2020-21ನೇ ಸಾಲಿನ ಆಯವ್ಯಯ ಮಂಡನೆ ಮಾಡಿರುವ ಯಡಿಯೂರಪ್ಪ ಅವರು, ಈ ಬಾರಿ ಮಕ್ಕಳಿಗಾಗಿ ವಿಶೇಷ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿರುವುದರ ಜೊತೆಗೆ ಶಾಲಾ ಮಕ್ಕಳಿಗೆ ವಿಶೇಷ ಕೊಡುಗೆ ನೀಡಿದ್ದಾರೆ.
ಬಾಲಮಂದಿರಗಳಿಗೆ 7 ಕೋಟಿ ರುಪಾಯಿ, 7 ಹೊಸ ಬಾಲಮಂದಿರಗಳ ಸ್ಥಾಪನೆ ಮಾಡುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ನೆರೆ ಪ್ರದೇಶದ ಅಂಗನವಾಡಿಗಳ ಮರು ನಿರ್ಮಾಣ, 500 ಅಂಧ ವಿದ್ಯಾರ್ಥಿಗಳಿಗೆ ವಿಶೇಷ ಕಿಟ್, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೈಲ್ ನೀಡುವುದಾಗಿ ಬಜೆಟ್ ನಲ್ಲಿ ತಿಳಿಸಿದ್ದಾರೆ. 5 ಜಿಲ್ಲೆಗಳಲ್ಲಿ ತಾರಾಯಲಗಳ ಸ್ಥಾಪನೆ ಮಾಡಿ, ವಿಜ್ಞಾನ ಪ್ರತಿಭಾ ಶೋಧನೆ ಕಾರ್ಯಕ್ರಮ ನಡೆಸಲಾಗುವುದು. 500 ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ನೀಡಲಾಗುವುದು. ಇದಕ್ಕಾಗಿ ಮಾಸಿಕ 1 ಸಾವಿರ ರುಪಾಯಿ ಶಿಷ್ಯ ವೇತನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದರ ಜೊತೆಗೆ ಶಾಲಾ ಮಕ್ಕಳಿಗೆ ಏನೆಲ್ಲಾ ಅನುದಾನ ನೀಡಲಾಗಿದೆ ಎಂಬುದು ಈ ಕೆಳಗಿದೆ.
ಶಾಲಾ ಮಕ್ಕಳಿಗಾಗಿ 36,340 ಕೋಟಿ ಮೀಸಲು
ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಮಕ್ಕಳಿಗಾಗಿ ಬಜೆಟ್‌ನಲ್ಲಿ 36,340 ಕೋಟಿ ರುಪಾಯಿ ಮೀಸಲಿಟ್ಟಿದ್ದು, ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ 15 ಪರ್ಸೆಂಟ್‌ರಷ್ಟು ಹಣ ಮೀಸಲಿಟ್ಟಿದೆ.
ಶಾಲಾ ಮಕ್ಕಳಿಗೆ ಬ್ಯಾಗ್ ರಹಿತ ದಿನ
ಮಕ್ಕಳಿಗೆ ಪಠ್ಯವನ್ನು ಹೊರೆಯಾಗಿಸದೆ ಉಲ್ಲಾಸದಿಂದ ಕಲಿಯುವಂತೆ ಮಾಡುವ ಉದ್ದೇಶದಿಂದ ತಿಂಗಳಿನ ಎರಡು ಶನಿವಾರಗಳನ್ನು ಬ್ಯಾಗ್ ರಹಿತ ದಿನಗಳೆಂದು ಪರಿಗಣಿಸಿ "ಸಂಭ್ರಮ ಶನಿವಾರ" ಎಂದು ಆಚರಿಸಲಾಗುವುದು. ಆ ದಿನಗಳಂದು ಮಕ್ಕಳಿಗೆ ಚಟುವಟಿಕೆಗಳ ಮೂಲಕ ದೇಶದ ಉತ್ತಮ ನಾಗರಿಕರಾಗಲು ಅವಶ್ಯವಿರುವ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ.
ಆಟೋ ಚಾಲಕರ ಮಕ್ಕಳಿಗೆ ವರ್ಷಕ್ಕೆ 2,000 ರುಪಾಯಿ
ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 2,000 ರುಪಾಯಿ ನೆರವು ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದಕ್ಕಾಗಿ 40 ಕೋಟಿ ರುಪಾಯಿ ಅನುದಾನವನ್ನು ನೀಡಲಾಗುವುದು.
ರಾಜ್ಯದಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಬಸ್ ಖರೀದಿ
ರಾಜ್ಯದಲ್ಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಒದಗಿಸಲು ಕೆಎಸ್‌ಆರ್‌ಟಿಸಿ, ಈಶಾನ್ಯ ಹಾಗೂ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗಳಿಂದ 2450 ಹೊಸ ಬಸ್‌ಗಳನ್ನು ಖರೀದಿಸಲಾಗುತ್ತಿದೆ.


Click it and Unblock the Notifications