ಬೆಂಗಳೂರು, ಅಕ್ಟೋಬರ್ 31: ಕರ್ನಾಟಕ ಸರ್ಕಾರ ಕೈಗಾರಿಕಾ ನೀತಿ 2025-2030 ಜಾರಿಗೊಳಿಸಲು ತಯಾರಿ ನಡೆಸುತ್ತಿದೆ. ಈ ಹೊಸ ನೀತಿ ಉದ್ಯೋಗ ಸೃಷ್ಟಿ, ಮಹಿಳಾ ಉದ್ಯೋಗಿಗಳಿಗೆ ಆದ್ಯತೆ, ಹೂಡಿಕೆಗಳಿಗೆ ಉತ್ತೇಜನ, ಬೆಂಗಳೂರಿನ ಆಚೆಗೆ ಕೈಗಾರಿಕಾ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶಗಳನ್ನು ಹೊಂದಿದೆ.
ಕರ್ನಾಟಕದ ಹೊಸ ಕೈಗಾರಿಕಾ ನೀತಿ ಕುರಿತು ಮನಿ ಕಂಟ್ರೋಲ್ ವರದಿ ಮಾಡಿದೆ. ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮೂಲಗಳ ಮಾಹಿತಿ ಪ್ರಕಾರ ಹೊಸ ನೀತಿ ಉದ್ಯೋಗ ಆಧಾರಿತ ಪ್ರೋತ್ಸಾಹಗಳಿಗೆ ಆದ್ಯತೆ ನೀಡಲಿದೆ. ಉದ್ಯೋಗ ಸೃಷ್ಟಿ ನೀತಿಯ ಕೇಂದ್ರವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಹೂಡಿಕೆ ಮಾಡುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಕಂಪನಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಉದ್ಯಮದಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ಹೆಚ್ಚಿಸಲು ಕಂಪನಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹೊಸ ಕೈಗಾರಿಕಾ ನೀತಿ ಭಾರತದಲ್ಲಿ ಅತಿದೊಡ್ಡ ಉದ್ಯೋಗ ಸೃಷ್ಟಿಕರ್ತರಾಗಿರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಲಾಭವಾಗುವಂತೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ನಾವು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ವಿಶೇಷವಾಗಿ ಎಫ್‌ಎಂಸಿಜಿ, ಎಲೆಕ್ಟ್ರಾನಿಕ್ಸ್, ಪಾದರಕ್ಷೆ ಮತ್ತು ಚರ್ಮದ ವಸ್ತುಗಳಂತಹ ಕ್ಷೇತ್ರಗಳಲ್ಲಿ ಗಮನ ಹರಿಸುತ್ತಿದ್ದೇವೆ. ಎಫ್‌ಎಂಸಿಜಿ ಉದ್ಯೋಗದಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಮತ್ತು ನಾವು ಉದ್ಯೋಗ ಸೃಷ್ಟಿಗೆ ಮಾತ್ರವಲ್ಲದೆ ಮಹಿಳಾ ಉದ್ಯೋಗವನ್ನು ಹೆಚ್ಚಿಸಲು ಸಹ ಪ್ರೋತ್ಸಾಹ ನೀಡಲು ಬಯಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ನೀತಿ ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನಹರಿಸಲಿದೆ. ವಿದ್ಯುತ್ ವಾಹನಗಳು, ಕೃತಕ ಬುದ್ಧಿಮತ್ತೆ, ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ರೋಬೋಟಿಕ್ಸ್ ಇವು ಆರ್ಥಿಕತೆಗೆ ಸಹಾಯ ಮಾಡಲಿವೆ. ಕರ್ನಾಟಕ ಸರ್ಕಾರದ ಈ ಹೊಸ ಕೈಗಾರಿಕಾ ನೀತಿಯನ್ನು ಫೆಬ್ರವರಿ 12 ರಿಂದ 14ರ ತನಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಹೂಡಿಕೆದಾರರು, ಉದ್ಯಮಿಗಳು, ಉದ್ಯೋಗಸ್ಥರು ಹೀಗೆ ವಿವಿಧ ಭಾಗೀದಾರರ ಜೊತೆ ಕೈಗಾರಿಕಾ ನೀತಿ 2025-2030 ತಯಾರಿ ಮಾಡಲು ಸರಣಿ ಸಭೆಗಳನ್ನು ನಡೆಸಿ, ಕರಡು ತಯಾರಿಸಲಾಗಿದೆ. ಈ ಸಭೆಗಳಲ್ಲಿಯೇ ಬೆಂಗಳೂರಿನ ಆಚೆಗೆ ಕೈಗಾರಿಕಾ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದ್ದರಿಂದ ಎರಡನೇ ಹಂತದ ನಗರಗಳಲ್ಲಿಯೂ ಕೈಗಾರಿಕಾ ಅಭಿವೃದ್ಧಿಗೆ ಆದ್ಯತೆಯನ್ನು ನೀಡಲಾಗುತ್ತದೆ.
ಕರ್ನಾಟಕದ 9 ಪ್ರಮುಖ ವಲಯಗಳ ವಿಷನ್ ಗ್ರೂಪ್ ಸಭೆಗಳನ್ನು ಕರಡು ನೀತಿ ರಚನೆಗೆ ಮೊದಲು ನಡೆಸಲಾಗಿದೆ. ಈ ಸಭೆಯಲ್ಲಿ ಏರೋಸ್ಫೇಸ್, ರಕ್ಷಣೆ, ಮೆಷಿನ್ ಟೂಲ್ಸ್, ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ, ತಯಾರಿಕೆ ವಿಭಾಗದ ಪ್ರಮುಖರು ಪಾಲ್ಗೊಂಡಿದ್ದರು. ಉಕ್ಕು ಮತ್ತು ಕಬ್ಬಿಣ ತಯಾರಿಕೆಯ ಪ್ರಮುಖ ಕಂಪನಿಗಳು ಸಲಹೆಗಳನ್ನು ನೀಡಿವೆ. ಈ ನೀತಿ ಭವಿಷ್ಯದ ಸಾರಿಗೆ, ಆಹಾರ ಸಂಸ್ಕರಣೆ, ಜವಳಿ ಉದ್ಯಮ ಮತ್ತು ಸಾರಕು ಸಾಗಣೆ ಕುರಿತು ಸಹ ಹಲವಾರು ಸಲಹೆಗಳನ್ನು ನೀಡಿದೆ.
ಈ ನೀತಿ ಬೆಂಗಳೂರು ನಗರದ ಹೊರಗೆ ಉದ್ಯಮಗಳನ್ನು ಆಕರ್ಷಿಸಲು ಹೊಸ ಹೊಸ ಆಯ್ಕೆ ನೀಡುವ ಉದ್ದೇಶವನ್ನು ಹೊಂದಿದೆ. ದಾಬಾಸ್‌ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ನಾಲೆಡ್ಜ್ ಸಿಟಿ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಇದು ಕೈಗಾರಿಕಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಯುವಕ/ ಯುವತಿಯರಿಗೆ ಸೂಕ್ತ ತರಬೇತಿಯನ್ನು ನೀಡಲಿದೆ.
ಕರ್ನಾಟಕ ಸರ್ಕಾರ ಪರಿಸರ ಕಾಪಾಡುವ, ಇಂಧನ ಮರುಬಳಕೆ ಮಾಡುವ, ವಿದ್ಯುತ್ ಮೇಲಿನ ವೆಚ್ಚವನ್ನು ಕಡಿಮೆ ಮಾಡುವ ಹೂಡಿಕೆಗಳನ್ನು ಆಕರ್ಷಿಸಲು ಮುಂದಾಗಿದೆ. ಅಮೆರಿಕ ಮತ್ತು ಯುರೋಪ್‌ನ ಅನೇಕ ರಾಷ್ಟ್ರಗಳು ಹಸಿರು ಉಳಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಲು ಆದ್ಯತೆ ನೀಡಿದ್ದು, ಇದೇ ಮಾದರಿಯಲ್ಲಿ ಇಲ್ಲಿಯೂ ಸಹ ಹೂಡಿಕೆ ಆಕರ್ಷಿಸಲಾಗುತ್ತದೆ.
ಅಲ್ಲದೇ ಈ ನೀತಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. 2032ರ ಕೈಗಾರಿಕಾ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಹೂಡಿಕೆಯನ್ನು ಆಕರ್ಷಿಸಲಿದೆ. ಬೆಂಗಳೂರು ನಗರ ಹೊರತುಪಡಿಸಿ 25 ಲಕ್ಷ ಉದ್ಯೋಗ ಸೃಷ್ಟಿ ಸರ್ಕಾರದ ಆದ್ಯತೆ ಆಗಲಿದೆ.


Click it and Unblock the Notifications