ಕರ್ನಾಟಕ ಮುಖ್ಯಮಂತ್ರಿ, ಹಣಕಾಸು ಖಾತೆಯನ್ನು ಹೊಂದಿರುವ ಸಿದ್ಧರಾಮಯ್ಯ ಅವರು ತನ್ನ 15ನೇ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಬಜೆಟ್‌ನಲ್ಲಿ ಸಿಎಂ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.
2025ರ ವೇಳೆಗೆ ನಮ್ಮ ಮೆಟ್ರೋ ಜಾಲಕ್ಕೆ ಹೆಚ್ಚುವರಿಯಾಗಿ ಸುಮಾರು 44 ಕಿ.ಮೀ. ಮಾರ್ಗ ಸೇರ್ಪಡೆಯಾಗಲಿದೆ ಎಂದು 2024-25ನೇ ಸಾಲಿನ ಬಜೆಟ್ ಮಂಡನೆ ವೇಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಹಾಗೆಯೇ ಮೆಟ್ರೋ ಯೋಜನೆ ಹಂತ 2 ಹಾಗೂ 2ಎ ಯೋಜನೆಯಡಿ ಹೊರವರ್ತುಲ ರಸ್ತೆ-ವಿಮಾನ ನಿಲ್ದಾಣ ಮಾರ್ಗವು 2026ರ ಜೂನ್ ವೇಳೆಗೆ ಪೂರ್ಣವಾಗಲಿದೆ. ಮೆಟ್ರೋ ಹಂತ-3ರಲ್ಲಿ ಅಂದಾಜು 15,611 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆಗೆ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇನ್ನು ಪೆರಿಫೆರಲ್ ರಿಂಗ್ ರೋಡ್ ಅನ್ನು ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಎಂಬ ಹೊಸ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೋ
ಬೆಂಗಳೂರಿನಲ್ಲಿ ಮಾತ್ರವಲ್ಲದೆ ಬೆಂಗಳೂರು ಬಿಐಇಸಿನಿಂದ ತುಮಕೂರು ಮತ್ತು ಕೆಐಎಎಲ್‌ನಿಂದ ದೇವನಹಳ್ಳಿಗೆ ಮೆಟ್ರೋ ಜಾಲ ವಿಸ್ತರಣೆ ಬಗ್ಗೆ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಬಿಎಂಆರ್‌ಸಿಎಲ್ ಬೇಡಿಕೆ ಏನಿತ್ತು?
ಮಾಗಡಿ ರಸ್ತೆ ಮಾರ್ಗದ ಕಾರಿಡಾರ್ ಡಿಪಿಆರ್ ಶೀಘ್ರ ಸಿದ್ಧವಾಗಲಿಲ್ಲ. 2022ರ ಅಂತ್ಯದ ವೇಳೆಗೆ ನಮ್ಮ ಮೆಟ್ರೋ ಈ ಹಂತದ ಸಮಗ್ರ ಯೋಜನಾ ವರದಿಯನ್ನು ಕಳುಹಿಸಲಾಗಿತ್ತು. 6 ಬೋಗಿ ಕೋಚ್ ಸಂಚಾರ ಸೇರಿದಂತೆ ಡಿಪಿಆರ್‌ನಲ್ಲಿ ಕೆಲವು ಅಂಶಗಳನ್ನು ಪರಿಷ್ಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಕೇಂದ್ರದ ಅನುಮೋದನೆಗೆ ಕಾಯಲಾಗುತ್ತಿದೆ.
ಬಜೆಟ್ ಬಗ್ಗೆ ನಿರೀಕ್ಷೆ ವ್ಯಕ್ತಪಡಿಸಿದ್ದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂಎಸ್ ಚನ್ನಪ್ಪಗೌಡರು, "ಡಿಪಿಆರ್‌ಗೆ ಕೇಂದ್ರ ಅನುಮೋದನೆ ನೀಡಲಿದೆ. ನಾವು ಯೋಜನೆಗೆ ಸಂಬಂಧಿಸಿದಂತೆ ಕಾಮಗಾರಿ ಪ್ರಾರಂಭಕ್ಕೆ ತಯಾರಿ ಮಾಡಬೇಕಾಗಿದೆ. ಅದಕ್ಕಾಗಿ 1000 ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಬೇಕು," ಎಂದು ತಿಳಿಸಿದರು.


Click it and Unblock the Notifications