವಣೆ ಮಾಡಬೇಕು. ಕೃಷಿ ಭೂಮಿ ಮೌಲ್ಯದ ಶೇಕಡ 75 ರಷ್ಟು ಸಾಲ ನೀಡಬಹುದು. ಅದಕ್ಕೆ ಸರಿಯಾದ ನೀತಿ ರೂಪಿಸಿ ಕೃಷಿ ಸಾಲ ಸಿಬಿಲ್ ನೀತಿ ಕೈಬಿಡಬೇಕು. ಪ್ರತಿಯೊಂದು ರೈತ ಕುಟುಂಬಕ್ಕೂ ಕೃಷಿ ಕಾರ್ಮಿಕರಿಗೂ ತೆಲಂಗಾಣ ಮಾದರಿಯಲ್ಲಿ 5 ಲಕ್ಷ ರೂಪಾಯಿಗಳ ಜೀವವಿಮೆ ಯೋಜನೆ ಜಾರಿಗೆ ತರಬೇಕು ಎಂಬ ಮೊದಲಾದ ಬೇಡಿಕೆಗಳು ರೈತರದ್ದಾಗಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications