ಡಿಸೆಂಬರ್ 11 ಮತ್ತು ಡಿಸೆಂಬರ್ 12 ರಂದು ಬೆಂಗಳೂರು ಸೇರಿದಂತೆ ಒಟ್ಟಾಗಿ 12 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ. ಡಿಸೆಂಬರ್ 13 ರಂದು ಕೂಡಾ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ನೀಡಿದೆ.
ಡಿಸೆಂಬರ್ 11ರಂದು ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ಇತ್ತು. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಿನ್ನೆ ಮುಂಜಾನೆ ಭಾರೀ ಮಳೆಯಾಗಿದೆ. ಉಳಿದಂತೆ ಹವಾಮಾನ ಇಲಾಖೆಯ ಅಂದಾಜಿನಂತೆಯೇ ಕರಾವಳಿ ಪ್ರದೇಶದಲ್ಲಿ ಮಳೆಯಾಗಿದೆ.

ಯಾವೆಲ್ಲ ಪ್ರದೇಶದಲ್ಲಿ ಮಳೆಯಾಗಿದೆ?
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮಾಣಿ, ಪಣಂಬೂರು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಸಿದ್ಧಾಪುರ, ಹರದನಹಳ್ಳಿ ಕೆವಿಕೆ, ಕುಶಾಲನಗರದಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಧರ್ಮಸ್ಥಳದಲ್ಲಿ ಮಾತ್ರ ಭಾರೀ ಮಳೆಯಾಗಿದೆ.
ಇನ್ನು ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್ ಆಗಿದ್ದು, ಇದು ವಿಜಯಪುರ ಮತ್ತು ಬೀದರ್‌ನಲ್ಲಿ ದಾಖಲಾಗಿದೆ. ಮುಂದಿನ 24 ಮತ್ತು 48 ಗಂಟೆಗಳ ಅವಧಿಯಲ್ಲಿ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆಯಿದೆ. ಉತ್ತರ ಒಳನಾಡಿನಲ್ಲಿ ಒಣಹವೆಯ ಸಾಧ್ಯತೆಯಿದೆ.
ಇನ್ನು ಹವಾಮಾನ ಇಲಾಖೆಯು ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ ಗುಡುಗು ಬರುವ ಮುನ್ನೆಚ್ಚರಿಕೆಯನ್ನು ನೀಡಿಲ್ಲ. ಭಾರೀ ಮಳೆ, ತಾಪಮಾನ ಏರಿಳಿತ ಎಚ್ಚರಿಕೆಯನ್ನು ಕೂಡಾ ನೀಡಿಲ್ಲ. ಹಾಗೆಯೇ ಮೀನುಗಾರರಿಗೂ ಯಾವುದೇ ಎಚ್ಚರಿಕೆಯನ್ನು ನೀಡಲಾಗಿಲ್ಲ.
ಡಿಸೆಂಬರ್ 13 ರ ಮುನ್ಸೂಚನೆ
ಮುಂದಿನ 24 ಗಂಟೆಗಳ ಅವಧಿಯಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಆಗಿದೆ.
ಭಾರತದಲ್ಲಿ ಹವಾಮಾನ ಹೇಗಿದೆ?
ಚಳಿಗಾಲವು ಭಾರತದಲ್ಲಿ ತನ್ನ ಹಿಡಿತ ಸಾಧಿಸುತ್ತಿದೆ. ಉತ್ತರ ಭಾರತದ ಹಲವಾರು ಪ್ರದೇಶಗಳು ತೀವ್ರವಾದ ಶೀತದ ಅಲೆಯಿದೆ. ಕೆಲವು ಪ್ರದೇಶಗಳಲ್ಲಿ ತಾಪಮಾನವು ಶೂನ್ಯಕ್ಕಿಂತ ಕಡಿಮೆಯಾಗಿದೆ. ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಸುಂದರವಾದ ಗುಡ್ಡಗಾಡು ಪ್ರದೇಶಗಳು ಹಿಮದಿಂದ ಆವೃತವಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಕೇರಳ ಮತ್ತು ಮಾಹೆಯಲ್ಲಿ ಲಘುವಾಗಿ ಮಳೆಯಾಗುವ ನಿರೀಕ್ಷೆಯಿದೆ. ಜೊತೆಗೆ ಗುಡುಗು, ಮಿಂಚು ಮತ್ತು ಜೋರಾದ ಗಾಳಿಯ ಮುನ್ಸೂಚನೆಯಿದೆ. ಸಿಕ್ಕಿಂನಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ.
ವಿವಿಧ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಲಿದೆ. ಡಿಸೆಂಬರ್ 12-13 ರಂದು ಪಂಜಾಬ್ ಮತ್ತು ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮತ್ತು ಡಿಸೆಂಬರ್ 12-14 ರವರೆಗೆ ಕೆಲವು ಪ್ರದೇಶಗಳಲ್ಲಿ ದಟ್ಟವಾದ ಮಂಜಿನ ಮುನ್ಸೂಚನೆ ಇದೆ.


Click it and Unblock the Notifications