ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂಎಲ್) ಆಡಳಿತ ಮಂಡಳಿಯನ್ನು ಸೋಮವಾರ (ಡಿಸೆಂಬರ್ 7, 2020) ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ಆಗಲಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿನ 432 ಎಕರೆ ಪ್ರದೇಶದಲ್ಲಿ ಒಂದು ತಿಂಗಳಿಂದ ನಡೆಯುತ್ತಿರುವ ಕಾರ್ಮಿಕರ ಧರಣಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಈ ಭೇಟಿ ನಡೆಯಲಿದೆ.
ಟಿಕೆಎಂ ಉಪಾಧ್ಯಕ್ಷ ವಿಕ್ರಂ ಕಿರ್ಲೋಸ್ಕರ್ ಈ ಮಾತುಕತೆಯ ನೇತೃತ್ವ ವಹಿಸಲಿದ್ದಾರೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರು ಈ ಸಭೆಯಲ್ಲಿ ಭಾಗಿ ಆಗಲಿದ್ದಾರೆ.
"ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೇ ಮಧ್ಯಪ್ರವೇಶ ಮಾಡಿರುವುದರಿಂದ ಸ್ಪಷ್ಟತೆ ದೊರೆಯಲಿದೆ ಎಂಬ ಆತ್ಮವಿಶ್ವಾದ ನಮಗೆ ಇದೆ," ಎಂದು ಸಚಿವ ಶಿವರಾಮ್ ಹೆಬ್ಬಾರ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಟಿಕೆಎಂಎಲ್ ಅಧಿಕಾರಿಯೊಬ್ಬರು ಮಾತನಾಡಿ, ಮುಖ್ಯಮಂತ್ರಿಗಳಿಗೆ ಧರಣಿ ಬಗ್ಗೆ ವಿವರಣೆ ನೀಡಲಾಗುವುದು ಮತ್ತು ಕಾರ್ಖಾನೆಯಲ್ಲಿ ಮತ್ತೆ ಸಹಜ ಸ್ಥಿತಿಗೆ ತರಲು ತೆಗೆದುಕೊಳ್ಳಲಿರುವ ಕಾನೂನು ಕ್ರಮಗಳ ಬಗ್ಗೆ ಹಾಗೂ ಇತ್ತೀಚಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದಿದ್ದಾರೆ.
ಮುಖ್ಯಮಂತ್ರಿಗಳ ಮಧ್ಯಪ್ರವೇಶದ ನಂತರವೂ ಸಮಸ್ಯೆ ನಿವಾರಣೆ ಆಗದಿದ್ದಲ್ಲಿ, ಧರಣಿ ಮುಂದುವರಿದಲ್ಲಿ ಕಾರ್ಮಿಕ ಒಕ್ಕೂಟದ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡುವ ಸಾಧ್ಯತೆ ಇದೆ. ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಒಕ್ಕೂಟಕ್ಕೆ ಡಿಸೆಂಬರ್ 7ನೇ ತಾರೀಕು ಗಡುವು ನೀಡಿ, ಸಮಸ್ಯೆ ಬಗೆಹರಿಸಿಕೊಳ್ಳಲು ತಿಳಿಸಲಾಗಿದೆ. ಇಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲು ಸಲಹೆ ನೀಡಲಾಗಿದೆ.
ಲಾಕ್ ಔಟ್ ಘೋಷಿಸುವಂತಿಲ್ಲ ಎಂದು ಆಡಳಿತ ಮಂಡಳಿಗೆ ಸರ್ಕಾರ ತಿಳಿಸಿದ್ದರೆ, ಅದೇ ರೀತಿ ಉತ್ಪಾದನಾ ಚಟುವಟಿಕೆಗಳಿಗೆ ತಡೆ ಒಡ್ಡುವಂತಿಲ್ಲ ಕಾರ್ಮಿಕರಿಗೆ ತಿಳಿಸಲಾಗಿದೆ. ಸರ್ಕಾರದ ಆದೇಶದ ನಂತರ, ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗುವಂತೆ ಕಂಪೆನಿ ತಿಳಿಸಿದೆ. ಒಂದು ವೇಳೆ ಆದೇಶ ಪಾಲಿಸದಿದ್ದಲ್ಲಿ ಕೆಲಸದಿಂದ ತೆಗೆಯುವ ಬಗ್ಗೆ ಎಚ್ಚರಿಸಲಾಗಿದೆ.
ನಲವತ್ತು ಉದ್ಯೋಗಿಗಳ ಅಮಾನತು ತೆರವು ಹಾಗೂ ಇತರ ಪರಿಹಾರಗಳಿಗಾಗಿ ಆಗ್ರಹಿಸಿ ಟಿಕೆಎಂಎಲ್ ಕಾರ್ಮಿಕ ಒಕ್ಕೂಟವು ಧರಣಿ ನಡೆಸುತ್ತಿದೆ.


Click it and Unblock the Notifications