ಬೆಂಗಳೂರು: ಕುರುಕಲು ತಿಂಡಿಗಳು ಅಂದ್ರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಚಿಕ್ಕವರಿಂದ ಹಿಡಿದು ಹಿರಿಯರವರೆಗೂ ಇದು ಬಹುತೇಕರಿಗೆ ಅಚ್ಚುಮೆಚ್ಚು. ಆದರೆ ಬೀದಿ ಬದಿ ಮಾರುವ ಮತ್ತು ಹೊರ ರಾಜ್ಯದಿಂದ ಆಮದು ಆಗುವ ಆಹಾರ ಪದಾರ್ಥಗಳನ್ನು ತಿನ್ನುವವರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಬಿಗ್ ಶಾಕ್ ನೀಡಿದೆ.
ಹೌದು, ಆಹಾರ ಸುರಕ್ಷೆ ಹಾಗೂ ಗುಣಮಟ್ಟದ ಇಲಾಖೆಯು ಕೇರಳದಲ್ಲಿ ತಯಾರಿಸಿ, ಕರ್ನಾಟಕದ ಗಡಿ ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದ 90 ಬಗೆಯ ಕುರುಕಲು ತಿಂಡಿಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ 31 ಮಾದರಿಗಳು ಸೇವಿಸಲು ಅಸುರಕ್ಷಿತ ಎನ್ನುವುದು ದೃಢಪಡಿಸಿದೆ.

ಈಗಾಗಲೆ ನಮ್ಮ ರಾಜ್ಯದಲ್ಲಿ ಗೋಬಿ, ಪಾನಿಪುರಿ ಸೇರಿದಂತೆ ಅನೇಕ ತಿನಿಸುಗಳಿಗೆ ಬಳಸುವ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ ಎಂದು ತಿಳಿಸಿದೆ. ಅಂದ್ರೆ ಇದೀಗ, ಕೇರಳದಿಂದ ಆಮದು ಆಗುವ ಖಾರಾ ಮಿಕ್ಚರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈ ಫ್ರೂಟ್ಸ್ ಸೇರಿದಂತೆ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಕೆ ಮಾಡಿದ್ರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಇಲಾಖೆ ತಿಂಡಿ ಪ್ರಿಯರಿಗೆ ಶಾಕ್ ಕೊಟ್ಟಿದೆ.
ಕಳೆದ ಮೂರು ತಿಂಗಳುಗಳಲ್ಲಿ ಕೇರಳದಿಂದ ರಾಜ್ಯದ ಗಡಿ ಜಿಲ್ಲೆಯಾದ ಕೊಡಗು ಜಿಲ್ಲೆಯಲ್ಲಿ ಮಾರಾಟವಾಗುತ್ತಿದ್ದ ಹಲವು ವಿಧದ ಆಹಾರ ಪದಾರ್ಥಗಳ 90 ಮಾದರಿಗಳನ್ನು ಸಂಗ್ರಹಿಸಿ ಇಲಾಖೆ ಪರಿಶೀಲನೆ ನಡೆಸಿದೆ. ಅವುಗಳಲ್ಲಿ 31 ಮಾದರಿಗಳಿಗೆ Alura Red, Carmoisine, Tartrazine, Sunset Yellow ಸೇರಿದಂತೆ ಕೃತಕ ಬಣ್ಣಗಳನ್ನು ಬಳಸಿರುವುದು ಖಚಿವಾಗಿದೆ. ಅಲ್ಲದೇ, ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲದೆ ಇರುವುದು, ತಯಾರಿಕಾ ದಿನಾಂಕವನ್ನು ನಮೂದು ನೊಂದಣಿ/ಪರವಾನಿಗೆ ಸಂಖ್ಯೆ ಮುದ್ರಿತವಾಗಿಲ್ಲ ಅದರೂ ಕೂಡ ಮಾರಾಟ ಮಾಡುತ್ತಿದ್ದಾರೆ.
ಸಿಹಿ ತಿಂಡಿಗಳಲ್ಲಿ ಕೃತಕ ಬಣ್ಣ ಬಳಕೆ
151 ಸಿಹಿ ತಿಂಡಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಯಿತು. ಇದರಲ್ಲಿ 143 ಮಾದರಿಗಳು ಸುರಕ್ಷಿತ ಮತ್ತು 09 ಮಾದರಿಗಳಲ್ಲಿ ಕೃತಕ ಬಣ್ಣಗಳ ಬಳಕೆ ಕಂಡುಬಂದಿದ್ದು ಅಸುರಕ್ಷಿತ ಎಂದು ವರದಿ ನೀಡಿದೆ.
ಈ ಎಲ್ಲ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ, ಈ ಪದಾರ್ಥಗಳನ್ನು ತಯಾರಿಸುವ ತಯಾರಿಕ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗಣಮಟ್ಟ ಇಲಾಖೆ ಆಯುಕ್ತರಿಗೆ ಮತ್ತು ಕೇರಳ ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಇತರ ಜಿಲ್ಲೆಗಳಿಗೂ ಸರಬರಾಜು ಶಂಕೆ
ಕೊಡಗು ಮಾತ್ರವಲ್ಲದೆ ಕಾಸರಗೋಡು, ದಕ್ಷಿಣ ಕನ್ನಡ, ಬೆಂಗಳೂರು ಸೇರಿ ಇತರ ಜಿಲ್ಲೆಗಳಿಗೂ ಕೇರಳದ ಈ ಚಿಪ್ಸ್ ಹಾಗೂ ಇತರ ಕುರುಕಲು ತಿಂಡಿ ಸರಬರಾಜು ಆಗುತ್ತಿದೆ. ಇವುಗಳ ಪರೀಕ್ಷೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗೂ ಅಪಾಯಕಾರಿ ಪದಾರ್ಥಗಳ ಉತ್ಪಾದನಾ ಘಟಕಗಳ ಮೇಲೆ ಕ್ರಮ ಕೈಗೊಳ್ಳಲು ಇಲಾಖೆ ನಿರ್ಧರಿಸಿದೆ.


Click it and Unblock the Notifications