ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈಗಾಗಲೇ ಚುನಾವಣೆಗೂ ಮುನ್ನ ಕಾಂಗ್ರೆಸ್ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಲಾಗಿದೆ, ಅದಕ್ಕೆ ಅನುದಾನವನ್ನು ಕೂಡಾ ಹಂಚಿಕೆ ಮಾಡಲಾಗಿದೆ.
ಈಗ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಹೊಸದಾಗಿ ಮತ್ತೊಂದು ಯೋಜನೆಯನ್ನು ಘೋಷಣೆ ಮಾಡಿದೆ. ಈ ಹೊಸ ಸಾಮಾಜಿಕ ಭದ್ರತಾ ಯೋಜನೆಯೇ ಅನ್ನ ಸುವಿಧ ಯೋಜನೆಯಾಗಿದೆ. ಈ ಯೋಜನೆ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

ಏನಿದು ಅನ್ನ ಸುವಿಧ ಯೋಜನೆ, ಯಾರು ಅರ್ಹರು?
80 ವರ್ಷ ಮತ್ತು ಮೇಲ್ಪಟ್ಟ ಫಲಾನುಭವಿಗಳಿಗೆ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರವು ಈ ಯೋಜನೆಯನ್ನು ಆರಂಭ ಮಾಡಿದೆ. 'ಅನ್ನ ಸುವಿಧ' ಯೋಜನೆ ಮೂಲಕ ವಯಸ್ಸಾದವರಿಗೆ ಶೀಘ್ರದಲ್ಲೇ ಅವರ ಮನೆ ಬಾಗಿಲಿಗೆ ಅನ್ನ ಭಾಗ್ಯದ ಅಡಿಯಲ್ಲಿ ಅಕ್ಕಿ ವಿತರಣೆಯನ್ನು ಮಾಡಲಾಗುತ್ತದೆ.
"ಈಗ 90 ವರ್ಷ ಮೇಲ್ಪಟ್ಟ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳಿಗೆ ತಲುಪಲು ಸಾಧ್ಯವಾಗದೆ ಈ ಯೋಜನೆಯ ಅಕ್ಕಿಯಿಂದ ವಂಚಿತರಾಗದಂತೆ ಮನೆ ಬಾಗಿಲಿಗೆ ಅಕ್ಕಿಯನ್ನು ತಲುಪಿಸಲು ನಾವು ಮುಂದಾಗಿದ್ದೇವೆ. ಅಗತ್ಯವಿದ್ದರೆ, ದೈಹಿಕ ವಿಕಲಚೇತನರಂತಹ ಇತರ ಫಲಾನುಭವಿಗಳಿಗೂ ಈ ಯೋಜನೆ ವಿಸ್ತರಿಸಲಾಗುತ್ತದೆ," ಎಂದು ಈ ಹಿಂದೆ ಯೋಜನೆ ಬಗ್ಗೆ ಮಾಹಿತಿ ನೀಡುತ್ತಾ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಪಡಿತರವನ್ನು ಮನೆಗೆ ತಲುಪಿಸಲು ಬಯಸುವವರು ಸೌಲಭ್ಯವನ್ನು ಪಡೆದು ಆನ್‌ಲೈನ್‌ನಲ್ಲಿ ನೋಂದಾಯಿಸಬಹುದಾಗಿದೆ. ಡೇಟಾ ಪ್ರಕಾರ ಸುಮಾರು 80,000 ವೃದ್ಧ ಫಲಾನುಭವಿಗಳು ಸೌಲಭ್ಯಕ್ಕೆ ಅರ್ಹರಾಗಿದ್ದಾರೆ ಎಂದು ಈ ಹಿಂದೆ ಸಚಿವರು ಹೇಳಿದ್ದಾರೆ.
ಅನ್ನ ಭಾಗ್ಯ ಯೋಜನೆ
ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಒಟ್ಟಾಗಿ ಹತ್ತು ಕೆಜಿ ಅಕ್ಕಿಯನ್ನು ನೀಡುವ ಭರವಸೆಯನ್ನು ನೀಡಲಾಗಿತ್ತು. ಆದರೆ ಅಕ್ಕಿ ಕೊರತೆ ಕಾರಣದಿಂದಾಗಿ ಐದು ಕೆಜಿ ಅಕ್ಕಿ ಮತ್ತು ಉಳಿದ ಐದು ಕೆಜಿ ಅಕ್ಕಿಯ ಮೊತ್ತವನ್ನು ನೀಡಲಾಗುತ್ತಿದೆ. ಪ್ರತಿ ಕೆಜಿಗೆ 34 ರೂಪಾಯಿಗಳ ನಗದು ಪಾವತಿಸಲಾಗುತ್ತಿದೆ.
ಉಚಿತ ಅಕ್ಕಿ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಗೆ, ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ, ಅಂತ್ಯೋದಯ ಕುಟುಂಬದ ಸದಸ್ಯರಿಗೆ 34 ರೂಪಾಯಿಯಂತೆ ನೀಡಲಾಗುತ್ತದೆ. ಆದರೆ 80 ವರ್ಷ ಮತ್ತು ಮೇಲ್ಪಟ್ಟ ಫಲಾನುಭವಿಗಳಿಗೆ ಈ ಅನ್ನ ಸುವಿಧ ಯೋಜನೆ ಮೂಲಕ ಅಕ್ಕಿಯನ್ನು ಮನೆಗೆ ಕಳುಹಿಸಲಾಗುತ್ತದೆ.


Click it and Unblock the Notifications