ನಷ್ಟದೊಂದಿಗೆ ಸಾಗುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಅನ್ನು ಲಾಭದೆಡೆಗೆ ಕೊಂಡೊಯ್ಯಲು ಹಲವಾರು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈಗಾಗಲೇ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ಕೆಎಸ್‌ಆರ್‌ಟಿಸಿ ಬೊಕ್ಕಸವನ್ನು ತುಂಬುತ್ತಿದೆ.
ಈ ನಡುವೆ ಮತ್ತೊಂದು ಕ್ರಮವನ್ನು ಕೈಗೊಳ್ಳಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಹೌದು, ಈ ಕೆಎಸ್‌ಆರ್‌ಟಿಸಿ ಪಾರ್ಸೆಲ್ ಸೇವೆಯನ್ನು ಆರಂಭ ಮಾಡಲು ಮುಂದಾಗಿದೆ. ಅದಕ್ಕಾಗಿ 20 ಟ್ರಕ್‌ಗಳನ್ನು ಕೂಡಾ ಖರೀದಿ ಮಾಡಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಡಿಸೆಂಬರ್ 15 ರ ಒಳಗಾಗಿ ಇದು ಕಾರ್ಯಾರಂಭ ಮಾಡಲಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಬಸ್‌ನಲ್ಲಿ ಲಗೇಜ್ ಪಾರ್ಸೆಲ್
ದಶಕಗಳ ಹಿಂದೆಯೇ ಬಸ್‌ಗಳಲ್ಲಿ ಲಗೇಜ್ ಕೊಂಡೊಯ್ದು ಆದಾಯವನ್ನು ಪಡೆಯಲು ಕೆಎಸ್‌ಆರ್‌ಟಿಸಿ ತೀರ್ಮಾನ ಮಾಡಿತ್ತು. ಆರಂಭಿಕವಾಗಿ ಡಿಕ್ಕಿಯಲ್ಲಿ ಸಣ್ಣ ಪಾರ್ಸೆಲ್‌ಗಳನ್ನು ಒಯ್ಯುಲು ಆರಂಭಿಸಿದ್ದು, 109 ನಿಲ್ದಾಣಗಳಲ್ಲಿ ಮಾತ್ರ ಈ ಸೇವೆಯಿತ್ತು. ಆದರೆ ನಂತರ ಈ ಸೇವೆಯನ್ನು ಎಲ್ಲ ಬಸ್ ನಿಲ್ದಾಣಗಳಿಗೆ ವಿಸ್ತರಿಸಲಾಗಿದೆ.
ಬಸ್‌ನಲ್ಲಿ ಸಣ್ಣ ಪಾರ್ಸೆಲ್ ಕೊಂಡೊಯ್ಯುವುದರ ಮೂಲಕವೇ ವಾರ್ಷಿಕವಾಗಿ ಕೆಎಸ್‌ಆರ್‌ಟಿಸಿ 4 ಕೋಟಿ ರೂಪಾಯಿಯಷ್ಟು ಆದಾಯವನ್ನು ಪಡೆಯಿತು. ಇದಾದ ಬಳಿಕ ಖಾಸಗಿ ಏಜೆನ್ಸಿಗಳ ಜೊತೆ ಒಪ್ಪಂದವನ್ನು ಮಾಡಿಕೊಂಡು ಕಾರ್ಗೊ ಸೇವೆಯನ್ನು ವಿಸ್ತರಣೆ ಮಾಡಿತು.
ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಏಜೆನ್ಸಿಯ ಒಪ್ಪಂದದ ಪ್ರಕಾರ ಈ ಕಾರ್ಗೊ ಸೇವೆಯಿಂದ ಬರುವ ಆದಾಯದಲ್ಲಿ ಶೇಕಡ 80 ರಷ್ಟು ಪಾಲು ಕೆಎಸ್‌ಆರ್‌ಟಿಸಿಗೆ ಮತ್ತು ಶೇಕಡ 20 ರಷ್ಟು ಪಾಲು ಏಜೆನ್ಸಿಗೆ ಸೇರುತ್ತದೆ. ಈ ಮೂಲಕವೇ ಕೆಎಸ್‌ಆರ್‌ಟಿಸಿ ಪ್ರಸ್ತುತ ತಿಂಗಳಿಗೆ ಸುಮಾರು 1.10 ಕೋಟಿ ರೂಪಾಯಿ, ವಾರ್ಷಿಕವಾಗಿ 13.20 ಕೋಟಿ ರೂಪಾಯಿ ಆದಾಯವನ್ನು ಪಡೆಯುತ್ತಿದೆ.
ಪ್ರಸ್ತುತ ಕೆಎಸ್‌ಆರ್‌ಟಿಸಿಯ ಪಾರ್ಸೆಲ್ ಸೇವೆಯಡಿಯಲ್ಲಿ ನಾವು ಬಸ್‌ಗಳಲ್ಲಿ ಒಯ್ಯುವ ಪಾರ್ಸೆಲ್‌ಗಳನ್ನು ಬಸ್ ನಿಲ್ದಾಣಗಳಿಗೆ ಬಂದು ಪಡೆಯಬೇಕಾಗಿದೆ. ಆದರೆ ಈ ಟ್ರಕ್‌ನಲ್ಲಿ ಪಾರ್ಸೆಲ್ ಕೊಂಡೊಯ್ಯುವ ಸೇವೆಯು ಆರಂಭವಾದರೆ, ನಾವು ಯಾವ ವಿಳಾಸ ಹಾಕಿರುತ್ತೇವೆಯೂ ಆ ಸ್ಥಳಕ್ಕೆ ಪಾರ್ಸೆಲ್ ಬರಲಿದೆ. ಇದರೊಂದಿಗೆ ಕೆಎಸ್‌ಆರ್‌ಟಿಸಿಯ ಆದಾಯವು ಕೂಡಾ ಅಧಿಕವಾಗಲಿದೆ.
ನೂತನ ಪಾರ್ಸೆಲ್ ಟ್ರಕ್ ಹೇಗಿರಲಿದೆ?
ನಾವು ಸಾಮಾನ್ಯವಾಗಿ ಕೊರಿಯರ್ ಸಂಸ್ಥೆಗಳ ಮುಖಾಂತರ ಪಾರ್ಸೆಲ್ ಮಾಡಿಸುತ್ತೇವೆ. ಆದರೆ ಕೆಎಸ್‌ಆರ್‌ಟಿಸಿಯ ಟ್ರಕ್ ಪಾರ್ಸೆಲ್ ಸೇವೆ ಆರಂಭವಾದ ಬಳಿಕ ಇದರ ಮೂಲಕವೇ ಪಾರ್ಸೆಲ್ ತಲುಪಿಸಬಹುದಾಗಿದೆ. ಈ ಸೇವೆಗಾಗಿ ಈಗಾಗಲೇ ಆಕರ್ಷಕವಾದ, ಉತ್ತಮ ಗುಣಮಟ್ಟದ ಟ್ರಕ್‌ಗಳನ್ನು ಆಯ್ಕೆ ಮಾಡಲಾಗಿದೆ. ಟಾಟಾ ಸಂಸ್ಥೆಯ ಪುಣೆಯ ಶಾಖೆಯಲ್ಲಿ ಈ ಟ್ರಕ್‌ಗಳನ್ನು ತಯಾರಿಸಲಾಗುತ್ತಿದೆ. ಒಂದು ತಿಂಗಳ ಒಳಗಾಗಿ ಕೆಎಸ್‌ಆರ್‌ಟಿಸಿಗೆ 20 ಟ್ರಕ್‌ಗಳನ್ನು ಟಾಟಾ ಸಂಸ್ಥೆಯು ತಲುಪಿಸಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಲ ನಿರ್ದೇಶಕ ವಿ ಅನುಬ್ ಕುಮಾರ್, "ಟ್ರಕ್‌ಗಳಲ್ಲಿ ಪಾರ್ಸೆಲ್ ಸೇವೆಯನ್ನು ಮೊದಲ ಬಾರಿಗೆ ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಕೆಎಸ್‌ಆರ್‌ಟಿಸಿ ಜನರ ವಿಶ್ವಾಸ, ನಂಬಿಕೆಯನ್ನು ಗಳಿಸಿದೆ. ಈಗ ಪಾರ್ಸೆಲ್ ಸಾಗಾಟಕ್ಕೂ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುವ ಸಾಧ್ಯತೆಯಿದೆ," ಎಂದು ತಿಳಿಸಿದರು.
ಬಸ್‌ಗಳಲ್ಲಿಯೂ ಪಾರ್ಸೆಲ್ ಅಧಿಕಗೊಳಿಸಲು ನಿರ್ಧಾರ
ಕೆಎಸ್‌ಆರ್‌ಟಿಸಿ ಟ್ರಕ್‌ಗಳನ್ನು ಖರೀದಿ ಮಾಡಿ ಪಾರ್ಸೆಲ್ ಸೇವೆಯನ್ನು ಆರಂಭ ಮಾಡುವ ಜೊತೆಗೆಯೇ ಪ್ರಸ್ತುತ ಇರುವ ಬಸ್‌ಗಳ ಪಾರ್ಸೆಲ್ ಸೇವೆಯನ್ನು ಕೂಡಾ ಹೆಚ್ಚಿಸುವ ನಿರ್ಧಾರ ಮಾಡಿದೆ. ಪ್ರಸ್ತುತ 800 ಬಸ್‌ಗಳಲ್ಲಿ ಪಾರ್ಸೆಲ್ ಸಾಗಾಟವನ್ನು ಮಾಡಲಾಗುತ್ತಿದೆ. ಮುಂದೆ ಎಲ್ಲ ಬಸ್‌ಗಳಲ್ಲಿ ಪಾರ್ಸೆಲ್ ಸೇವೆಯನ್ನು ಆರಂಭಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ನಾಲ್ಕು ವರ್ಷದಲ್ಲೇ ಈ ಸೇವೆಯನ್ನು 4000 ಬಸ್‌ಗಳಿಗೆ ವಿಸ್ತರಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.


Click it and Unblock the Notifications