ಕನಿಷ್ಠ ವೇತನ ಹೆಚ್ಚಳ: ಕರ್ನಾಟಕದ ಕಾರ್ಮಿಕರಿಗೆ..ಅಂದರೆ ಕೌಶಲ್ಯರಹಿತ, ಅರೆ-ಕೌಶಲ್ಯ, ಕೌಶಲ್ಯಪೂರ್ಣ ಹಾಗೂ ಹೆಚ್ಚಿನ ಕೌಶಲ್ಯವಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ನೀಡಿದೆ. ಅದೇನೆಂದರೆ ಕನಿಷ್ಠ ವೇತನ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಮುಂದಿನ 2 ವಾರಗಳಲ್ಲಿ ಹೊಸ ಕನಿಷ್ಠ ವೇತನದ ಬಗ್ಗೆ ಅಧಿಕೃತ ಅಧಿಸೂಚನೆ ಹೊರಬೀಳಲಿದೆ ಎನ್ನಲಾಗಿದೆ. ಇದರಿಂದ ಸುಮಾರು 1.7 ಕೋಟಿ ಕಾರ್ಮಿಕರು ಲಾಭ ಪಡೆಯುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ 2022ರಲ್ಲಿ ಕಾರ್ಮಿಕ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಕನಿಷ್ಠ ವೇತನ ₹12,000 ರಿಂದ ₹20,000 ರೂಪಾಯಿವರೆಗೆ ಇರುತ್ತದೆ. ಈ ಪರಿಷ್ಕರಣೆಯಿಂದ 1.7 ಕೋಟಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ. ಹೊಸ ವೇತನ ರಚನೆಗೆ ಸಂಬಂಧಿಸಿದ ಕರಡು ಅಧಿಸೂಚನೆಯನ್ನು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಗೆ ಸಲ್ಲಿಸಲಾಗುವುದು. ಈ ಮಂಡಳಿ ವಿವಿಧ ಉದ್ಯೋಗ ವರ್ಗಗಳಿಗೆ ಶಿಫಾರಸು ಮಾಡಲಿದ್ದು, ರಾಜ್ಯ ಸರ್ಕಾರವು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಕೆಲವು ಕಾರ್ಮಿಕ ಸಂಘಟನೆಗಳು ಕನಿಷ್ಠ ವೇತನ ಪ್ರತಿ ತಿಂಗಳಿಗೆ, ₹35,000 ಹೆಚ್ಚಳ ಮಾಡುವಂತೆ ಒತ್ತಾಯಿಸುತ್ತಿವೆ. ಏಕೆಂದರೆ ದಿನದಿಂದ ದಿನಕ್ಕೆ ಜೀವನ ವೆಚ್ಚ ಹೆಚ್ಚುತ್ತಿದೆ. ಇದರಿಂದ ಕಾರ್ಮಿಕರ ವೇತನವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದು ಒತ್ತಾಯಿಸಲಾಗಿದೆ.
ಸಂತೋಷ್ ಲಾಡ್ ಹೇಳಿದ್ದೇನು..?
ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿರುವುದೇನೆಂದರೆ, ಉದ್ಯೋಗದಾತರು ಕಡಿಮೆ ವೇತನಕ್ಕೆ ಒತ್ತಾಯಿಸುತ್ತಿದ್ದರೆ, ಕಾರ್ಮಿಕರ ಹಿತದೃಷ್ಟಿಯಿಂದ ನ್ಯಾಯಯುತ ವೇತನ ನಿಗದಿಪಡಿಸಬೇಕಾಗಿದೆ. ಹೀಗಾಗಿ ಅವರ ನಿರೀಕ್ಷೆಯಂತೆ ಪರಿಷ್ಕೃತ ವೇತನ ಜಾರಿಯಾದರೆ, ಕರ್ನಾಟಕವು ಭಾರತದಲ್ಲಿ ಅತಿಹೆಚ್ಚು ಕನಿಷ್ಠ ವೇತನ ನೀಡುವ ರಾಜ್ಯವಾಗಬಹುದು ಎಂದಿದ್ದಾರೆ.
ಸದ್ಯ ದೆಹಲಿಯ ಕನಿಷ್ಠ ವೇತನ ₹17,000 ರಿಂದ ₹23,000 ರೂಪಾಯಿ ವರೆಗೆ ಇದೆ. ಕರ್ನಾಟಕದ ಹೊಸ ವೇತನವನ್ನು ಜಾರಿಗೆ ತಂದರೆ, ಇದು ದೆಹಲಿಯ ವೇತನ ಮಟ್ಟವನ್ನು ಮೀರಿ ಹೋಗಬಹುದು ಎನ್ನಲಾಗಿದೆ.
ತಾರತಮ್ಯದ ವಿರುದ್ಧ ಗಾರ್ಮೆಂಟ್ ಕಾರ್ಮಿಕರು ಆಕ್ರೋಶ:
ಕಾರ್ಮಿಕರ ಕನಿಷ್ಠ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು, ಗಾರ್ಮೆಂಟ್ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಗಾರ್ಮೆಂಟ್ ಮತ್ತು ಜವಳಿ ಕಾರ್ಮಿಕರ ಒಕ್ಕೂಟದ ಜಂಟಿ ಕಾರ್ಯದರ್ಶಿ ಜಯರಾಮ್ ಕೆ.ಆರ್. ಅವರು, ಇತರ ವಲಯದ ಕಾರ್ಮಿಕರಿಗೆ ಸರ್ಕಾರ ದಿನಕ್ಕೆ ₹651 ವೇತನ ನಿಗದಿಪಡಿಸಿದೆ, ಆದರೆ ಗಾರ್ಮೆಂಟ್ ವಲಯಕ್ಕೆ ಕೇವಲ ₹470 ಮಾತ್ರ. ಇದು ತಾರತಮ್ಯವೇ ಹೊರತು ನ್ಯಾಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ರಾಜಧಾನಿ ಬೆಂಗಳೂರು ನಗರದಲ್ಲೇ 4.5 ಲಕ್ಷ ಗಾರ್ಮೆಂಟ್ ಕಾರ್ಮಿಕರು ಇದ್ದಾರೆ. ಇವರು ನೀಡುವ ಕಡಿಮೆ ವೇತನದಿಂದ ಲಕ್ಷಾಂತರ ಜನ ಕಾರ್ಮಿಕರ ಜೀವನ ಕಷ್ಟಕರವಾಗಿದೆ. ಹಾಗೆಯೇ ಬೆಂಗಳೂರಿನಂತಹ ನಗರದಲ್ಲಿ ಜೀವನ ವೆಚ್ಚ ಹೆಚ್ಚು ಇರುವ ನಗರಗಳಲ್ಲಿ, ಕಾರ್ಮಿಕರು ಈ ಕಡಿಮೆ ವೇತನದಲ್ಲಿ ಹೇಗೆ ಬದುಕಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಆಗಲೇ ಹೇಳಿದ ಹಾಗೆ ಸರ್ಕಾರವು ಮುಂದಿನ ಎರಡು ವಾರಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ನಾವು ಕೆಲವು ನಿಯಮಗಳನ್ನು ಅನುಸರಿಸಬೇಕು, ಮತ್ತು ಅಂತಿಮ ವೇತನ ನಿಗದಿಪಡಿಸಲು ಶ್ರಮಿಸುತ್ತಿದ್ದೇವೆ. ಶೀಘ್ರದಲ್ಲೇ ಇದನ್ನು ಪರಿಷ್ಕರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಹೊಸ ಪರಿಷ್ಕರಣೆಯಿಂದ ಕರ್ನಾಟಕದ ಕಾರ್ಮಿಕರಿಗೆ ಆರ್ಥಿಕವಾಗಿ ಹೆಚ್ಚಿನ ಲಾಭ ದೊರಕುವ ನಿರೀಕ್ಷೆಯಿದೆ. ಆದರೆ ಉದ್ಯೋಗದಾತರ ನಿರೀಕ್ಷೆ ಹಾಗೂ ಕಾರ್ಮಿಕರ ಹಕ್ಕುಗಳ ನಡುವಿನ ಸಮತೋಲನವನ್ನು ಸಾಧಿಸುವುದು ಸರ್ಕಾರದ ಮುಂದೆ ದೊಡ್ಡ ಸವಾಲಾಗಿದೆ.
ಈ ನಿರ್ಧಾರ ಜಾರಿಗೆ ಬಂದ ಬಳಿಕ ಅನ್ಯ ರಾಜ್ಯಗಳಿಗೂ ಮಾದರಿಯಾಗುವ ಸಾಧ್ಯತೆ ಇದೆ. ಇಡೀ ದೇಶದಲ್ಲಿ ಕಾರ್ಮಿಕರ ಹಕ್ಕುಗಳ ಬಗ್ಗೆ ಚರ್ಚೆ ಹೆಚ್ಚಾಗಬಹುದು. ರಾಜ್ಯದ ಗೌರವಾನ್ವಿತ ಉದ್ಯೋಗದ ಭರವಸೆ ನೀಡುವತ್ತ ಒಂದು ಹೆಜ್ಜೆ ಇಡಲಾಗಿದೆ. ಆದರೆ ಇದೇ ವೇಳೆ, ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಕೂಡ ಮೂಡಲಿದೆ.


Click it and Unblock the Notifications