ಕರ್ನಾಟಕದಲ್ಲಿ ಕಾಂಗ್ರೆಸ್ ಚುನಾವಣೆಗೂ ಮುನ್ನ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಹೇಳಿತ್ತು. ಅದರಂತೆಯೇ ಅಧಿಕಾರಕ್ಕೆ ಬಂದ ಬಳಿಕ ಐದರ ಪೈಕಿ ನಾಲ್ಕು ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ. ಇದು ಮುಖ್ಯವಾಗಿ ಮಹಿಳೆಯರಿಗೆ ಸಹಾಯಕವಾದ ಯೋಜನೆಯಾಗಿದೆ.
ಸರ್ಕಾರವು ಅನ್ನ ಭಾಗ್ಯ, ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ಪ್ರಸ್ತಾಪ ಮಾಡಿದ್ದು, ಈ ಪೈಕಿ ಯುವನಿಧಿ ಹೊರತುಪಡಿಸಿ ಉಳಿದ ಎಲ್ಲ ಯೋಜನೆಗಳು ಜಾರಿಗೆ ಬಂದಿದೆ. ಮೊದಲಾಗಿ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಯಾಗಿದ್ದು, ಯಶಸ್ವಿಯಾಗಿ ಯೋಜನೆ ಜಾರಿಯಲ್ಲಿದೆ.

ಅದಾದ ಬಳಿಕ ಮಹಿಳೆಯರಿಗೆ ಸಹಾಯ ಮಾಡುವಂತಹ ಅನ್ನ ಭಾಗ್ಯ, ಗೃಹ ಲಕ್ಷ್ಮೀ ಯೋಜನೆ ಕೂಡಾ ಜಾರಿಗೆ ಬಂದಿದೆ. ಅನ್ನ ಭಾಗ್ಯದಡಿ ರೇಷನ್ ಜೊತೆಗೆ ಹಣವು ಲಭ್ಯವಾಗುತ್ತಿದೆ. ಇನ್ನು ಗೃಹ ಲಕ್ಷ್ಮೀ ಯೋಜನೆಯಲ್ಲಿ ಮಾಸಿಕವಾಗಿ ಎರಡು ಸಾವಿರ ರೂಪಾಯಿ ಮಹಿಳೆಯರಿಗೆ ಲಭ್ಯವಾಗುತ್ತಿದೆ. ಒಟ್ಟಾಗಿ ಐದರಲ್ಲಿ ಮೂರು ಯೋಜನೆ ಮಹಿಳೆಯರ ಮೇಲೆ ಕೇಂದ್ರಿಕೃತವಾಗಿರುವುದು ಆಗಿದೆ.
ಮಹಿಳಾ ಉದ್ಯಮಿಗಳಿಗೆ ಉತ್ತೇಜನದ ಪ್ಲ್ಯಾನ್
ಇವೆಲ್ಲವುದರ ನಡುವೆ ಈ ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮಹಿಳೆಯರ ಮತ ಬ್ಯಾಂಕ್ ಇನ್ನಷ್ಟು ಹೆಚ್ಚಳವಾಗುತ್ತಾ ಸಾಗುತ್ತಿರುವಂತೆ ಕಾಣುತ್ತಿದೆ. ಈ ಗ್ಯಾರಂಟಿ ಯೋಜನೆಗಳನ್ನು ಹೊರತುಪಡಿಸಿ ಈಗ ಕರ್ನಾಟಕ ಸರ್ಕಾರವು ಇದೀಗ ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡುವ ಪ್ಲ್ಯಾನ್ ಅನ್ನು ಮಾಡಿಕೊಂಡಿದೆ.
ಬೆಂಗಳೂರಿನಲ್ಲಿ ಮಹಿಳಾ ಉದ್ಯಮಿಗಳ ಮಹಾಒಕ್ಕೂಟವಾದ 'ಉಬುಂಟು' ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ಮಹಿಳಾ ಉದ್ಯಮಿಗಳ ಸಮಾವೇಶದಲ್ಲಿ ಕೈಗಾರಿಕೆ ಸಚಿವರು ಮಾತನಾಡಿದರು. ಈ ಸಂದರ್ಭದಲ್ಲಿ ಮಹಿಳಾ ಉದ್ಯಮಿಗಳಿಗೆ ಸರ್ಕಾರದ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದರು.
ಮಹಿಳಾ ಉದ್ಯಮಿಗಳಿಗೆ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಲಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಲಿ ಸೇರಿದಂತೆ ಹಲವು ಸಾಂಸ್ಥಿಕ ವ್ಯವಸ್ಥೆಗಳ ಮೂಲಕ ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿದೆ. ಮಹಿಳಾ ಉದ್ಯಮಿಗಳು ಬೆಂಗಳೂರಿನ ಆಚೆಗೂ ಉದ್ಯಮಗಳನ್ನು ಸ್ಥಾಪಿಸಲು ಮನಸ್ಸು ಮಾಡಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮನವಿ ಮಾಡಿದ್ದಾರೆ.
ಸುಲಭ ಸಾಲ, ಸರ್ಕಾರದಿಂದ ಬಡ್ಡಿ ಪಾವತಿ
ಮಹಿಳೆಯರು ಕೈಗಾರಿಕೆಗಳನ್ನು ಸ್ಥಾಪಿಸಲು ಮನಸು ಮಾಡಿದರೆ, ಕೆಎಸ್‌ಎಫ್‌ಸಿ ಮೂಲಕ ಶೇಕಡ 14 ರಷ್ಟು ಬಡ್ಡಿಯಲ್ಲಿ ಗರಿಷ್ಠ 2 ಕೋಟಿ ರೂಪಾಯಿವರೆಗೂ ಸುಲಭ ಸಾಲವನ್ನು ನೀಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಈ ಸಾಲಕ್ಕೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಐದು ವರ್ಷದವರೆಗೆ ಶೇಕಡ 10ರಷ್ಟು ಬಡ್ಡಿಯನ್ನು ತಾನೇ ಪಾವತಿ ಮಾಡುತ್ತದೆ. ಇದರ ಪ್ರಯೋಜನವನ್ನು ಮಹಿಳೆಯರು ಪಡೆಯಬೇಕು ಎಂದರು.
ಮಹಿಳಾ ಉದ್ಯಮಿಗಳಿಗೆ ಮೀಸಲಾತಿ, ಎಷ್ಟು?
ರಾಜ್ಯದ ಕೈಗಾರಿಕಾ ನೀತಿಯಲ್ಲಿ ಕೆಐಎಡಿಬಿ ಮೂಲಕ ಉದ್ಯಮಿಗಳಿಗೆ ಹಂಚುತ್ತಿರುವ ನಿವೇಶನದಲ್ಲಿ ಮಹಿಳಾ ಉದ್ಯಮಿಗಳಿಗೆ ಶೇಕಡ 5ರಷ್ಟು ಮೀಸಲಾತಿ ಇದೆ. ಜೊತೆಗೆ ಕೆಎಸ್‌ಎಸ್‌ಐಡಿಸಿ ಜಮೀನು ಹಂಚಿಕೆಯಲ್ಲಿಯೂ ಹೀಗೆ ಮಾಡಲಾಗುತ್ತದೆ. ಸಬ್ಸಿಡಿಯು ಶೇಕಡ 5 ರಷ್ಟು ಹೆಚ್ಚುವರಿ ನೀಡಲಾಗುತ್ತದೆ. ಜೊತೆಗೆ ಗರಿಷ್ಠ ನಾಲ್ಕು ವರ್ಷಗಳವರೆಗೆ ವಿದ್ಯುತ್ ಬಿಲ್ ವಿನಾಯಿತಿ ನೀಡಲಾಗುತ್ತದೆ ಎಂದು ಸಚಿವ ಎಂ ಬಿ ಪಾಟೀಲ ವಿವರಿಸಿದರು.


Click it and Unblock the Notifications