ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು (ಫೆಬ್ರವರಿ 16) ರಂದು ವಿಧಾನಸಭೆಯಲ್ಲಿ 15ನೇ ಬಜೆಟ್ ಮಂಡಿಸಿದ್ದಾರೆ. ಬಜೆಟ್‌ನಲ್ಲಿ ಹಲವಾರು ಘೋಷಣೆಗಳನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಕೆಲವು ಯೋಜನೆಗಳನ್ನು ಮತ್ತೆ ಆರಂಭಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.
ತೆರಿಗೆ ವಿಚಾರಕ್ಕೆ ಬಂದಾಗ ಬಜೆಟ್ ಮಂಡನೆಯ ಆರಂಭದಲ್ಲಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಜಿಎಸ್‌ಟಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನನ್ನ ತೆರಿಗೆ ನನ್ನ ಹಕ್ಕು ಎಂಬ ಅಭಿಯಾನವನ್ನು ಈಗಾಗಲೇ ಆರಂಭ ಮಾಡಿದ್ದಾರೆ. ಬಜೆಟ್‌ನಲ್ಲಿರುವ ತೆರಿಗೆ ಪ್ರಸ್ತಾಪಗಳ ಬಗ್ಗೆ ವಿವರ ಇಲ್ಲಿದೆ ಮುಂದೆ ಓದಿ......

ವಾಣಿಜ್ಯ ತೆರಿಗೆಗಳು
1. 2023-24ರಲ್ಲಿ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಒಟ್ಟು ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. ಜನವರಿ ತಿಂಗಳ ಅಂತ್ಯದವರೆಗು 58,180 ಕೋಟಿ ರೂ.ಗಳ ಎಸ್‌ಜಿಎಸ್‌ಟಿ ತೆರಿಗೆ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ.14 ರಷ್ಟು ಬೆಳವಣಿಗೆಯಾಗಿರುತ್ತದೆ.
2. ಪ್ರಸಕ್ತ ವರ್ಷದಲ್ಲಿ ಜಿ.ಎಸ್.ಟಿ ಮೇಲ್ಮನವಿ ನ್ಯಾಯಮಂಡಳಿಯ ಎರಡು ರಾಜ್ಯ ಪೀಠಗಳನ್ನು ರಚಿಸಲಾಗುವುದು ಮತ್ತು ಕಾರ್ಯಗತಗೊಳಿಸಲಾಗುವುದು. ಇದು ತೆರಿಗೆ ವಿವಾದಗಳನ್ನು ಸ್ಥಳೀಯವಾಗಿ ಬಗೆಹರಿಸಲು ಸಹಾಯವಾಗುತ್ತದೆ.
3. ಇಲಾಖೆಯು, ಗ್ರಾಹಕ ಸಂವೇದಿ ಜಿ.ಎಸ್.ಟಿ ಡೇಟಾಬೇಸ್ ಮ್ಯಾನೇಜ್‌ಮೆಂಟ್ ಮತ್ತು ಕೃತಕ ಬುದ್ಧಿಮತ್ತೆ ಚಾಲಿತ ವಿಶ್ಲೇಷಣಾತ್ಮಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಮಾಹಿತಿಯ ನಿಖರತೆ ಮತ್ತು ಮುನ್ಸೂಚಕ ವಿಶ್ಲೇಷಣೆಯು ರಾಜಸ್ವ ಕ್ರೋಢೀಕರಣಕ್ಕೆ ಸಹಕಾರಿಯಾಗಲಿದೆ.
4. ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ತೆರಿಗೆ ಕಾನೂನು ಮತ್ತು ತಾಂತ್ರಿಕ ಪರಿಣಿತಿಯನ್ನು ಹೊಂದಲು ಹಾಗೂ ಅವರಲ್ಲಿ ವಿಶ್ಲೇಷಣಾತ್ಮಕ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಲು ಇ-ತರಬೇತಿ ನೀಡಲಾಗುವುದು. ಇದು ತೆರಿಗೆ ರಾಜಸ್ವ ಸೃಜನೆಗೆ ಹೊಸ ಮಾರ್ಗಗಳನ್ನು ಅನ್ವೇಷಿಸಲು ಮತ್ತು ಮೋಸದ ನೋಂದಣಿಗಳನ್ನು ಪತ್ತೆಹಚ್ಚಲು ಸಹಕಾರಿಯಾಗಲಿದೆ.
5. 2024-25ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆಯ ಗುರಿಯನ್ನು 1,10,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ
1. ಸ್ಥಿರಾಸ್ತಿಗಳ ಮಾರ್ಗಸೂಚಿ ದರಗಳನ್ನು ನಮ್ಮ ಸರ್ಕಾರವು 2023-24ರಲ್ಲಿ ಪರಿಷ್ಕರಣೆ ಮಾಡಿದ್ದು, ಪ್ರಸಕ್ತ ಆರ್ಥಿಕ ವರ್ಷದ ಜನವರಿ ತಿಂಗಳ ಅಂತ್ಯದವರೆಗೆ 15,692 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯಾಗಿದ್ದು, ಶೇ.10ರಷ್ಟು ಬೆಳವಣಿಗೆ ಹೊಂದಿದೆ.
2. 2024-25ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 26,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.
ಅಬಕಾರಿ
1. ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ ಐಎಂಎಲ್ ಹಾಗೂ ಬಿಯರ್‌ನ ಸ್ಲಾಬ್‌ಗಳನ್ನು ಪರಿಷ್ಕರಿಸಲಾಗುವುದು.
2. ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳನ್ನು ಡಿಜಿಟಲೀಕರಣಗೊಳಿಸಲಾಗುವುದು. ಇಲಾಖೆಯು ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿಯನ್ನು ನಿಗದಿಪಡಿಸಲಾಗುವುದು ಹಾಗೂ ಸ್ವಯಂಚಾಲಿತ ಅನುಮೋದನೆಗೂ ಅವಕಾಶ ಕಲ್ಪಿಸಲಾಗುವುದು.
3. 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ, ಅಬಕಾರಿ ತೆರಿಗೆಯಿಂದ 28,181 ಕೋಟಿ ರೂ.ಗಳು ಸ್ವೀಕೃತವಾಗಿರುತ್ತದೆ. 2024-25ನೇ ಸಾಲಿಗೆ 38,525 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿಯನ್ನು ನಿಗದಿಪಡಿಸಲಾಗಿದೆ.


Click it and Unblock the Notifications