ಕಾವೇರಿ ಜಲವಿವಾದ ನ್ಯಾಯಮಂಡಳಿ (ಸಿಡಬ್ಲ್ಯುಡಿಟಿ) ಅಂತಿಮ ತೀರ್ಪಿನ ಪ್ರಕಾರ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಜನವರಿ ಮತ್ತು ಫೆಬ್ರವರಿಯ ಉಳಿದ ದಿನಗಳಲ್ಲಿ ತಮಿಳುನಾಡಿಗೆ ನದಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಗುರುವಾರ ಕರ್ನಾಟಕಕ್ಕೆ ಆದೇಶಿಸಿದೆ.
ಸಿಡಬ್ಲ್ಯುಆರ್‌ಸಿ ಅಧ್ಯಕ್ಷ ವಿನೀತ್ ಗುಪ್ತಾ ನೇತೃತ್ವದಲ್ಲಿ ಕಾವೇರಿ ಜಲಾನಯನ ಪ್ರದೇಶದ ನೀರು ಮತ್ತು ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ನಡೆಸಲಾಗಿದೆ. ಜನವರಿಯಲ್ಲಿ ಉಳಿದ ದಿನಗಳಿಗೆ ದಿನಕ್ಕೆ 1,182 ಕ್ಯೂಸೆಕ್ ಮತ್ತು ಇಡೀ ಫೆಬ್ರವರಿಗೆ ಪ್ರತಿ ದಿನ 998 ಕ್ಯೂಸೆಕ್ ನೀರು ಬಿಡುವಂತೆ ಸಿಡಬ್ಲ್ಯೂಆರ್‌ಸಿ ಕರ್ನಾಟಕಕ್ಕೆ ಕೇಳಿದೆ.

ಸಭೆಯಲ್ಲಿ ತಮಿಳುನಾಡು ಕರ್ನಾಟಕಕ್ಕೆ ಜನವರಿ 19 ರಿಂದ 2024 ರ ಮೇ ಅಂತ್ಯದವರೆಗೆ 7.61 ಸಾವಿರ ಮಿಲಿಯನ್ ಕ್ಯೂಬಿಕ್ ಫೀಟ್ (tmcft) ಬಾಕಿ ಸೇರಿದಂತೆ 19 ಸಾವಿರ ಮಿಲಿಯನ್ ಕ್ಯೂಬಿಕ್ ಫೀಟ್ ನೀರು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ.
ತಮಿಳುನಾಡಿಗೆ ಇನ್ನು ಮುಂದೆ ನೀರು ಬಿಡಲು ಸಾಧ್ಯವಾಗದು ಎಂದು ಕರ್ನಾಟಕ ಹೇಳಿಕೊಂಡಿದೆ. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ನಾಲ್ಕು ಜಲಾಶಯಗಳು ಸಂಗ್ರಹಣೆಯಲ್ಲಿ ಒಟ್ಟು ಶೇಕಡ 52 ರಷ್ಟು ಕೊರತೆಯಿದೆ ಎಂದು ಕರ್ನಾಟಕ ಸಭೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗುವವರೆಗೆ ಕುಡಿಯುವ ನೀರು ಮತ್ತು ನೀರಾವರಿಯ ಬೇಡಿಕೆಯನ್ನು ಪೂರೈಸಲು ಕಾವೇರಿ ಜಲಾನಯನ ಜಲಾಶಯಗಳಲ್ಲಿ ಲಭ್ಯವಿರುವ ನೀರು ಅಗತ್ಯವಿದೆ ಎಂದು ಕರ್ನಾಟಕ ವಾದಿಸಿದೆ.
ಈ ಹಿಂದೆ ನವೆಂಬರ್ 1 ರಿಂದ 15ರವರೆಗೆ ಪ್ರತಿ ದಿನ 2600 ಕ್ಯುಸೆಕ್ ನೀರು ಹರಿಸಬೇಕು ಎಂದು ಕರ್ನಾಟಕಕ್ಕೆ ಮತ್ತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸೂಚನೆಯನ್ನು ನೀಡಿದೆ. ಅದಕ್ಕೂ ಮುನ್ನ ಅಕ್ಟೋಬರ್ ಅಂತ್ಯಕ್ಕೆ ಪ್ರತಿ ದಿನ 3 ಸಾವಿರ ಕ್ಯುಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿತ್ತು. ಆದೇಶದ ಅವಧಿ ಮುಕ್ತಾಯವಾಗುತ್ತಿದ್ದಂತೆ ನವೆಂಬರ್‌ನಲ್ಲಿ ನೀರು ಬಿಡಲು ಸೂಚಿಸಲಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿವಾದ ಪರಿಹರಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ರಚನೆ ಮಾಡಲಾದ ಕಾವೇರಿ ನೀರು ನಿಯಂತ್ರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸುತ್ತದೆ. ಹಾಗೆಯೇ ನೀರು ಬಿಡುವ ವಿಚಾರದಲ್ಲಿ ಕರ್ನಾಟಕಕ್ಕೆ ಆದೇಶವನ್ನು ನೀಡುತ್ತದೆ.


Click it and Unblock the Notifications