ಬೆಂಗಳೂರು, ಸೆ 12: "ಅತ್ಯುತ್ತಮ ಕೈಗಾರಿಕಾ ನೀತಿ, ಮೂಲಭೂತ ಸೌಕರ್ಯ, ಮಾನವ ಸಂವನ್ಮೂಲ, ಪರಿಸರದಿಂದಾಗಿ ಕರ್ನಾಟಕ ರಾಜ್ಯ ಭಾರತದಲ್ಲೇ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ, ಮೈಸೂರು, ಹುಬ್ಭಳ್ಳಿ, ಮಂಗಳೂರು, ಬೆಳಗಾವಿ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು ನೀಡಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ನೆದರ್ಲೆಂಡ್ ಪ್ರಧಾನ ಮಂತ್ರಿ ಮಾರ್ಕ್ ರುಟ್ಟೆ ಹಾಗೂ ಆ ದೇಶದ ಕಂಪನಿಗಳ ಪ್ರಮುಖರ ಜತೆ ಸಭೆ ನಡೆಸಿದ ಡಿ.ಕೆ. ಶಿವಕುಮಾರ್, "ಕರ್ನಾಟಕ ರಾಜ್ಯ ನೆದರ್ಲೆಂಡ್ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದು, ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸಲು ನಾವು ಬಯಸುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವವರ ಪೈಕಿ ಡಚ್ ಉದ್ಯಮಿಗಳು ಪ್ರಮುಖರಾಗಿದ್ದಾರೆ" ಎಂದು ಹೇಳಿದ್ದಾರೆ.

'ಭಾರತದಲ್ಲಿ ನೆದರ್ಲೆಂಡ್ ಉದ್ಯಮಿಗಳ ಬಂಡವಾಳ ಹೂಡಿಕೆಯಲ್ಲಿ ಕರ್ನಾಟ ರಾಜ್ಯ ಶೇ.9ರಷ್ಟು ಬಂಡವಾಳವನ್ನು ಪಡೆದಿದೆ. ರಾಜ್ಯದಲ್ಲಿ 25ಕ್ಕೂ ಹೆಚ್ಚು ಡಚ್ ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಿವೆ. ಶೆಲ್ ಹಾಗೂ ಫಿಲಿಪ್ಸ್ ಕಂಪನಿಗಳ ಜಾಗತಿಕ ಕೇಂದ್ರಗಳು ಕರ್ನಾಟಕದಲ್ಲಿವೆ'ಎಂದು ಉಪ ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.
ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸ್ನೇಹಿ ವಾತಾವರಣ
ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದು, 2022-23ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಅತಿದೊಡ್ಡ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಿದೆ. ಆ ಮೂಲಕ ದೇಶದಲ್ಲಿನ ಹೂಡಿಕೆಯಲ್ಲಿ ಶೇ.25ರಷ್ಟು ಹೂಡಿಕೆ ಕರ್ನಾಟಕ ರಾಜ್ಯದಲ್ಲಿ ಆಗಿದೆ. ರಾಜ್ಯದಲ್ಲಿ 200ಕ್ಕೂ ಹೆಚ್ಚು ನೆದರ್ಲೆಂಡ್ ಕಂಪನಿಗಳು 1 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತ ಹೂಡಿಕೆ ಮಾಡಿ ಕಾರ್ಯನಿರ್ವಹಣೆ ಮಾಡುತ್ತಿವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
"ಡಚ್ ಕಂಪನಿಗಳ ಜತೆಗಿನ ಈ ಬಾಂಧವ್ಯವನ್ನು ಮತ್ತಷ್ಟು ಸಧೃಡಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಕರ್ನಾಟಕ ಹಾಗೂ ನೆದರ್ಲೆಂಡ್ ದೇಶ ಆಹಾರ ಉತ್ಪನ್ನ, ಜೈವಿಕ ತಂತ್ರಜ್ಞಾನ, ಫಾರ್ಮಾ, ಇನ್ನೋವೇಷನ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ಅನೇಕ ವಿಚಾರಗಳಲ್ಲಿ ಸಾಮ್ಯತೆಗಳನ್ನು ಹೊಂದಿವೆ".
ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿ
"ಭಾರತದಲ್ಲಿ ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದ್ದು, 2016ರಿಂದಲೂ ಬಂಡವಾಳ ಆಕರ್ಷಿಸುವಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದೇವೆ. ದೇಶದಲ್ಲಿ ಅತಿ ಹೆಚ್ಚು ಕಾಫಿ ಬೆಳೆಯುವ ರಾಜ್ಯ ಕರ್ನಾಟಕ. ಜೈವಿಕ ತಂತ್ರಜ್ಞಾನ ಉತ್ಪನ್ನ ಹಾಗೂ ರಫ್ತಿನಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ. ಭಾರತದ ಅನ್ವೇಷಣೆ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ" ಎಂದು ಡಿಕೆಶಿ ಹೇಳಿದರು.
ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಬೆಂಗಳೂರು ವಿಶ್ವದಲ್ಲೇ ನಾಲ್ಕನೇ ಸ್ಥಾನ
"ತಂತ್ರಜ್ಞಾನ ಮತ್ತು ಆವಿಷ್ಕಾರದಲ್ಲಿ ಬೆಂಗಳೂರು ವಿಶ್ವದಲ್ಲೇ ನಾಲ್ಕನೇ ಸ್ಥಾನ ಪಡೆದಿದೆ. ನಾವು ಶೇ.63ರಷ್ಟು ನವೀಕರಿಸಬಹುದಾದ ಇಂಧನದ ಮೇಲೆ ಅವಲಂಬಿತವಾಗಿದ್ದು, ನವೀಕರಿಸಬಹುದಾದ ಇಂಧನ ವಿಚಾರದಲ್ಲಿ ಮುಂಚೂಣಿಯಲ್ಲಿದ್ದೇವೆ.
ವಿದ್ಯುತ್ ವಾಹನ, ಆವಿಷ್ಕಾರ, ವಸತಿ, 7 ಓಇಎಂ, 50ಕ್ಕೂ ಹೆಚ್ಚು ಕಾಪೋನೆಂಟ್ ಉತ್ಪಾದಕ ಹಾಗೂ 45ಕ್ಕೂ ಹೆಚ್ಚು ವಿದ್ಯುತ್ ವಾಹನಗಳ ಸ್ಟಾರ್ಟ್ ಅಪ್ ಗಳನ್ನು ಹೊಂದಿದ್ದೇವೆ. ವಿಶೇಷವಾಗಿ ಡಚ್ ಕಂಪನಿಗಳಿಗೆ ಉತ್ತಮ ಪ್ರೋತ್ಸಾಹ ನೀಡಲು ಅನೇಕ ನಿರ್ಧಾರ ಕೈಗೊಳ್ಳಲಾಗಿದೆ"ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಸಂದರ್ಭದಲ್ಲಿ ಹೇಳಿದರು.


Click it and Unblock the Notifications